“ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ” : ಕುಂಭಮೇಳದ ಕುರಿತಂತೆ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ

Prasthutha|

ದೇಶದಲ್ಲಿ ಕೊರೋನಾ ತನ್ನ ರಣಕೇಕೆ ಮುಂದುವರಿಸಿದೆ. ದಿನಂಪ್ರತಿ ಲಕ್ಷಕ್ಕಿಂತಲೂ ಹೆಚ್ಚು ಪಾಸಿಟಿವ್ ಕೇಸುಗಳು ವರದಿಯಾಗುತ್ತಿದೆ. ಜಾಗತಿಕವಾಗಿ ಭಾರತ ಈಗ ಎರಡನೇ ಸ್ಥಾನದಲ್ಲಿದೆ. ಜಗತ್ತಿನಲ್ಲಿ ಪಾಸಿಟಿವ್ ಪ್ರಕರಣದ ಪ್ರತಿ ಆರರಲ್ಲಿ ಒಬ್ಬ ಭಾರತೀಯನಾಗಿದ್ದಾನೆ ಎಂಬ ಆತಂಕಕಾರಿ ವಿಚಾರವೂ ಬಹಿರಂಗಗೊಂಡಿದೆ. ಈತನ್ಮಧ್ಯೆ ಐದು ರಾಜ್ಯಗಳ ಚುನಾವಣೆ, ಧಾರ್ಮಿಕ ಹಬ್ಬಗಳು ಇದಕ್ಕೆಲ್ಲಾ ಮೂಲ ಕಾರಣವೆನ್ನಲಾಗಿದೆ. ಉತ್ತರಖಂಡ ರಾಜ್ಯದ ಹರಿದ್ವಾರದಲ್ಲಿ ನಡೆಯುವ ಕುಂಭಮೇಳ ವಿವಾದಕ್ಕೊಳಗಾಗಿದೆ. ಇಲ್ಲಿ ಸುಮಾರು 40 ಲಕ್ಷಕ್ಕಿಂತಲೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ.  ಈಕುಂಭಮೇಳವನ್ನು ಉಲ್ಲೇಖಿಸಿ ಖ್ಯಾತ ಚಿತ್ರ ನಿರ್ದೇಶಕ ರಾಮ್ ಗೋಪಾಲ್ ವರ್ಮಾ, “ ಎಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ” ಎಂದು ಟ್ವೀಟ್ ಮಾಡಿದ್ದಾರೆ.

ಕುಂಭಮೇಳದ ಚಿತ್ರವನ್ನು ಪೋಸ್ಟ್ ಮಾಡಿ ಟ್ವೀಟ್ ಮಾಡಿರುವ ರಾಮ್ ಗೋಪಾಲ್ ವರ್ಮಾ ಅವರು, “ಓಹ್ ತುಂಬಾ ಚೆನ್ನಾಗಿದೆ, ತುಂಬಾ ರುಚಿಯಾಗಿದೆ. ಇದು ನನ್ನ ಮಾತುಗಳಲ್ಲ. ಕುಂಭಮೇಳದಲ್ಲಿ ಸೇರಿರುವ ಜನರನ್ನು ನೋಡಿ ಕೊರೋನಾ ಅಡುತ್ತಿರುವ ಮಾತುಗಳಾಗಿದೆ. ಇದನ್ನು ಸರಿಪಡಿಸಲು ಎಷ್ಟು ಲಾಕ್ ಡೌನ್ ಗಳು ಬೇಕಾಗಬಹುದು” ಎಂದವರು ಒಂದು ಟ್ವೀಟ್ ನಲ್ಲಿ ಹೇಳಿದ್ದಾರೆ.

- Advertisement -

ಮತ್ತೊಂದು ಟ್ವೀಟ್ ನಲ್ಲಿ, “ಕುಂಭ ಮೇಳ, ಶುಭ ವಿದಾಯ ಭಾರತ, ಸ್ವಾಗತ ಕೊರೋನಾ” ಎಂದು ಟ್ವೀಟ್ ಮಾಡಿದ್ದಾರೆ. 

ಇನ್ನೊಂದು ಟ್ವೀಟ್ ಮಾಡಿರುವ ಅವರು, “ಈಗಿನ ಬಾಹುಬಲಿಯಂತಹಾ  ಕುಂಭಮೇಳಕ್ಕೆ ಹೋಲಿಸಿದರೆ  2020ರ ತಬ್ಲೀಗಿ ಜಮಾತ್ ಒಂದು ರೀತಿಯಲ್ಲಿ ಕಿರುಚಿತ್ರವಿದ್ದಂತೆ. ನಾವೆಲ್ಲಾ ಹಿಂದೂಗಳು ಮುಸ್ಲಿಮರ ಕ್ಷಮೆ ಯಾಚಿಸಬೇಕಾಗಿದೆ. ಅವರು ಏನೂ ಗೊತ್ತಿಲ್ಲದೆ ಮಾಡಿದ್ದರು. ಆದರೆ ನಾವು ಈ ಬಾರಿ ಎಲ್ಲವನ್ನೂ ತಿಳಿದೂ ಮಾಡುತ್ತಿದ್ದೇವೆ” ಎಂದು ಖಾರವಾಗಿ ಟ್ವೀಟ್ ಮಾಡಿದ್ದಾರೆ.

- Advertisement -