ಉತ್ತರಾಖಂಡದಲ್ಲಿ ಮುಸ್ಲಿಮರ ಓಲೈಕೆಗೆ ಮುಂದಾದ ಬಿಜೆಪಿ

Prasthutha|

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಉತ್ತರಾಖಂಡ ಅಸೆಂಬ್ಲಿ ಚುನಾವಣೆಯಲ್ಲಿ ಅಲ್ಪಸಂಖ್ಯಾತ ಮುಸ್ಲಿಮರ ಬೆಂಬಲವನ್ನು ಗಳಿಸುವ ಉದ್ದೇಶದಿಂದ ಬಿಜೆಪಿ ಪ್ರತಿ ಮತಗಟ್ಟೆಯಲ್ಲಿ ಅಭಿಯಾನವನ್ನು ಆರಂಭಿಸಿದೆ. ರಾಜ್ಯಾದ್ಯಂತ ಅಲ್ಪಸಂಖ್ಯಾತ ಮುಸ್ಲಿಮರು ಪ್ರಾಬಲ್ಯವಿರುವ ಬೂತ್ ಗಳಲ್ಲಿ ಅಭಿಯಾನ ನಡೆಸುತ್ತಿದೆ.

- Advertisement -

ರಾಜ್ಯದೆಲ್ಲೆಡೆ ಎಲ್ಲಾ ಮತಗಟ್ಟಗಳಲ್ಲಿ ಕನಿಷ್ಠ ಅಲ್ಪಸಂಖ್ಯಾತರ 100 ಮತಗಳನ್ನು ಪಡೆಯುವ ಅಭಿಯಾನಗಳನ್ನು ಪ್ರಾರಂಭಿಸಲಾಗಿದೆ ಎಂದು ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದೀಕಿ ಮಾಧ್ಯಮಕ್ಕೆ ತಿಳಿಸಿದ್ದಾರೆ.

ಒಂದು ಬೂತ್, 100 ಮತ ಎಂಬ ಹೆಸರಿನ ಅಭಿಯಾನವು ಆರಂಭವಾಗಿದ್ದು, ಮುಂದಿನ ವರ್ಷದ ಅಸೆಂಬ್ಲಿ ಚುನಾವಣೆಯ ವರೆಗೂ ಮುಂದುವರಿಯಲಿದೆ. ಈ ವೇಳೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಮುಸ್ಲಿಮ್ ಸಮುದಾಯ ಪ್ರಾಬಲ್ಯ ವಿರುವ ಬೂತ್ ಗಳಲ್ಲಿ ಪಕ್ಷದ ಅಭ್ಯರ್ಥಿಗೆ ಕನಿಷ್ಠ 100 ಮತಗಳನ್ನು ಖಚಿತಪಡಿಸಿಕೊಳ್ಳುವ ಕೆಲಸ ಮಾಡುತ್ತಾರೆ ಎಂದು ಸಿದ್ದಿಕಿ ಹೇಳಿದರು.

- Advertisement -

ಪ್ರಚಾರದ ವೇಳೆ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಕಾರ್ಯಕರ್ತರು ಅಲ್ಪಸಂಖ್ಯಾತ ಸಮುದಾಯಕ್ಕೆ ಬಿಜೆಪಿ ಮತ್ತು ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಸೃಷ್ಟಿಸಿರುವ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ತಿಳಿಸಿದರು.

ಸದ್ಯ ಉತ್ತರಾಖಂಡಾದಲ್ಲಿ ಒಟ್ಟು ಜನಸಂಖ್ಯೆಯ ಶೇಕಡಾ 15 ಕ್ಕಿಂತಲೂ ಹೆಚ್ಚು ಮುಸ್ಲಿಮರಿದ್ದಾರೆ. ರಾಜ್ಯದ ಸುಮಾರು ಶೇಕಡಾ 3 ರಷ್ಟು ಸಿಕ್ ಮತ್ತು ಇತರರು ಇದ್ದಾರೆ. ಈ ಮಧ್ಯೆ ಯಾವುದೇ ಪಕ್ಷದ ಚುನಾವಣಾ ಭವಿಷ್ಯವನ್ನು ಬರೆಯುವಲ್ಲಿ ಮುಸ್ಲಿಮರು ನಿರ್ಣಾಯಕ ಪಾತ್ರ ವಹಿಸುತ್ತಾರೆ ಎಂಬುದು ವಾಸ್ತವ.

ಉತ್ತರ ಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾ ಜೊತೆಗೆ ಮುಂದಿನ ವರ್ಷ ಫೆಬ್ರವರಿ-ಮಾರ್ಚ್‌ನಲ್ಲಿ ಉತ್ತರಾಖಂಡ ವಿಧಾನಸಭೆಗೆ ಚುನಾವಣೆ ನಡೆಯಲಿದೆ.

Join Whatsapp