ಮಧ್ಯಪ್ರದೇಶದಲ್ಲೊಂದು ಮನ ಕಲಕುವ ಘಟನೆ; ತಮ್ಮನ ಮೃತದೇಹ ಕಾದು ಕುಳಿತ ಬಾಲಕ

Prasthutha|

ಭೋಪಾಲ್ : ಸಣ್ಣ ಬಾಲಕನೊಬ್ಬ ತನ್ನ ತಮ್ಮನ ಮೃತದೇಹವನ್ನು ಕೊಂಡೊಯ್ಯಲು ವಾಹನಗಳು ಸಿಗದೆ ತೊಡೆಯ ಮೇಲೆ ಮಲಗಿಸಿಕೊಂಡು ಕಾಯುತ್ತಾ ಕುಳಿತ ಹೃದಯವಿದ್ರಾವಕ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ.

- Advertisement -


ಅಂಬಾಹ್‌ನ ಬದ್ಫ್ರಾ ಗ್ರಾಮದ ನಿವಾಸಿ ಪೂಜಾರಾಮ್‌ ಜಾತವ್ ಎಂಬವರ ಮಗ ರಾಜಾ(2) ರಕ್ತಹೀನತೆಯಿಂದಾಗಿ ಮೊರೆನಾ ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದ. ತಂದೆ ಪೂಜಾರಾಮ್ ಶವವನ್ನು ಮನೆಗೆ ಕರೆದೊಯ್ಯಲು ವಾಹನಕ್ಕಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಈ ಸಂದರ್ಭದಲ್ಲಿ 8 ವರ್ಷದ ಗುಲ್ಶನ್ ತನ್ನ 2 ವರ್ಷದ ಸಹೋದರ ರಾಜ್ ನ ಶವದೊಂದಿಗೆ ಕುಳಿತಿರುವ ದೃಶ್ಯ ಎಂತಹ ಕಲ್ಲು ಮನಸ್ಸನ್ನೂ ಕರಗಿಸುವಂತಹದ್ದು. ಸ್ಥಳೀಯ ಪತ್ರಕರ್ತರೊಬ್ಬರು ಚಿತ್ರೀಕರಿಸಿರುವ ಈ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.


30 ಕಿಲೋ ಮೀಟರ್ ದೂರದಲ್ಲಿರುವ ತನ್ನ ಗ್ರಾಮಕ್ಕೆ ಮೃತದೇಹವನ್ನು ಕೊಂಡೊಯ್ಯಲು ವಾಹನ ಬೇಕೆಂದು ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿ ಬಳಿ ಪೂಜಾರಾಮ್ ಮನವಿ ಮಾಡಿದ್ದರು. ಆದರೆ ಆಸ್ಪತ್ರೆಯಲ್ಲಿ ವಾಹನವಿಲ್ಲ ಎಂದು ಹೇಳಿ ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲು ಆಸ್ಪತ್ರೆ ಸಿಬ್ಬಂದಿ ನಿರಾಕರಿಸಿದ್ದಾರೆ. ಮಾತ್ರವಲ್ಲ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ಕರೆದೊಯ್ಯುವಂತೆ ಹೇಳಿದ್ದಾರೆ.

- Advertisement -


ಆಸ್ಪತ್ರೆಯ ಆವರಣದಲ್ಲಿ ನಿಲ್ಲಿಸಿದ್ದ ಆಂಬ್ಯುಲೆನ್ಸ್ ನಿರ್ವಾಹಕರೊಬ್ಬರು ಮಗುವಿನ ಶವವನ್ನು 1,500 ರುಪಾಯಿ ಕೇಳಿದ್ದು, ಅಸಹಾಯಕರಾದ ಪೂಜಾರಾಮ್ ತನ್ನ ಮಗ ರಾಜಾ ದೇಹವನ್ನು ಎತ್ತಿಕೊಂಡು ಇನ್ನೊಬ್ಬ ಮಗ ಗುಲ್ಶನ್ ಜೊತೆ ಆಸ್ಪತ್ರೆಯಿಂದ ವಾಪಸ್ ಬಂದಿದ್ದಾರೆ.


ಯಾವುದೇ ದಾರಿ ಕಾಣದ ಪೂಜಾರಾಮ್ ಗ್ರಾಮಕ್ಕೆ ತೆರಳಿ ಹಣದ ವ್ಯವಸ್ಥೆ ಮಾಡಿಕೊಂಡು ಬರಲು ನಿರ್ಧರಿಸಿ ಮಗ ಗುಲ್ಶನ್‌ನನ್ನು ಮೊರೆನಾದ ನೆಹರೂ ಪಾರ್ಕ್‌ನ ಮುಂದೆ ಕೂರಿಸಿ, ಮನೆಗೆ ಹೋಗಿ ಬರುವುದಾಗಿ ಹೇಳಿದ್ದರು.


ಅರ್ಧ ಗಂಟೆಯವರೆಗೆ ರಸ್ತೆ ಬದಿಯಲ್ಲೇ ತಮ್ಮನ ಮೃತದೇಹದ ಜೊತೆ ಕಾಲಕಳೆದಿರುವ ಗುಲ್ಶನ್, ತಮ್ಮನ ದೇಹವನ್ನು ಮುದ್ದಿಸುತ್ತಾ, ನೊಣಗಳನ್ನು ಓಡಿಸುತ್ತಾ, ಕಣ್ಣೀರು ಹಾಕುತ್ತಾ ಕೂತಿದ್ದ. ಅಷ್ಟರಲ್ಲೇ ಈ ದೃಶ್ಯವನ್ನು ಕಂಡು ಗುಂಪುಗೂಡಲು ಆರಂಭಿಸಿದ ಸಾರ್ವಜನಿಕರಲ್ಲಿ ಯಾರೋ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.


ಸ್ಥಳಕ್ಕಾಗಮಿಸಿದ ಪೊಲೀಸ್ ಅಧಿಕಾರಿ ಯೋಗೇಂದ್ರ ಸಿಂಗ್ ಮಗುವಿನ ಮೃತದೇಹವನ್ನು ಎತ್ತಿಕೊಂಡು ಗುಲ್ಶನ್‌ ಜೊತೆ ಮತ್ತೆ ಜಿಲ್ಲಾಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿ ಪೂಜಾರಾಮ್‌ಗೆ ಮನೆಗೆ ಮಗುವಿನ ಮೃತದೇಹ ಸಾಗಿಸಲು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಲಾಯಿತು.

Join Whatsapp