NEP ವಿರುದ್ಧ ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಕಾಂಗ್ರೆಸ್ ಸದಸ್ಯರು

Prasthutha|

ಬೆಂಗಳೂರು: ವಿಧಾನಸಭೆಯಲ್ಲಿಂದು ರಾಷ್ಟ್ರೀಯ ಶಿಕ್ಷಣ ನೀತಿ-ಎನ್ಇಪಿ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷ ಸದಸ್ಯರ ನಡುವೆ ತೀವ್ರ ವಾಗ್ಯುದ್ಧಕ್ಕೆ ಕಾರಣವಾಯಿತು. ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ, ಸಭಾಧ್ಯಕ್ಷರ ಪೀಠದ ಎದುರು ಬಾವಿಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

- Advertisement -

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ನ ಎಲ್ಲ ಮುಖಂಡರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ ಘೋಷಣೆ ಕೂಗಿದರು. ನೂತನ ಶಿಕ್ಷಣ ನೀತಿಯ ಬಗ್ಗೆ ಚರ್ಚೆಗೆ ಅವಕಾಶ ನೀಡದ ಕ್ರಮಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೇರಿ ಹಲವು ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದರು.


ಆರು ತಿಂಗಳ ಬಳಿಕ ಕಲಾಪ ನಡೆಯುತ್ತಿದೆ. ಇನ್ನೂ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಬೇಕಿದೆ. ಪ್ರಮುಖವಾಗಿ ರಾಷ್ಟ್ರೀಯ ಶಿಕ್ಷಣ ನೀತಿ ಕುರಿತು ಮಾತನಾಡಬೇಕಿದೆ. ನಮ್ಮ ಮಕ್ಕಳ ಭವಿಷ್ಯ ಇದರಲ್ಲಿ ಅಡಗಿದೆ ಎಂದು ಸಿದ್ದರಾಮಯ್ಯ ಹೇಳಿದರು. ಕಲಾಪವನ್ನು ಮುಂದುವರಿಸಲು ಸಿದ್ದರಾಮಯ್ಯ ಒತ್ತಾಯಿಸುತ್ತಿದ್ದ ಸಂದರ್ಭದಲ್ಲಿ ಎದ್ದು ನಿಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ‘ಇದು ರಾಷ್ಟ್ರೀಯ ಶಿಕ್ಷಣ ನೀತಿಯಲ್ಲ, ನಾಗ್ಪುರ ಶಿಕ್ಷಣ ನೀತಿ’ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಕಾಗೇರಿ, ‘ನಾಗ್ಪುರ ಶಿಕ್ಷಣ ನೀತಿಯಾಗಲಿ, ಆರ್ ಎಸ್ ಎಸ್ ಶಿಕ್ಷಣ ನೀತಿಯೇ ಆಗಲಿ, ಅದರಿಂದ ಒಳ್ಳೆಯದು ಆಗುವುದಿದ್ದರೆ ಆಗಲಿ ಬಿಡಿ’ ಎಂದು ಹೇಳಿದರು.
ಅದಕ್ಕೆ ಪ್ರತ್ಯುತ್ತರ ನೀಡಿದ ಸಿದ್ದರಾಮಯ್ಯ, ‘ನೀವು ಆರ್ ಎಸ್ ಎಸ್ ಪರ ಇದ್ದೀರಿ’ ಎಂದು ಕುಟುಕಿದರು. ಆಗ ಕಾಗೇರಿ ‘ಹೌದು, ನಾನು ಆರ್ ಎಸ್ ಎಸ್ ಪರ ಇದ್ದೀನಿ’ ಎಂದು ಹೇಳಿದರು.

- Advertisement -


ಈ ಕೋಲಾಹಲದ ನಡುವೆ ಎದ್ದು ನಿಂತ ಸಿಎಂ ಬಸವರಾಜ ಬೊಮ್ಮಾಯಿ, ಆರ್ ಎಸ್ ಎಸ್ ಮತ್ತು ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಸಮರ್ಥಿಸಿಕೊಂಡರು. ಆರ್ ಎಸ್ ಎಸ್ ಪರ- ವಿರೋಧದ ಘೋಷಣೆಗಳು ಕಲಾಪದಲ್ಲಿ ಮೊಳಗಿದವು. ಸದನದ ಬಾವಿಗಿಳಿದು ಕಾಂಗ್ರೆಸ್ ಸದಸ್ಯರು ಷೋಷಣೆ ಕೂಗಿದರು. ಪ್ರತಿಪಕ್ಷಗಳ ನಾಯಕರ ವಿರೋಧದ ಹೊರತಾಗಿಯು ಅನಿರ್ದಿಷ್ಟಾವಧಿಗೆ ಕಲಾಪವನ್ನು ಮುಂದೂಡಲಾಗಿದೆ ಎಂದು ಕಾಗೇರಿ ಘೋಷಿಸಿದರು.


ಹೇಮಾವತಿ ಅಣೆಕಟ್ಟೆಯಿಂದ ಕುಣಿಗಲ್ ಲಿಂಕ್ ಕೆನಾಲ್ ಗೆ ನೀರು ಹರಿಸಲು ಆಗ್ರಹಿಸಿ ಕುಣಿಗಲ್ ಶಾಸಕ ಡಾ. ರಂಗನಾಥ್, ರಾಷ್ಟ್ರೀಯ ಶಿಕ್ಷಣ ನೀತಿ ವಿರೋಧಿಸಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ವಿಧಾನಸಭೆಯಲ್ಲಿ ಭಿತ್ತಿಪತ್ರ ಪ್ರದರ್ಶಿಸಿ, ಸಭಾಧ್ಯಕ್ಷರ ಪೀಠದ ಎದುರು ಬಾವಿಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

Join Whatsapp