ಎನ್ ಆರ್ ಐ ಫೋರಂ ಉಪಾಧ್ಯಕ್ಷರ ನೇಮಕಾತಿ ಇಲ್ಲ | ಲಕ್ಷಾಂತರ ಅನಿವಾಸಿ ಕನ್ನಡಿಗರು, ಕರಾವಳಿಗರ ಗೋಳು ಕೇಳುವವರಿಲ್ಲ

Prasthutha|

ಮಂಗಳೂರು : ಪ್ರಸ್ತುತ ಕೋವಿಡ್ 19 ಸಂಕಷ್ಟದ ಹಿನ್ನೆಲೆಯಲ್ಲಿ ವಿದೇಶಗಳಲ್ಲಿರುವ ಕನ್ನಡಿಗರು ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅದರಲ್ಲೂ ಕರಾವಳಿ ಭಾಗದ ಹೆಚ್ಚಿನ ಜನರು ಗಲ್ಫ್ ರಾಷ್ಟ್ರಗಳಲ್ಲಿದ್ದಾರೆ. ಈ ರೀತಿ ವಿದೇಶಗಳಲ್ಲಿರುವ ಅನಿವಾಸಿ ಕನ್ನಡಿಗರಿಗೆ ನೆರವಾಗಲೆಂದೇ ಎನ್.ಆರ್.ಐ ಫೋರಂ ಆಫ್ ಕರ್ನಾಟಕ 2008ರಲ್ಲಿ ಸ್ಥಾಪನೆಗೊಂಡಿತ್ತು. ಆರಂಭದಿಂದಲೂ ಉತ್ತಮವಾಗಿ ಕಾರ್ಯ ನಿರ್ವಹಿಸಿಕೊಂಡು ಬಂದಿರುವ ಈ ಫೋರಂಗೆ ಇದೀಗ ಕಳೆದ ಎರಡು ವರ್ಷಗಳಿಂದ ಉಪಾಧ್ಯಕರ ನೇಮಕಾತಿ ನಡೆಯದೆ, ಜನರು ಇನ್ನಷ್ಟು ಸಂಕಷ್ಟ ಎದುರಿಸಬೇಕಾಗಿ ಬಂದಿದೆ.

- Advertisement -

ನೆರೆ ರಾಜ್ಯಗಳಾದ ಕೇರಳ ಮತ್ತು ತಮಿಳುನಾಡಿನಲ್ಲಿ ಆರಂಭವಾಗಿದ್ದ ಫೋರಂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿತ್ತು ಮತ್ತು ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುತಿತ್ತು. ಹೀಗಾಗಿ ಕರ್ನಾಟಕದಲ್ಲೂ ಇಂತಹುದೇ ಫೋರಂನ ಅಗತ್ಯವಿದೆ ಎಂಬ ಬೇಡಿಕೆ ಕೇಳಿಬಂದಿತ್ತು. ಹೀಗಾಗಿ 2008ರಲ್ಲಿ ಬಿಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ, ಈ ಫೋರಂ ರಚನೆಯಾಗಿತ್ತು. ಆ ವೇಳೆ ಕ್ಯಾ. ಗಣೇಶ್ ಕಾರ್ಣಿಕ್ ಮೊದಲ ಉಪಾಧ್ಯರಾಗಿ ನೇಮಕಗೊಂಡಿದ್ದರು. ಸರಕಾರದ ಈ ನಿರ್ಧಾರಕ್ಕೆ ಅನಿವಾಸಿ ಕನ್ನಡಿಗರು ಪ್ರಶಂಸೆ ವ್ಯಕ್ತಪಡಿಸಿದ್ದರು.

ನಂತರ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರಕಾರ ಕೂಡ ಫೋರಂ ಕಡೆಗಣಿಸದೆ, ಅದಕ್ಕೆ ಬೇಕಾದ ಬೆಂಬಲ ಮುಂದುವರಿಸಿದ್ದರು. ಆಸ್ಟ್ರೇಲಿಯಾದ ಅನಿವಾಸಿ ಕನ್ನಡಿಗ ಪ್ರಕಾಶ್ ಎಂಬವರನ್ನು ಸಿದ್ದರಾಮಯ್ಯ ಸರಕಾರ ಫೋರಂ ಉಪಾಧ್ಯಕ್ಷರನ್ನಾಗಿ ನೇಮಕ ಮಾಡಿತ್ತು. ಅವರ ಕಾರ್ಯಕ್ಷಮತೆ ಬಗ್ಗೆ ಆರೋಪಗಳು ಕೇಳಿಬಂದ ಕಾರಣ, ಅವರನ್ನು ಬದಲಾಯಿಸಿ ಅಮೆರಿಕದ ಅನಿವಾಸಿ ಕನ್ನಡಿಗರಾದ ಆರತಿ ಕೃಷ್ಣ ಅವರನ್ನು ಉಪಾಧ್ಯಕೆಯಾಗಿ ನೇಮಕಗೊಳಿಸಲಾಗಿತ್ತು.

- Advertisement -

ಆ ಬಳಿಕ 2018ರಲ್ಲಿ ಕುಮಾರಸ್ವಾಮಿ ಸರಕಾರ ಅಸ್ತಿತ್ವಕ್ಕೆ ಬಂದ ಬಳಿಕ, ಫೋರಂ ಉಪಾಧ್ಯಕ್ಷರ ನೇಮಕಾತಿಗೆ ಒತ್ತಾಯ ಕೇಳಿಬಂದಿತ್ತು. ಆದರೆ, ನೇಮಕಾತಿ ನಡೆದಿರಲಿಲ್ಲ. ನಂತರ ಬಿಜೆಪಿ ಸರಕಾರ, ಅದೂ ಅದನ್ನು ಸ್ಥಾಪಿಸಿದ ಯಡಿಯೂರಪ್ಪ ಸರಕಾರ ಅಧಿಕಾರಕ್ಕೆ ಬಂದು  ವರ್ಷವಾಯಿತು. ಆದರೆ, ಎನ್.ಆರ್.ಐ ಫೋರಂ ಬಗ್ಗೆ ಸರಕಾರ ಯಾವುದೇ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. ಇತ್ತೀಚೆಗಷ್ಟೇ ನಿಗಮ, ಮಂಡಳಿಗಳ ನೇಮಕಾತಿ ನಡೆದಿದ್ದರೂ, ಎನ್.ಆರ್.ಐ ಫೋರಂ ಉಪಾಧ್ಯಕ್ಷರ ನೇಮಕಾತಿ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ವಿದೇಶದಲ್ಲಿರುವ ಅಸಂಖ್ಯಾತ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ.

ಕೊರೋನಾದ ಸನ್ನಿವೇಶದಲ್ಲಿ ವಿದೇಶದಲ್ಲಿ ಸಾವಿರಾರು ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂತಹವರಿಗೆ ಧ್ವನಿಯಾಗಬೇಕಿದ್ದ ಎನ್.ಆರ್.ಐ ಫೋರಂ ಇದ್ದರೂ, ಇಲ್ಲದಂತಾಗಿದೆ. ಈ ಕುರಿತಂತೆ ಸಾಮಾಜಿಕ ಜಾಲತಾಣಗಳಲ್ಲಿ ಅನಿವಾಸಿ ಕನ್ನಡಿಗರು ತಮ್ಮ ಅಳಲನ್ನು ತೋಡಿಕೊಳ್ಳುತ್ತಿದ್ದು, ಸರ್ಕಾರ ತಕ್ಷಣವೇ ಎನ್.ಆರ್.ಐ ಫೋರಂ ಉಪಾಧ್ಯಕ್ಷರ ನೇಮಕಾತಿ ಮಾಡಿ, ಲಕ್ಷಾಂತರ ಎನ್.ಆರ್.ಐ ಕನ್ನಡಿಗರ ಸಹಾಯಕ್ಕೆ ಮುಂದೆ ಬರಬೇಕಾಗಿದೆ.

Join Whatsapp