ಮಾಜಿ ಸಿಎಂ ಯಡಿಯೂರಪ್ಪ ಬಂಧನ ಸಾಧ್ಯತೆ: ಜಿ ಪರಮೇಶ್ವರ್

Prasthutha|

ತುಮಕೂರು: ಪೋಕ್ಸೋ ಪ್ರಕರಣ ಸಂಬಂಧ ಅಗತ್ಯ ಬಿದ್ದರೆ ಸಿಐಡಿಯವರು ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪರನ್ನು ಬಂಧಿಸುತ್ತಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ಹೇಳಿದ್ದಾರೆ.

- Advertisement -

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೋಕ್ಸೋ ಪ್ರಕರಣದಲ್ಲಿ ಸಿಐಡಿ ಅಧಿಕಾರಿಗಳು ಬಿ.ಎಸ್.‌ ಯಡಿಯೂರಪ್ಪಗೆ ನೋಟಿಸ್‌ ನೀಡಿದ್ದು, ಅಗತ್ಯ ಬಿದ್ರೆ ಸಿಐಡಿಯವರು ಯಡಿಯೂರಪ್ಪರನ್ನು ಬಂಧಿಸುತ್ತಾರೆ ಎಂದಿದ್ದಾರೆ.

ಪೋಕ್ಸೋ ಪ್ರಕರಣದಲ್ಲಿ ಬಿ.ಎಸ್.‌ ಯಡಿಯೂರಪ್ಪ ವಿರುದ್ಧ ಜಾಮೀನು ರಹಿತ ವಾರೆಂಟ್‌ ಹೊರಡಿಸಲು ಪೊಲೀಸರು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಗೆ ಅರ್ಜಿ ಸಲ್ಲಿಸಿದ್ದಾರೆ. ಇಂದು ವಾರಂಟ್‌ ಹೊರಡಿಸುವ ಬಗ್ಗೆ ಕೋರ್ಟ್‌ ಆದೇಶ ಹೊರಡಿಸುವ ಸಾಧ್ಯತೆ ಇದೆ.

- Advertisement -

ಇನ್ನೊಂದೆಡೆ ಈ ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವಂತೆ ಆದೇಶ ಕೋರಿ ಹೈಕೋರ್ಟ್‌ನಲ್ಲಿ ಸಂತ್ರಸ್ತೆ ಕುಟುಂಬ ಮನವಿ ಮಾಡಿದೆ.

ಸಾಂದರ್ಭಿಕ ಚಿತ್ರ: ಭೂ ಡಿನೋಟಿಫಿಕೇಷನ್ ಪ್ರಕರಣದಲ್ಲಿ ಬಂಧನವಾಗಿದ್ದ ಯಡಿಯೂರಪ್ಪ

ತಮ್ಮ ಪುತ್ರಿಯ ಜೊತೆಗೆ ಯಡಿಯೂರಪ್ಪನವರು ಅಸಭ್ಯವಾಗಿ ವರ್ತಿಸಿದ್ದರೆಂದು ಮಹಿಳೆಯೊಬ್ಬರು ಮಾರ್ಚ್ 14ರಂದು ದೂರು ದಾಖಲಿಸಿದ್ದರು. ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ಯಡಿಯೂರಪ್ಪನವರ ನಿವಾಸದಲ್ಲಿ ಈ ಘಟನೆ ನಡೆದಿದ್ದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದರು. ಪ್ರಕರಣದಲ್ಲಿ ಅಧಿಕಾರಿಗಳು ಸಂತ್ರಸ್ತೆ ಹೇಳಿಕೆಗಳನ್ನು ಈಗಾಗಲೇ ದಾಖಲಿಸಿಕೊಂಡಿದ್ದಾರೆ.

ವಿಚಾರಣೆಗೆ ಹಾಜರಾಗುವಂತೆ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದು, ಹಾಜರಾಗಲು ಯಡಿಯೂರಪ್ಪ ಕಾಲಾವಕಾಶ ಕೇಳಿದ್ದಾರೆ. ಅಲ್ಲದೆ, ಹೈಕೋರ್ಟ್‌ನಲ್ಲಿ ಎಫ್‌ಐಆರ್ ರದ್ದು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಈ ಮಧ್ಯೆ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣದಲ್ಲಿ ಸರ್ಕಾರದ ಪರ ವಾದಿಸಲು ವಿಶೇಷ ಅಭಿಯೋಜಕರಾಗಿ ವಕೀಲ ಆಶೋಕ್ ನಾಯಕ್‌ರನ್ನು ಸರಕಾರ ನೇಮಕ ಮಾಡಿದೆ. ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯು ಹೈಕೋರ್ಟ್ ನಲ್ಲಿ ವಜಾ ಆದರೆ ಅವರ ಬಂಧನ ಆಗುವುದು ನಿಶ್ಚಿತ ಎನ್ನಲಾಗುತ್ತಿದೆ. ಗೃಹ ಸಚಿವರೂ ಬಂಧನ ಸಾಧ್ಯತೆಯನ್ನು ಹೇಳಿದ್ದಾರೆ.

Join Whatsapp