ಕಟುಕ ಹೇಳಿಕೆ: ವ್ಯಾಪಕ ಆಕ್ರೋಶ

Prasthutha|

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಅವರ ಹೇಳಿಕೆಯನ್ನು ಖಂಡಿಸಿ ನೂರಾರು ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಶುಕ್ರವಾರ ಇಲ್ಲಿನ ಪಾಕಿಸ್ತಾನ ಹೈಕಮಿಷನ್ ಬಳಿ ಪ್ರತಿಭಟನೆ ನಡೆಸಿದರು.

- Advertisement -

ಶುಕ್ರವಾರ ದೆಹಲಿಯ ಪಾಕಿಸ್ತಾನ ಹೈಕಮಿಷನ್ ಬಳಿ ಬೃಹತ್ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಭುಟ್ಟೋ ಅವರ ‘ಸಂವೇದನಾರಹಿತ’ ಹೇಳಿಕೆಗಳಿಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ವಿದೇಶಾಂಗ ಸಚಿವರ ಹೇಳಿಕೆಯನ್ನು  ಭಾರತವು ತೀವ್ರವಾಗಿ ಖಂಡಿಸಿದ್ದು, ಪಾಕಿಸ್ತಾನದ ಮಾನದಂಡಗಳ ಮಟ್ಟದಲ್ಲೂ ಈ ಹೇಳಿಕೆ ಅತ್ಯಂತ ಕೀಳು ಎಂದು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಹೇಳಿದೆ.

- Advertisement -

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ಗುರುವಾರ ಮಾತನಾಡಿದ್ದ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು, ‘ಕೆಲವು ದೇಶಗಳು ಭಯೋತ್ಪಾದನೆಯ ಕೇಂದ್ರಗಳಾಗಿವೆ’ ಎಂದು ಹೇಳಿದ್ದರು. ಆನಂತರ ಪತ್ರಕರ್ತರ ಜತೆಗೆ ಮಾತನಾಡಿದ್ದ ಜೈಶಂಕರ್, ‘2011ರಲ್ಲಿ ಅಮೆರಿಕದ ಹಿಲರಿ ಕ್ಲಿಂಟನ್ ಅವರು ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು. ಆಗ, ‘ಹಿತ್ತಲಲ್ಲಿ ಹಾವು ಸಾಕಿದರೆ ಅದು ಪಕ್ಕದ ಮನೆಯವರನ್ನು ಮಾತ್ರ ಕಚ್ಚುವುದಿಲ್ಲ. ಮನೆಯವರನ್ನೂ ಕಚ್ಚುತ್ತದೆ’ ಎಂದು ಹೇಳಿದ್ದರು’ ಎಂದಿದ್ದರು.

ಇದಕ್ಕೆ ಪ್ರತಿಕ್ರಿಯಿಸಿದ್ದ ಬಿಲಾವಲ್ ಭುಟ್ಟೊ, ‘ಒಸಾಮ ಬಿನ್ ಲಾಡೆನ್ ಈಗಾಗಲೇ ಸತ್ತಿದಾನೆ. ಆದರೆ, ಗುಜರಾತಿನ ಕಟುಕ ಇನ್ನೂ ಬದುಕಿದ್ದಾನೆ. ಆತ ಭಾರತದ ಪ್ರಧಾನಿಯಾಗಿದ್ದಾನೆ’ ಎಂದು ಹೇಳಿದ್ದರು.

ಈ ಬಗ್ಗೆ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್ ಬಾಗ್ಚಿ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿದ್ದು,ಉಗ್ರರನ್ನು, ಉಗ್ರ ಸಂಘಟನೆಗಳನ್ನು ಪಾಕಿಸ್ತಾನವು ಸಲಹುತ್ತಿದೆ. ಆದರೆ, ಪಾಕಿಸ್ತಾನಕ್ಕೆ ತನ್ನಲ್ಲಿನ ಭಯೋತ್ಪಾದಕರನ್ನು ಬಳಸಿಕೊಳ್ಳುವ ಸಾಮರ್ಥ್ಯ ಕುಗ್ಗುತ್ತಿದೆ. ಆ ಹತಾಶೆಯಲ್ಲಿಯೇ ಇಂತಹ ಅನಾಗರಿಕ ಮಾತುಗಳು ಬರುತ್ತಿವೆ’ ಎಂದು  ತಿರುಗೇಟು ನೀಡಿದ್ದಾರೆ.

ಪಾಕಿಸ್ತಾನದ ಮಟ್ಟಿಗೂ ಇದು ಇನ್ನಷ್ಟು ಕೀಳಾದ ಹೇಳಿಕೆ. 1971ರಲ್ಲಿ ಇದೇ ದಿನ ಏನಾಗಿತ್ತು ಎಂಬುದನ್ನು ಪಾಕಿಸ್ತಾನದ ವಿದೇಶಾಂಗ ಸಚಿವರು ಮರೆತಿದ್ದಾರೆ. ಪಾಕಿಸ್ತಾನದ ಮುಂದಾಳುಗಳು ಬಂಗಾಳಿಗಳು ಮತ್ತು ಹಿಂದೂಗಳ ಮೇಲೆ ನಡೆಸಿದ್ದ ನರಮೇಧವೇ 1971ರಲ್ಲಿ ಪಾಕಿಸ್ತಾನದ ಸೋಲಿಗೆ ಕಾರಣವಾಗಿತ್ತು. (1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಭಾರತದ ಎದುರು ಪಾಕಿಸ್ತಾನ ಸೋತಿತ್ತು. ಬಾಂಗ್ಲಾದೇಶದ ಉದಯ ವಾಗಿತ್ತು). ಆದರೆ ದುರದೃಷ್ಟವಶಾತ್ ಪಾಕಿಸ್ತಾನವು ಅಲ್ಪಸಂಖ್ಯಾತರನ್ನು ನಡೆಸಿಕೊಳ್ಳುವ ವಿಚಾರದಲ್ಲಿ ಇಂದಿಗೂ ಬದಲಾಗಿಲ್ಲ ಎಂದು ಬಾಗ್ಚಿ ಟೀಕಿಸಿದ್ದಾರೆ.

ದೆಹಲಿಯಲ್ಲಿ, ಆಡಳಿತಾರೂಢ ಬಿಜೆಪಿಯ ಹಿರಿಯ ಸದಸ್ಯರು, ಯುವ ಮೋರ್ಚಾ ಅಧ್ಯಕ್ಷ ಮತ್ತು ಸಂಸದ ತೇಜಸ್ವಿ ಸೂರ್ಯ ಮತ್ತು ದೆಹಲಿ ಬಿಜೆಪಿ ಕಾರ್ಯಾಧ್ಯಕ್ಷ ವೀರೇಂದ್ರ ಸಚ್ದೇವ ಸೇರಿದಂತೆ ಇತರರು ಜರ್ದಾರಿ ವಿರುದ್ಧ ಶುಕ್ರವಾರ  ಬೀದಿಗಿಳಿದು ಪ್ರತಿಭಟಿಸಿದರು.

Join Whatsapp