ನವದೆಹಲಿ : ಅಯೋಧ್ಯೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ, ಬಾಬರಿ ಮಸೀದಿ ಧ್ವಂಸಗೊಂಡ ತಾಣದಲ್ಲಿ ವಿವಾದಿತ ರಾಮ ಮಂದಿರಕ್ಕೆ ಭೂಮಿ ಪೂಜೆ ನಡೆದುದನ್ನು ಬಿಜೆಪಿ ಮತ್ತು ಅದರ ಸಹ ಸಂಘಟನೆಗಳು, ಮಾಧ್ಯಮಗಳು ಅದ್ದೂರಿಯಾಗಿ ಸಂಭ್ರಮಿಸಿದವು. ಆದರೆ, ಇದೇ ವೇಳೆ ಪರಿಸ್ಥಿತಿಯನ್ನು ವಿಶ್ಲೇಷಿಸುವ ಬಗ್ಗೆ ಜಾತ್ಯತೀತ ನಾಯಕರು ಧರ್ಮ ಸಂಕಟಕ್ಕೆ ಸಿಲುಕಿದರು. ಆರಂಭದಿಂದಲೂ ಬಿಜೆಪಿಯಿಂದಾಗಿ ಕೋಮು ಉದ್ವಿಗ್ನತೆಗೆ ಬಳಕೆಯಾಗಿದ್ದ ರಾಮ ಮಂದಿರದ ವಿಚಾರದಲ್ಲಿ, ಯಾವ ರೀತಿಯ ಹೇಳಿಕೆ ನೀಡಬೇಕೆಂಬುದು ಬಿಜೆಪಿಯೇತರ ನಾಯಕರಲ್ಲಿ ದ್ವಂದ್ವ ನಿಲುವು ಕಾಡಿತು. ಆದರೂ, ಸಾಕಷ್ಟು ಜಾತ್ಯತೀತ ನಾಯಕರು ರಾಮ ಮಂದಿರ ನಿರ್ಮಾಣದ ಪರ ಹೇಳಿಕೆ ನೀಡಿದರೆ, ಕೆಲವರು ಅಡ್ಡಗೋಡೆಯಲ್ಲಿ ದೀಪವಿಟ್ಟು ನುಣುಚಿಕೊಂಡರು. ಅಂತಹ ಪ್ರಮಖ ನಾಯಕರಲ್ಲಿ ಕೆಲವರ ಹೇಳಿಕೆಗಳನ್ನು ಇಲ್ಲಿ ನೀಡಲಾಗಿದೆ.
ಕಾಂಗ್ರೆಸ್:
ಕೆಲವು ವರ್ಷಗಳಿಂದ ಬಹುದೊಡ್ಡ ಜಾತ್ಯತೀತ ಪಕ್ಷವೆಂದು ಗುರುತಿಸಿಕೊಂಡು ಬಂದಿರುವ ಕಾಂಗ್ರೆಸ್ ನಾಯಕರಿಂದ ಅನಿರೀಕ್ಷಿತವಾಗಿ ಭೂಮಿ ಪೂಜೆಯನ್ನು ಸಂಭ್ರಮಿಸಿದಂತಹ ಹೇಳಿಕೆಗಳು ಹೊರಬಿದ್ದವು. ಪಕ್ಷದ ಪ್ರಧಾನ ಕಾರ್ಯದರ್ಶಿ, ಉತ್ತರ ಪ್ರದೇಶ ಉಸ್ತುವಾರಿ ಪ್ರಿಯಾಂಕಾ ಗಾಂಧಿ ಭೂಮಿ ಪೂಜೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ, ಈ ಕಾರ್ಯಕ್ರಮವು ರಾಷ್ಟ್ರೀಯ ಐಕ್ಯತೆಯ ಸಂದರ್ಭವಾಗಲಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
ಅಖಿಲ ಭಾರತ ಮಹಿಳಾ ಕಾಂಗ್ರೆಸ್, ಪ್ರಿಯಾಂಕಾ ಅವರ ಹೇಳಿಕೆಯ ವೀಡಿಯೊವೊಂದನ್ನು ಪ್ರಕಟಿಸಿತಲ್ಲದೆ, ಅದರಲ್ಲಿ ಅವರು ಶ್ರೀರಾಮನ ಭಕ್ತೆ ಎಂಬಂತೆ ಬಿಂಬಿಸಿತು.
ಉತ್ತರ ಪ್ರದೇಶ ಕಾಂಗ್ರೆಸ್, ಪ್ರಿಯಾಂಕಾ ಅವರು ಹಾರ ಹಾಕಿಕೊಂಡು, ತಿಲಕ ಇಟ್ಟುಕೊಂಡು ಭಕ್ತೆಯಂತೆ ಬಿಂಬಿಸುವ ಮತ್ತು ಶ್ರೀರಾಮನನ್ನು ಹೊಗಳುವ ವಿಚಾರವನ್ನು ಮುಖ್ಯವಾಗಿಸಿ, ಸಾಮಾಜಿಕ ಜಾಲತಾಣದಲ್ಲಿ ಅಭಿಯಾನವನ್ನೇ ನಡೆಸಿತು.
ಆದರೆ, ಇನ್ನೊಂದೆಡೆ ಕಾಂಗ್ರೆಸ್ ನ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ, ಭೂಮಿ ಪೂಜೆಯ ಬಗ್ಗೆ ಉಲ್ಲೇಖಿಸುವುದರಿಂದ ದೂರ ಉಳಿದರಾದರೂ, ಶ್ರೀರಾಮನ ಗುಣಗಳನ್ನು ಬಣ್ಣಿಸಿದರು. “ಮರ್ಯಾದ ಪುರುಷೋತ್ತಮ ಭಗವಾನ್ ರಾಮ ಸರ್ವೋತ್ತಮ ಮಾವನೀಯ ಗುಣದ ಸ್ವರೂಪವಾಗಿದ್ದಾನೆ. ಅವನು ನಮ್ಮ ಮನದಲ್ಲಿರುವ ಮಾನವತೆಯ ಮೂಲ ರೂಪವಾಗಿದ್ದಾನೆ’’ ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದರು. ಅಲ್ಲದೆ, ರಾಮ ಕರುಣಾಮಯಿ, ಆತ ಎಂದಿಗೂ ಕ್ರೂರತೆಯೊಂದಿಗೆ ಪ್ರಕಟವಾಗಲಾರ, ರಾಮ ನ್ಯಾಯವಾಗಿದ್ದಾನೆ, ಆತ ಎಂದಿಗೂ ಅನ್ಯಾಯವನ್ನು ಪ್ರಕಟಿಸಲಾರ ಎಂದು ರಾಮನ ಗುಣಗಳನ್ನು ವಿವರಿಸಿದರು.
ಕಾಂಗ್ರೆಸ್ ನ ಇನ್ನೋರ್ವ ಪ್ರಮುಖ ನಾಯಕ, ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಕಮಲನಾಥ್ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಭೂಮಿ ಪೂಜೆಯ ಪ್ರಯುಕ್ತ ತಾನು ಹನುಮಾನ್ ಚಾಲಿಸಾ ಆಯೋಜಿಸುವುದಾಗಿ ತಿಳಿಸಿದರು. ಮಂದಿರಕ್ಕೆ ಬೆಳ್ಳಿಯ ಇಟ್ಟಿಗೆ ದಾನ ಮಾಡಲು ಮಧ್ಯಪ್ರದೇಶ ಕಾಂಗ್ರೆಸ್ ಹಣ ಸಂಗ್ರಹಿಸಿದೆ ಎಂದೂ ಅವರು ಹೇಳಿದರು.
ಇತರ ಕಾಂಗ್ರೆಸ್ ನಾಯಕರುಗಳಾದ ರಾಜಸ್ಥಾನ ಸಿಎಂ ಅಶೋಕ್ ಗೆಹ್ಲೋಟ್, ಛತ್ತೀಸ್ ಗಢ ಸಿಎಂ ಭೂಪೇಶ್ ಬಗೇಲ್, ಪಂಜಾಬ್ ಸಿಎಂ ಕ್ಯಾ. ಅಮರೀಂದರ್ ಸಿಂಗ್ ಭೂಮಿ ಪೂಜೆಗೆ ಬೆಂಬಲ ಸೂಚಿಸಿದರು.
ಸಮಾಜವಾದಿ ಪಾರ್ಟಿ :
ರಾಹುಲ್ ಗಾಂಧಿಯಂತೆ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಕೂಡ ಹೇಳಿಕೆ ನೀಡುವಾಗ ಎಚ್ಚರಿಕೆಯ ಪದಗಳನ್ನು ಬಳಸಿದರು. ಭೂಮಿ ಪೂಜೆಯ ಶಬ್ದ ಬಳಸದೆ, “ರಾಮನ ಒಳಗೊಳ್ಳುವಿಕೆಯ ಹಾದಿಯನ್ನು ಜನರು ಅಳವಡಿಸಿಕೊಳ್ಳುತ್ತಾರೆ ಎಂಬ ಭರವಸೆಯಿಂದಿದ್ದೇನೆ’’ ಎಂಬಂತಹ ಹೇಳಿಕೆ ಅವರು ಟ್ವೀಟ್ ಮಾಡಿದರು.
ಬಹುಜನ ಸಮಾಜ ಪಾರ್ಟಿ :
ಬಿಎಸ್ ಪಿ ಮುಖ್ಯಸ್ಥೆ ಮಾಯಾವತಿ ಭೂಮಿ ಪೂಜೆ, ಶ್ರೀರಾಮನ ಕುರಿತು ಯಾವುದೇ ಉಲ್ಲೇಖ ಮಾಡದೆ, ಮಂದಿರ ನಿರ್ಮಾಣದ ಹೆಗ್ಗಳಿಕೆ ಸುಪ್ರೀಂ ಕೋರ್ಟ್ ತೀರ್ಪಿಗೆ ಸಲ್ಲಬೇಕು ಎಂದು ಬಣ್ಣಿಸಿದರು. ಆದರೆ, ಅಯೋಧ್ಯೆ ವಿವಿಧ ಧರ್ಮಗಳ ಪವಿತ್ರ ನಗರ ಎಂಬುದನ್ನು ಅವರು ಮುಖ್ಯವಾಗಿ ಉಲ್ಲೇಖಿಸುವ ಮೂಲಕ, ವಿಭಿನ್ನ ದೃಷ್ಟಿಕೋನ ವ್ಯಕ್ತಪಡಿಸಿದರು. “ಅಯೋಧ್ಯೆ ವಿಭಿನ್ನ ಧರ್ಮಗಳ ಪವಿತ್ರ ನಗರ ಎಂಬುದರಲ್ಲಿ ಸಂಶಯವಿಲ್ಲ. ಆದರೆ, ಇದು ರಾಮ ಮಂದಿರ ಮತ್ತು ಬಾಬರಿ ಮಸೀದಿ ಜಮೀನು ವಿವಾದಕ್ಕೆ ಸಂಬಂಧಿಸಿ ಹಲವಾರು ವರ್ಷಗಳಿಂದ ವಿವಾದಿತ ಪ್ರದೇಶವಾಗಿದ್ದುದು ದುಃಖದ ವಿಷಯ. ಈ ವಿವಾದವನ್ನು ಸುಪ್ರೀಂ ಕೋರ್ಟ್ ಈಗ ಕೊನೆಗೊಳಿಸಿದೆ. ಆ ಮೂಲಕ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದ ಪಕ್ಷಗಳಿಗೆ ಕೊಂಚ ವಿರಾಮವನ್ನೂ ನೀಡಿದೆ. ಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಇಲ್ಲಿ ಇಂದು ರಾಮ ಮಂದಿರ ನಿರ್ಮಾಣದ ಕಾರ್ಯ ನಡೆಯುತ್ತಿದೆ. ಹೀಗಾಗಿ ಇದರ ಪೂರ್ಣ ಹೆಗ್ಗಳಿಗೆ ಸುಪ್ರೀಂ ಕೋರ್ಟ್ ಗೇ ಸಲ್ಲಬೇಕು. ಈ ವಿಷಯದಲ್ಲಿ ಸುಪ್ರೀಂ ಕೋರ್ಟ್ ಯಾವ ತೀರ್ಪು ನೀಡುತ್ತದೋ, ಆ ತೀರ್ಪನ್ನು ಸ್ವೀಕರಿಸುತ್ತದೆ ಎಂದು ಬಿಎಸ್ ಪಿ ಆರಂಭದಿಂದಲೂ ಹೇಳಿಕೊಂಡು ಬಂದಿದೆ. ಹೀಗಾಗಿ, ಎಲ್ಲರೂ ಅದನ್ನು ಈಗ ಸ್ವೀಕರಿಸಬೇಕಾಗಿದೆ. ಇದೇ ಬಿಎಸ್ ಪಿಯ ಸಲಹೆಯಾಗಿದೆ’’ ಎಂದು ಮಾಯಾವತಿ ತಮ್ಮ ಸರಣಿ ಟ್ವೀಟ್ ನಲ್ಲಿ ತಿಳಿಸಿದರು.
ತೃಣಮೂಲ ಕಾಂಗ್ರೆಸ್ :
ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಭೂಮಿ ಪೂಜೆ, ಶ್ರೀರಾಮ, ಬಾಬರಿ ಮಸೀದಿ ಬಗ್ಗೆ ಯಾವುದೇ ಉಲ್ಲೇಖ ಮಾಡದೆ, ಸೌಹಾರ್ದತೆಯ ಸಂದೇಶ ಪ್ರಕಟಿಸಿದರು. “ಹಿಂದೂ, ಮುಸ್ಲಿಮ್, ಸಿಖ್ ಮತ್ತು ಕ್ರೈಸ್ತರು ಎಲ್ಲರೂ ಸಹೋದರರು. ನಮ್ಮ ಭಾರತ ಶ್ರೇಷ್ಠ. ನಮ್ಮ ದೇಶ ಯಾವಾಗಲೂ ವಿವಿಧತೆಯಲ್ಲಿ ಏಕತೆಯನ್ನು ಎತ್ತಿ ಹಿಡಿದಿದೆ ಮತ್ತು ನಾವು ಅದನ್ನು ನಮ್ಮ ಕೊನೆಯುಸಿರು ಇರುವವರೆಗೂ ಸಂರಕ್ಷಿಸಬೇಕಾಗಿದೆ’’ ಎಂದು ಮಮತಾ ಬಣ್ಣಿಸಿದರು.
ಆಮ್ ಆದ್ಮಿ ಪಕ್ಷ :
ದೆಹಲಿ ಮುಖ್ಯಮಂತ್ರಿ, ಆಪ್ ಮುಖಂಡ ಅರವಿಂದ ಕೇಜ್ರಿವಾಲ್ ಭೂಮಿ ಪೂಜೆಯನ್ನು ಸ್ವಾಗತಿಸಿದ್ದಾರೆ. ಶ್ರೀರಾಮನ ಆಶೀರ್ವಾದದಿಂದ ದೇಶದಲ್ಲಿ ಸಮೃದ್ಧಿ ಮತ್ತು ಏಕತೆ ನೆಲೆಸಲಿದೆ ಎಂಬ ಭರವಸೆಯಿದೆ ಎಂದು ಅವರು ಟ್ವೀಟ್ ಮಾಡಿದರು.
ಇದನ್ನು ಹೊರತುಪಡಿಸಿ, ಹಲವು ಬಿಜೆಪಿಯೇತರ ಪಕ್ಷಗಳು ಭೂಮಿ ಪೂಜೆ ಕುರಿತು ಯಾವುದೇ ಹೇಳಿಕೆ ನೀಡದೆ, ಮೌನಕ್ಕೆ ಶರಣಾದವು. ಇನ್ನುಳಿದಂತೆ ಆರ್ ಜೆಡಿ, ಎನ್ ಸಿಪಿ, ಬಿಜೆಡಿ, ವೈಎಸ್ ಆರ್ ಸಿಪಿ, ಟಿಆರ್ ಎಸ್, ಡಿಎಂಕೆ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾದ ಪಕ್ಷಗಳು. ಆಶ್ಚರ್ಯವೇನೆಂದರೆ, ಬಿಜೆಪಿ ಮಿತ್ರಪಕ್ಷಗಳಾದ ಶಿರೋಮಣಿ ಅಕಾಲಿ ದಳ, ಜೆಡಿಯು, ಎಐಎಡಿಎಂಕೆ ಕೂಡ ಈ ಬಗ್ಗೆ ಮೌನವಾಗಿದ್ದವು.