ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತ ಕಬಳಿಸಿರುವುದರಿಂದ ಗುಜರಾತ್’ನಲ್ಲಿ ಕಾಂಗ್ರೆಸ್’ಗೆ ಸೋಲು: ಸಿದ್ದರಾಮಯ್ಯ

Prasthutha|

ಬೆಂಗಳೂರು: ಹೆಚ್ಚಿನ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ಕಾಂಗ್ರೆಸ್ ಮತಗಳನ್ನು ಕಬಳಿಸಿರುವುದರಿಂದ ಗುಜರಾತ್ ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

- Advertisement -

ಗುಜರಾತ್ ಹಾಗೂ ಹಿಮಾಚಲ ಪ್ರದೇಶ ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ನನಗಿದ್ದ ಮಾಹಿತಿ ಪ್ರಕಾರ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ ಇದೆ ಮತ್ತು ಗುಜರಾತ್ ನಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬುದಾಗಿತ್ತು. ಗುಜರಾತ್ ನಲ್ಲಿ ಬಿಜೆಪಿ ಗೆದ್ದಿರುವುದರಲ್ಲಿ ಆಶ್ಚರ್ಯ ಇಲ್ಲ, ಆಮ್ ಆದ್ಮಿ ಪಕ್ಷದವರು ಸ್ಪರ್ಧೆ ಮಾಡಿ, ನಮ್ಮ ಮತಗಳನ್ನು ಪಡೆದುಕೊಂಡಿದ್ದಾರೆ, ಬಹುತೇಕ ಕ್ಷೇತ್ರಗಳಲ್ಲಿ ಆಮ್ ಆದ್ಮಿ ಪಕ್ಷ ನಮ್ಮ ಮತಗಳನ್ನೇ ಕಬಳಿಸಿದೆ. ಇದರಿಂದ ಗುಜರಾತ್ ನಲ್ಲಿ ಹಿನ್ನಡೆಯಾಗಿದೆ. ಆದರೆ ಹಿಮಾಚಲ ಪ್ರದೇಶದಲ್ಲಿ ಈ ರೀತಿ ಆಗಿಲ್ಲ. ಕಾಂಗ್ರೆಸ್ ಪಕ್ಷ ಮುನ್ನಡೆಯಲ್ಲಿದೆ, ಹಾಗೆಯೇ ಕಾಂಗ್ರೆಸ್ ಬಹುಮತ ಪಡೆಯಲಿದೆ ಎಂಬ ಮಾಹಿತಿ ಇದೆ ಎಂದರು.

ಒಂದು ರಾಜ್ಯದ ಚುನಾವಣಾ ಫಲಿತಾಂಶ ಇನ್ನೊಂದು ರಾಜ್ಯದ ಚುನಾವಣಾ ಫಲಿತಾಂಶದ ಮೇಲೆ ಪ್ರಭಾವ ಬೀರಲ್ಲ. ಹಾಗೆ ಯೋಚಿಸುವುದಾದರೆ ದೆಹಲಿಯ ಪಾಲಿಕೆ ಚುನಾವಣೆಯ ಫಲಿತಾಂಶ ಬೇರೆ ರಾಜ್ಯಗಳ ಮೇಲೆ ಪ್ರಭಾವ ಬೀರುತ್ತಾ? ಪಶ್ಚಿಮ ಬಂಗಾಳ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ ಚುನಾವಣೆಯ ಫಲಿತಾಂಶ ಬೇರೆ ಕಡೆ ಪ್ರಭಾವ ಬೀರುತ್ತದಾ? ಆಯಾ ರಾಜ್ಯದ ಸಮಸ್ಯೆಗಳು ಮತ್ತು ಸ್ಥಳೀಯ ವಿಚಾರಗಳ ಮೇಲೆ ಫಲಿತಾಂಶ ನಿರ್ಧಾರವಾಗುತ್ತದೆ. ನಮ್ಮ ರಾಜ್ಯದಲ್ಲಿ ಅತೀ ಭ್ರಷ್ಟ ಸರ್ಕಾರವಿದೆ, ಇಲ್ಲಿ ಕಾಂಗ್ರೆಸ್ ಪಕ್ಷ ಸಂಘಟನಾ ದೃಷ್ಟಿಯಿಂದ ಹೆಚ್ಚು ಶಕ್ತಿಶಾಲಿಯಾಗಿದೆ. ಹಾಗಾಗಿ ಬೇರೆ ರಾಜ್ಯಗಳ ಫಲಿತಾಂಶ ಇಲ್ಲಿನ ಚುನಾವಣೆಯ ಮೇಲೆ ಯಾವ ಪ್ರಭಾವ ಬೀರಲ್ಲ ಎಂಬುದು ನನ್ನ ಅನಿಸಿಕೆ ಎಂದು ಸಿದ್ದರಾಮಯ್ಯ ಹೇಳಿದರು.

Join Whatsapp