ಗುಜರಾತ್: ಅಮುಲ್ ಬ್ರ್ಯಾಂಡ್ ಉತ್ಪನ್ನಗಳ ಮುಖ್ಯಸ್ಥ ಆರ್‌ಎಸ್ ಸೋಧಿ ಸಂಚರಿಸುತ್ತಿದ್ದ ಕಾರು ಅಪಘಾತವಾಗಿದ್ದು, ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಜರಾತ್‌ನ ಆನಂದ್ ಪಟ್ಟಣದ ಸಮೀಪ ಬುಧವಾರ ರಾತ್ರಿ ಈ ಅಪಘಾತ ಉಂಟಾಗಿದ್ದು, ಅದೃಷ್ಟವಶಾತ್ ಸೋಧಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.
ಜಿಸಿಎಂಎಂಎಫ್ (GCMMF) ವ್ಯವಸ್ಥಾಪಕ ನಿರ್ದೇಶಕರಾಗಿರುವ ಆರ್‌ಎಸ್ ಸೋಧಿ ಅವರು ಆನಂದ್- ಬಕ್ರೋಲ್ ರಸ್ತೆಯಲ್ಲಿ ಕಾರು ಮೂಲಕ ಸಂಚರಿಸುತ್ತಿದ್ದ ವೇಳೆ ಡಿವೈಡರ್‌ಗೆ ಗುದ್ದಿದ ಪರಿಣಾಮ ಉರುಳಿ ಬಿದ್ದಿದೆ. ತಕ್ಷಣವೇ ಸೋಧಿ ಹಾಗೂ ಚಾಲಕನನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ, ಇಬ್ಬರಿಗೂ ಸಣ್ಣಪುಟ್ಟ ಗಾಯಗಳಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಬಿಡಿ ಜಡೇಜಾ ತಿಳಿಸಿದ್ದಾರೆ.
ಸಂಚರಿಸುವ ವೇಳೆ ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರು ಚಾಲಕ ತಿರುವು ತೆಗೆದುಕೊಂಡಿದ್ದಾನೆ ಎನ್ನಲಾಗಿದೆ. ಈ ವೇಳೆ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿ ಕಾರು ಉರುಳಿ ಬಿದ್ದಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.