ಎಎಸ್ ಐ ಮಗನ ಮೇಲೆ ಗುಂಡು ಹಾರಿಸಿ ದರೋಡೆ: ಪೊಲೀಸರಿಂದ ತೀವ್ರ ಶೋಧ

Prasthutha|

ಬೆಂಗಳೂರು: ಸಹಾಯಕ ಸಬ್ ಇನ್ಸ್’ಪೆಕ್ಟರ್ (ಎಎಸ್ ಐ) ಮನೆ ಮೇಲೆ ದಾಳಿ ನಡೆಸಿ ಮನೆ ಮಂದಿ ಮೇಲೆ ಗುಂಡು ಹಾರಿಸಿ ನಗದು ಸೇರಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿ ಪರಾರಿಯಾಗಿರುವ ದುಷ್ಕರ್ಮಿಗಳ ಪತ್ತೆಗೆ ಚಿಕ್ಕಬಳ್ಳಾಪುರ ಪೊಲೀಸರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಿ ತೀವ್ರ ಶೋಧ ಕೈಗೊಂಡಿದ್ದಾರೆ.

- Advertisement -

ಚಿಕ್ಕಬಳ್ಳಾಪುರ ತಾಲೂಕಿನ ಪೆರೇಸಂದ್ರದ ಗುಡಿಬಂಡೆ ರಸ್ತೆಯಲ್ಲಿನ ಮಂಜುನಾಥ ಕಲ್ಯಾಣ ಮಂಟಪದ ಬಳಿ ವಾಸ ಇದ್ದ ಎಎಸ್ ಐ ನಾರಾಯಣಸ್ವಾಮಿ ಅವರ ಮನೆಗೆ ನುಗ್ಗಿದ ದರೋಡೆಕೋರರು, ಪ್ರತಿರೋಧ ತೋರಿದ ಕುಟುಂಬಸ್ಥರ ಮೇಲೆ ಗುಂಡು ಹಾರಿಸಿ ಬೆದರಿಸಿ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು. ದರೋಡೆಕೋರರ ಪತ್ತೆಗೆ ಕಾರ್ಯಾಚರಣೆ ತೀವ್ರಗೊಳಿಸಲಾಗಿದೆ.

ದುಷ್ಕರ್ಮಿಗಳು ಗುಂಡು ಹಾರಿಸಿದ್ದರಿಂದ ಎಎಸ್ ಐ ನಾರಾಯಣಸ್ವಾಮಿ ಪುತ್ರ ಶರತ್ ಗಾಯಗೊಂಡಿದ್ದು, ಅವರನ್ನು ಕೂಡಲೇ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ಚಿಕಿತ್ಸೆಗೆ ದಾಖಲು ಮಾಡಲಾಗಿದ್ದು ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

- Advertisement -

ನಾರಾಯಣಸ್ವಾಮಿ ಮೇಲೆಯೂ ದರೋಡೆಕೋರರು ಹಲ್ಲೆ ನಡೆಸಿದ್ದು ಸಣ್ಣಪುಟ್ಟಗಾಯಗಳಾಗಿವೆ. ಅವರನ್ನು ಕೂಡ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ನಾರಾಯಣಸ್ವಾಮಿ ಎಎಸ್ ಐ ಆಗಿ ನಗರದ ಠಾಣೆಯೊಂದರಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ದರೋಡೆಕೋರರು ಸಾಕಷ್ಟು ಪೂರ್ವನಿಯೋಜಿತವಾಗಿ ಎಎಸ್ ಐ ಮನೆ ದರೋಡೆಗೆ ಸಂಚು ರೂಪಿಸಿದ್ದಂತೆ ಕಂಡು ಬಂದಿದ್ದು ಮನೆಗೆ ಸುತ್ತಲೂ ಸಿಸಿ ಕ್ಯಾಮರಾ ಹಾಕಲಾಗಿತ್ತಾದರೂ ಮನೆ ದೋಚಿದ ಬಳಿಕ ದರೋಡೆಕೋರರು ಸಿಸಿ ಕ್ಯಾಮರಾ ಸ್ಟೋರ್ ಮಾಡುವ ಡಿವಿಆರ್ ಸಮೇತ ಕಿತ್ತು ಅಲ್ಲಿಂದ ಪರಾರಿಯಾಗಿದ್ದಾರೆ. ದರೋಡೆಕೋರರು ಒಟ್ಟು 5 ಮಂದಿ ಇದ್ದರು ಎನ್ನಲಾಗಿದ್ದು ಹಿಂದಿ, ಕನ್ನಡ ಭಾಷೆ ಎರಡು ಮಾತನಾಡುತ್ತಿದ್ದರೆಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.

ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಎಲ್.ನಾಗೇಶ್, ಚಿಕ್ಕಬಳ್ಳಾಪುರ ಉಪ ವಿಭಾಗದ ಡಿವೈಎಸ್ಪಿ ವಿ.ಕೆ.ವಾಸುದೇವ್ ತೆರಳಿ ಪರಿಶೀಲಿಸಿದ್ದಾರೆ. ಬಳಿಕ ಗಾಯಗಳು ಚಿಕಿತ್ಸೆ ಪಡೆಯುತ್ತಿರುವ ಜಿಲ್ಲಾಸ್ಪತ್ರೆಗೆ ಆಗಮಿಸಿ ಅವರ ಯೋಗಕ್ಷೇಮ ವಿಚಾರಿಸಿದ್ದಾರೆ. ದರೋಡೆ ಪ್ರಕರಣದ ಬಗ್ಗೆ ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದುಷ್ಕರ್ಮಿಗಳ ಪತ್ತೆಗೆ ವಿಶೇಷ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ.

Join Whatsapp