ಬಿಎಸ್’ವೈ ಕೈಯಲ್ಲಿದ್ದ ಹೂಗುಚ್ಛವನ್ನು ವಿಜಯೇಂದ್ರ ಕೈಗೆ ಕೊಡಿಸಿ ಅದನ್ನು ಸ್ವೀಕರಿಸಿದ ಅಮಿತ್ ಶಾ !

Prasthutha|

ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಶುಕ್ರವಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನಿವಾಸಕ್ಕೆ ಭೇಟಿ ನೀಡಿದಾಗ, ಯಡಿಯೂರಪ್ಪ ಅವರ ಕೈಯಲ್ಲಿದ್ದ ಹೂಗುಚ್ಛವನ್ನು ವಿಜಯೇಂದ್ರ ಅವರ ಕೈಗೆ ಕೊಡಿಸಿ ಅದನ್ನು ಅಮಿತ್ ಶಾ ಸ್ವೀಕರಿಸಿದ ಪ್ರಸಂಗ ನಡೆಯಿತು.


ಈ ಘಟನೆಗೆ ರಾಜಕೀಯ ವಲಯದಲ್ಲಿ ವಿವಿಧ ವ್ಯಾಖ್ಯಾನಗಳು ಕೇಳಿಬರುತ್ತಿವೆ.
ಅಮಿತ್ ಶಾ ಅವರಿಗಾಗಿ ಯಡಿಯೂರಪ್ಪನವರು ತಮ್ಮ ನಿವಾಸದ ಅಂಗಳದಲ್ಲಿ ಹೂಗುಚ್ಛಗಳನ್ನು ಹಿಡಿದು ಕಾಯುತ್ತಾ ನಿಂತಿದ್ದರು. ಈ ವೇಳೆ ಅವರ ಪುತ್ರ ವಿಜಯೇಂದ್ರ ಹಾಗೂ ಮಕ್ಕಳು ಇದ್ದರು. ಕಾರಿನಿಂದ ಇಳಿದ ಕೂಡಲೇ ಅಮಿತ್ ಶಾ, ಯಡಿಯೂರಪ್ಪನವರ ಕಡೆಗೆ ಮುಗುಳು ನಗೆ ಬೀರಿದರು. ಯಡಿಯೂರಪ್ಪ ತಮ್ಮ ಕೈಯಲ್ಲಿದ್ದ ಹೂಗುಚ್ಛವನ್ನು ಶಾಗೆ ನೀಡಲು ಮುಂದಾದಾಗ, ಹೂಗುಚ್ಛವನ್ನು ವಿಜಯೇಂದ್ರ ಕೈಗೆ ನೀಡಿ ಎಂದು ಅಮಿತ್ ಶಾ ಸನ್ನೆ ಮಾಡಿದರು. ಯಡಿಯೂರಪ್ಪನವರು ತಮ್ಮ ಕೈಯ್ಯಲ್ಲಿದ್ದ ಗುಲಾಬಿ ಹೂಗುಚ್ಛವನ್ನು ವಿಜಯೇಂದ್ರ ಅವರಿಗೆ ಕೊಟ್ಟರು. ಬಳಿಕ ವಿಜಯೇಂದ್ರ ಕೈಯಿಂದ ಅಮಿತ್ ಶಾ ಹೂಗುಚ್ಛ ಸ್ವೀಕರಿಸಿದರು.

- Advertisement -


ನಿಮ್ಮ ಬಳಿಕ ನಿಮ್ಮ ಪುತ್ರ ವಿಜಯೇಂದ್ರಗೆ ಪಕ್ಷದಲ್ಲಿ ಆದ್ಯತೆ ನೀಡುತ್ತೇವೆ ಎಂಬ ಸಂದೇಶ ಸಾರಲು ಅಮಿತ್ ಶಾ ಈ ರೀತಿ ಮಾಡಿದ್ದಾರೆ ಎಂದು ಪಕ್ಷದೊಳಗೆ ಇದನ್ನು ವ್ಯಾಖ್ಯಾನಿಸಲಾಗಿದೆ.
ಇದೇ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಚಿವರಾದ ಶ್ರೀರಾಮುಲು, ಗೋವಿಂದ ಕಾರಜೋಳ ಇದ್ದರು.

- Advertisement -