ವಯನಾಡ್: ಕೇರಳದ ವಯನಾಡಿನಲ್ಲಿರುವ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯ ಕಚೇರಿ ಧ್ವಂಸ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಐ(ಎಂ) ವಿದ್ಯಾರ್ಥಿ ಘಟಕ ಸಂಘಟನೆಯಾದ ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾದ (ಎಸ್ಎಫ್ಐ) 19 ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಸ್ಥಳೀಯ ನ್ಯಾಯಾಲಯವು ಬಂಧಿತ ಆರೋಪಿಗಳನ್ನು ಎರಡು ವಾರಗಳ ಕಾಲ ರಿಮಾಂಡ್ಗೆ ಒಪ್ಪಿಸಿದ್ದು, ಶನಿವಾರದಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಅನೇಕರ ಬಂಧನವಾಗುವ ಸಾಧ್ಯತೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅದಲ್ಲದೆ ಈ ಪ್ರಕರಣವನ್ನು ಎಡಿಜಿಪಿ ನೇತೃತ್ವದ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗುವುದು ಎಂದೂ ಪೊಲೀಸರು ಹೇಳಿದ್ದಾರೆ.
ಬಿಜೆಪಿಯ ನೇತೃತ್ವದ ಕೇಂದ್ರ ಸರಕಾರವನ್ನು ಮೆಚ್ಚಿಸುವ ಸಲುವಾಗಿ ಎಸ್ ಎಫ್ ಐ ಗೂಂಡಾಗಳು ಈ ಧ್ವಂಸ ಕ್ರಿಯೆಯನ್ನು ಮಾಡಿದ್ದಾರೆ ಎಂದು ಯು ಡಿ ಎಫ್ ಆರೋಪಿಸಿದೆ.