ಗ್ರಾಮೀಣ ಭಾಗದ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು: ಶಾಸಕ ಬಂಡೆಪ್ಪ ಖಾಶೆಂಪುರ್

Prasthutha|

- Advertisement -

ಬೀದರ್: ಗ್ರಾಮೀಣ ಭಾಗದ ಜನರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವ ಮೂಲಕ ವಿದ್ಯಾವಂತರನ್ನಾಗಿ ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ, ಜೆಡಿಎಸ್ ಕೋರ್ ಕಮಿಟಿಯ ಅಧ್ಯಕ್ಷ ಹಾಗೂ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ಹೇಳಿದ್ದಾರೆ.

ಬೀದರ್ ದಕ್ಷಿಣ ಕ್ಷೇತ್ರ ವ್ಯಾಪ್ತಿಯ ಚಟನಳ್ಳಿ ಗ್ರಾಮದ ಶಾಲಾ ಆವರಣದಲ್ಲಿ ಶುಕ್ರವಾರ ನಡೆದ ಬೀದರ್ ತಾಲೂಕು ವ್ಯಾಪ್ತಿಯ ತಾಲೂಕು, ಹೋಬಳಿ, ಗ್ರಾಮ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳನ್ನೊಳಗೊಂಡ ಜನಸ್ಪಂದನಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಭಾಗದ ಶಾಲೆಗಳಲ್ಲಿ ಮಕ್ಕಳ ಹಾಜರಾತಿಯ ಕೊರತೆ ಕಂಡುಬರುತ್ತಿದೆ. ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುವ ಕೆಲಸ ಮಾಡಬೇಕು. ಶಾಲೆಯ ಶಿಕ್ಷಕರು, ಎಸ್ ಡಿಎಂಸಿಯವರು ಸೇರಿದಂತೆ ಸಂಬಂಧಿಸಿದ ಇಲಾಖೆಯವರು ಮಕ್ಕಳು ಶಾಲೆ ತಪ್ಪಿಸದಂತೆ ನೋಡಿಕೊಳ್ಳಬೇಕೆಂದರು.

- Advertisement -

ಈ ವೇಳೆ ಕ್ಷೇತ್ರ ಶಿಕ್ಷಣ ಇಲಾಖೆಯ ಅಧಿಕಾರಿಗಳು ಶಿಕ್ಷಣ ಇಲಾಖೆಯಲ್ಲಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿ ನೀಡಿದರು. ಚಟನಳ್ಳಿಯಲ್ಲಿ ಒಬ್ಬ ಶಿಕ್ಷಕ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ. ಆ ಶಿಕ್ಷಕನ ಮೇಲೆ ಕೂಡಲೇ ಕ್ರಮಕೈಗೊಳ್ಳುತ್ತೇವೆಂದರು. ಈ ವೇಳೆ ಮಾತನಾಡಿದ ಶಾಸಕರು, ಇಲ್ಲಿ ಶಿಕ್ಷಣಕ್ಕೆ ಆದ್ಯತೆ ಕಡಿಮೆ ಕಾಣುತ್ತಿದೆ. ಶಿಕ್ಷಕರು ಮತ್ತು ಆಡಳಿತ ವರ್ಗದವರೂ ವಿದ್ಯಾರ್ಥಿಗಳನ್ನು ಶಾಲೆಗೆ ಸೇರಿಸಿಕೊಳ್ಳುವ ಕೆಲಸ ಮಾಡಬೇಕು ಎಂದರು.

ಎಸ್ಸಿ ಮತ್ತು ಕ್ರಿಶ್ಚಿಯನ್ ಸಮಾಜದ  ಸ್ಮಶಾನ ಭೂಮಿಯ ಹಾದಿಯ ಸಮಸ್ಯೆಯಿದೆ. ಪರಿಹರಿಸಿಕೊಡುವಂತೆ ಗ್ರಾಮಸ್ಥರು ಶಾಸಕರಿಗೆ ಮನವಿ ಮಾಡಿದರು. ಕೂಡಲೇ ಪರಿಶೀಲನೆ ನಡೆಸಿ ಸಮಸ್ಯೆಯನ್ನು ಪರಿಹರಿಸಿಕೊಡುವಂತೆ ಶಾಸಕರು ಕಂದಾಯ ಇಲಾಖೆ ಮತ್ತು ಪಂಚಾಯತ್ ರಾಜ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.

ಗ್ರಾಮದಲ್ಲಿ ಉದ್ಯೋಗ ಖಾತ್ರಿ ಕೆಲಸ ನೀಡುತ್ತಿಲ್ಲ. ಈ ವಿಷಯದಲ್ಲಿ ಪಿಡಿಒ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಉದ್ಯೋಗ ಖಾತ್ರಿ ಕೆಲಸ ನೀಡಬೇಕೆಂದು ಶಾಸಕರು ಇಒ ಮತ್ತು ಪಿಡಿಒಗಳಿಗೆ ಸೂಚಿಸಿದರು. ಸೋಮವಾರದಿಂದಲೇ ಕೆಲಸ ನೀಡುತ್ತೇವೆಂದು ಪಿಡಿಒ ಹೇಳಿದರು.

ಕ್ರಿಶ್ಚಿಯನ್ ಏರಿಯಾಗೆ ಒಂದು ಬೋರ್ವೆಲ್ ಕೊರೆದುಕೊಡುವಂತೆ ಗ್ರಾಮಸ್ಥರು ಮನವಿ ಮಾಡಿದರು. ಈ ವೇಳೆ ಮಾತನಾಡಿದ ಅಧಿಕಾರಿಗಳು, ಜಲಜೀವನ್ ಮಷೀನ್ ನಡಿಯಲ್ಲಿ ಕುಡಿಯುವ ನೀರಿನ ಸೌಕರ್ಯ ಒದಗಿಸಿಕೊಡುವ ಯೋಜನೆಯಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ನಡೆಯುತ್ತಿದ್ದು ಕೂಡಲೇ ನೀರಿನ ಸೌಲಭ್ಯ ಒದಗಿಸಿಕೊಡುತ್ತೇವೆಂದು ಭರವಸೆ ನೀಡಿದರು. ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಆರೋಗ್ಯ ಇಲಾಖೆ, ಅರಣ್ಯ ಇಲಾಖೆ ಸೇರಿದಂತೆ ಅನೇಕ ಇಲಾಖೆಯ ಅಧಿಕಾರಿಗಳು ತಮ್ಮ ಇಲಾಖೆಯ ಪ್ರಗತಿಯ ಮಾಹಿತಿಯನ್ನು ಇದೇ ವೇಳೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಗದಿಗೆಪ್ಪ ಕುರಕುಟ್ಟೆ, ತಹಶೀಲ್ದಾರ್ ಅಣ್ಣರಾವ್ ಪಾಟೀಲ್, ಗ್ರಾಮ ಪಂಚಾಯತಿ ಅಧ್ಯಕ್ಷೆ ಖುಷಬಾಯಿ ವಿಠಲ್, ಉಪಾಧ್ಯಕ್ಷ ವೀರಶೆಟ್ಟಿ ದೊಳಪ್ಪ, ವೀರಶೆಟ್ಟಿ ಪಾಟೀಲ್, ಮಾಹದೇವಿ ಮಲ್ಲಪ್ಪ, ನಾಗೇಶ ಚಟನಳ್ಳಿ, ಶರಣಪ್ಪ ಮುದ್ದಾ, ನಾಸೀರ್, ರಾಜರೆಡ್ಡಿ, ಚಂದ್ರಕಾಂತ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು, ಗ್ರಾಮ ಪಂಚಾಯತಿ ಸದಸ್ಯರು, ಮುಖಂಡರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.

ಇದೇ ವೇಳೆ ಶಾಸಕರು ಅಲ್ಲಿನ ಶಾಲಾ ತರಗತಿಗಳಿಗೆ ಭೇಟಿ ನೀಡಿ ಮಕ್ಕಳೊಂದಿಗೆ ಮಾತುಕತೆ ನಡೆಸಿದರು. ಶಾಲೆಯ ಸ್ಥಿತಿಗತಿಯ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ ಶಾಲಾ ಮಕ್ಕಳೊಂದಿಗೆ ಮಧ್ಯಾಹ್ನದ ಬಿಸಿಯೂಟ ಸೇವಿಸಿದರು. ಅಧಿಕಾರಿಗಳು ಶಾಸಕರೊಂದಿಗಿದ್ದರು.



Join Whatsapp