ನವದೆಹಲಿ: ತಮಿಳುನಾಡಿನಲ್ಲಿ ಬುಧವಾರ ನಡೆದ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ 13 ಮಂದಿಯ ಪೈಕಿ ರಕ್ಷಣಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಮತ್ತು ಪತ್ನಿ ಮಧುಲಿಕಾ ರಾವತ್ ಅವರ ಅಂತ್ಯಕ್ರಿಯೆ ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ದೆಹಲಿಯ ಕಂಟೋನ್ಮೆಂಟ್ ನ ಬ್ರಾರ್ ಸ್ಕ್ವೇರ್ ನಲ್ಲಿ ನಡೆಯಲಿದೆ.
ಗೃಹ ಸಚಿವ ಅಮಿತ್ ಶಾ, ಭದ್ರತಾ ಸಲಹೆಗಾರ ಅಜಿತ್ ದೋವಲ್, ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ, ಬಿಜೆಪಿ ನಾಯಕ ರವಿಶಂಕರ್ ಪ್ರಸಾದ್, ದೆಹಲಿ ಲೆಫ್ಟಿನೆಂಟ್ ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್, ಭಾರತದಲ್ಲಿನ ಬ್ರಿಟಿಷ್ ರಾಯಭಾರಿ ಅಲೆಕ್ಸಾಂಡರ್ ಎಲ್ಲಿಸ್ ಸೇರಿದಂತೆ ಹಲವು ಗಣ್ಯರು ರಾವತ್ ಮತ್ತು ಪತ್ನಿ ಮಧುಲಿಕಾ ಅವರಿಗೆ ಅಂತಿಮ ದರ್ಶನ ಪಡೆದು ಪುಷ್ಪ ನಮನ ಸಲ್ಲಿಸಿದ್ದಾರೆ.
ಜನರಲ್ ರಾವತ್ ಮತ್ತು ಪತ್ನಿ ಮಧುಲಿಕಾ ಅವರ ಪಾರ್ಥೀವ ಶರೀರವನ್ನು ಅವರ ಅಧಿಕೃತ ನಿವಾಸವಾದ ಕಾಮರಾಜ್ ಮಾರ್ಗ್ ನಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ಇರಿಸಲಾಗಿದೆ.
ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಪತ್ನಿ ಮಧುಲಿಕಾ ಮತ್ತು ಇತರ 11 ರಕ್ಷಣಾ ಸಿಬ್ಬಂದಿಗಳನ್ನು ಹೊತ್ತೊಯ್ಯುತ್ತಿದ್ದ MI 17 V5 ಹೆಲಿಕಾಪ್ಟರ್ ಬುಧವಾರ ತಮಿಳುನಾಡಿನ ಕೂನೂರ್ ಬಳಿ ಪತನಗೊಂಡಿತ್ತು.