ಮಡಿಕೇರಿ: ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿದ ಎಸ್.ಟಿ.ಸೋಮಶೇಖರ್

Prasthutha|

ಮಡಿಕೇರಿ: ರಾಜ್ಯದ  ಪ್ರತೀ ಗ್ರಾಮ ಪಂಚಾಯತ್ ಮಟ್ಟದಲ್ಲಿ ಸಹಕಾರ ಸಂಘಗಳನ್ನು ಬಲಪಡಿಸಲು ಮುಂದಾಗಲಾಗಿದ್ದು, ಈ ಅವಕಾಶವನ್ನು ಗ್ರಾಮೀಣ ಸಹಕಾರಿಗಳು ಬಳಸಿಕೊಳ್ಳುವಂತಾಗಬೇಕು ಎಂದು ಸಹಕಾರ ಸಚಿವರಾದ ಎಸ್.ಟಿ.ಸೋಮಶೇಖರ್ ಅವರು ಕರೆ ನೀಡಿದ್ದಾರೆ. 

- Advertisement -

ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆಯಲ್ಲಿ ನೂತನವಾಗಿ ನಿರ್ಮಿಸಿರುವ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಟ್ಟಡ ಉದ್ಘಾಟಿಸಿ ಸಚಿವರು ಮಾತನಾಡಿದರು.

ಸಹಕಾರ ಕ್ಷೇತ್ರದಲ್ಲಿ ರಾಜ್ಯವು ತನ್ನದೇ ಆದ ಸ್ಥಾನ ಹೊಂದಿದ್ದು, ಆ ದಿಸೆಯಲ್ಲಿ ಸಹಕಾರ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವಲ್ಲಿ ಎಲ್ಲಾ ರೀತಿಯ ಸಹಕಾರ ನೀಡಲಾಗುತ್ತಿದೆ. ಅದನ್ನು ಸಹಕಾರಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು ಎಂದು ಸಚಿವರು ಸಲಹೆ ಮಾಡಿದರು. 

- Advertisement -

ರಾಜ್ಯದಲ್ಲಿ 5400 ಸಹಕಾರ ಸಂಘಗಳಿದ್ದು, ಈ ಸಂಘಗಳಲ್ಲಿ ಒಂದೇ ತಂತ್ರಾಂಶ ಅಳವಡಿಸಿಕೊಂಡು ಕಾರ್ಯನಿರ್ವಹಿಸಲು ಮುಂದಾಗಲಾಗಿದೆ. ರಾಜ್ಯದಲ್ಲಿ ಸುಮಾರು 20 ಲಕ್ಷ ರೈತರಿಗೆ ಸಹಕಾರ ಸಂಘಗಳ ಮೂಲಕ 14 ಸಾವಿರ ಕೋಟಿ ಸಾಲ ವಿತರಣೆ ಮಾಡಲಾಗಿದೆ ಎಂದು ಹೇಳಿದರು.

 ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರವಾಸ ಮಾಡಿದ್ದೇನೆ. ಶಾಸಕ ಅಪ್ಪಚ್ಚುರಂಜನ್ ಅವರು ಜಿಲ್ಲೆಯ ಸಹಕಾರ ಕ್ಷೇತ್ರದ ಬೆನ್ನೇಲುಬಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಸಚಿವರು ಮೆಚ್ಚುಗೆ ವ್ಯಕ್ತಪಡಿಸಿದರು.

 ಹೊಸದಾಗಿ ಅನುಷ್ಠಾನಕ್ಕೆ ತಂದಿರುವ ಸಾಫ್ಟವೇರ್ ನಿಂದ ರೈತರಿಗೆ ಸಾಲ ವಿತರಣೆಗೆ ತೊಂದರೆ ಆಗುತ್ತಿದೆ. ಸಿಬ್ಬಂದಿಗಳಿಗೆ ಸರಿಯಾಗಿ ತರಬೇತಿಯಾಗಿಲ್ಲ. ರೈತರು ನೋಂದಣಿ ಕಚೇರಿಯಲ್ಲಿ ತುಂಬಾ ತೊಂದರೆ ಅನುಭವಿಸುತ್ತಿದ್ದಾರೆ ಎಂಬ ದೂರುಗಳು ಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾ.31 ರ ತನಕ ಹಳೆಯ ಪದ್ಧತಿಯಲ್ಲಿಯೇ ರೈತರಿಗೆ ಸಾಲ ವಿತರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಲಾಗಿದೆ. ಏ.1 ರಿಂದ ಹೊಸ ಸಾಫ್ಟವೇರ್ ಆ್ಯಪ್ ಮೂಲಕ ಕ್ರಮ ಕೈಗೊಳ್ಳಬೇಕು ಎಂದರು.

 ಯಾವ ಜಿಲ್ಲೆಯಲ್ಲಿ ರೈತರಿಗೆ ಸಾಲಮನ್ನಾ ಬಾಕಿ ಉಳಿದಿದೆ ಆ ಜಿಲ್ಲೆಯ ಶಾಸಕರೊಂದಿಗೆ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿ ಶೀಘ್ರವಾಗಿ ಪರಿಹರಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದರು.

  ಕೇಂದ್ರ ಸರ್ಕಾರ ಸಹಕಾರ ಸಂಘಗಳಿಗೆ ಹೊಸ ಕಟ್ಟಡ ನಿರ್ಮಿಸಿಕೊಡಲು ಘೋಷಣೆ ಮಾಡಿದೆ. ಆತ್ಮನಿರ್ಭರ ಯೋಜನೆಯಡಿ ಒಂದು ಸಾವಿರ ಸಹಕಾರ ಸಂಘಗಳಿಗೆ ರೂ.2 ಕೋಟಿಯಂತೆ ಅನುದಾನ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದ್ದು, ಈಗಾಗಲೇ 675 ಸಹಕಾರ ಸಂಘಗಳಿಗೆ 315 ಕೋಟಿ ಅನುದಾನ ಸಹಕಾರ ಇಲಾಖೆಗೆ ಬಂದಿದೆ ಎಂದರು.



Join Whatsapp