ದೆಹಲಿ : ಹಜ್ ಭವನ ನಿರ್ಮಾಣದ ವಿರುದ್ಧ ಹಿಂದುತ್ವ ಸಂಘಟನೆಗಳಿಂದ ಪ್ರತಿಭಟನೆ

Prasthutha|

ಹಜ್ ಭವನ ನಿರ್ಮಾಣ ಮಾಡಿದರೆ ತಕ್ಕ ಪಾಠ ಕಲಿಸಲಿದ್ದೇವೆ : ಬಹಿರಂಗ ಬೆದರಿಕೆ

- Advertisement -

ದೆಹಲಿ : ದೆಹಲಿಯ ದ್ವಾರಕಾ ಪ್ರದೇಶದ ನಿವಾಸಿಗಳು ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಅವರಿಗೆ ಪತ್ರ ಬರೆದು ಈ ಪ್ರದೇಶದ ಸೆಕ್ಟರ್ 22 ರಲ್ಲಿ ಹಜ್ ಭವನ ನಿರ್ಮಾಣಕ್ಕೆ ಭೂ ಮಂಜೂರಾತಿಯನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದಾರೆ. ಈ ಪ್ರದೇಶದಲ್ಲಿ ಸ್ಥಳೀಯ ಹಿಂದುತ್ವ ಮತಾಂಧ ಶಕ್ತಿಗಳು ಇತರ ಸಂಘಟನೆಗಳೊಂದಿಗೆ ಸೇರಿಕೊಂಡು ದ್ವಾರಕಾದ ಭರ್ತುಲ್ ಚೌಕ್ ನಲ್ಲಿ ಪಂಚಾಯತ್ ಸಭೆಯನ್ನು ಕರೆದು ಹಜ್ ಭವನ ನಿರ್ಮಾನದ ವಿರುದ್ಧ ಪ್ರತಿಭಟನೆ ನಡೆಸಿದ್ದರು. ಹಜ್ ಭವನ ನಿರ್ಮಾಣಕ್ಕೆ ಮುಂದಾದರೆ ಹಿಂಸೆ ನಡೆಸಲಾಗುವುದೆಂದು ಹಿಂದುತ್ವವಾದಿಗಳು ಬೆದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ಭಾರತೀಯ ಜನತಾ ಪಕ್ಷದ ದೆಹಲಿ ನಾಯಕರು ಕೂಡ ಹಜ್ ಭವನಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ದ್ವಾರಕಾ ನಿವಾಸಿಗಳ ಒಕ್ಕೂಟವು ಲೆಫ್ಟಿನೆಂಟ್ ಜನರಲ್ ಅನಿಲ್ ಬೈಜಾಲ್ ಗೆ ಕಳುಹಿಸಿದ ಪತ್ರದಲ್ಲಿ ದೆಹಲಿಯಲ್ಲಿ ನಿರ್ಮಾಣವಾಗುತ್ತಿರುವ ಹಜ್ ಭವನವು ಇಲ್ಲಿನ ಸಹೋದರತ್ವ, ಸಾಮರಸ್ಯ ಮತ್ತು ಶಾಂತಿಗೆ ಭಂಗವಾಗುತ್ತದೆಯೆಂದು ಉಲ್ಲೇಖಿಸಿದ್ದಾರೆ. ಮಾತ್ರವಲ್ಲದೆ ಈ ಪ್ರಕ್ರಿಯೆಯಿಂದಾಗಿ ದೆಹೆಲಿಯಲ್ಲಿ ಗಲಭೆ, ಹಿಂದೂಗಳ ವಲಸೆ, ಶಾಹೀನ್ ಬಾಗ್ ಮತ್ತು ಕಾಶ್ಮೀರದಂತಹ ಪರಿಸ್ಥಿತಿಯು ಮರುಕಳಿಸುವ ಸಾಧ್ಯತೆಯಿದೆಯೆಂದು ಆಗಸ್ಟ್ 3 ರಂದು ಬರೆದ ಪತ್ರದಲ್ಲಿ ನಮೂದಿಸಲಾಗಿದೆ. ಬೈಜಾಲ್ ಅವರು ದೆಹಲಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರೂ ಆಗಿದ್ದಾರೆ.

- Advertisement -

ದೆಹಲಿಯಲ್ಲಿ ಸಭೆ ಸೇರಿದ ಪ್ರತಿಭಟನಕಾರರು ಜೈ ಶ್ರೀ ರಾಮ್” ಮತ್ತು “ವಂದೇ ಮಾತರಂ” ಘೋಷಣೆಗಳನ್ನು ಕೂಗುತ್ತಿರುವುದು ಜಾಲತಾಣದಲ್ಲಿ ಹರಿದಾಡುತ್ತಿರುವ ವೀಡಿಯೊಗಳಿಂದ ಬಹಿರಂಗವಾಗಿದೆ. ಅದೇ ರೀತಿ ಪ್ರತಿಭಟನಕಾರರು “ಯೆ ಭೂಮಿ ಹಮಾರಿ ಹೈ, ಇಸ್ಕಾ ಫೈಸ್ಲಾ ಹಮ್ ಕರೇಂಗೆ “ಇದು ನಮ್ಮ ಭೂಮಿ ಮತ್ತು ನಾವು ಅದರ ಭವಿಷ್ಯವನ್ನು ನಿರ್ಧರಿಸುತ್ತೇವೆ” ಎಂಬ ಪ್ರಚೋದನಾತ್ಮಕ ಘೋಷಣೆಗಳನ್ನು ಕೂಗುತ್ತಿದ್ದರು.

ನಾವು ಇಲ್ಲಿ ಹಜ್ ಭವನ ಕಟ್ಟಲು ಅವಕಾಶ ನೀಡುವುದಿಲ್ಲವೆಂದು ದೆಹಲಿ ಸರ್ಕಾರಕ್ಕೆ ಸ್ಪಷ್ಟವಾಗಿ ಎಚ್ಚರಿಸಲಾಗಿದೆ. ಒಂದು ವೇಳೆ ಈ ಎಚ್ಚರಿಕೆಯನ್ನು ಮೀರಿ ಹಜ್ ಭವನ ನಿರ್ಮಿಸಿದರೆ ಲಕ್ಷಾಂತರ ಜನರು ಪಾಠ ಕಲಿಸಲಿದ್ದಾರೆಂದು ಸೇರಿದ್ದ ಪ್ರತಿಭಟನಕಾರರು ಬಹಿರಂಗ ಬೆದರಿಕೆ ಹಾಕಿದ್ದಾರೆ. ಹಿಂದೂಗಳು ಇನ್ನು ಸಮಯವಿರುವಾಗ ಶಸ್ತ್ರ ಮತ್ತು ಆಯುಧಗಳನ್ನು ತೆಗೆದುಕೊಳ್ಳಬೇಕು ಎಂದು ಪ್ರತಿಭಟನೆಯನ್ನುದ್ದೇಶಿಸಿ ಹಿಂದುತ್ವ ಮತಾಂಧ ನಾಯಕನೊಬ್ಬ ಈ ವೇಳೆ ಕರೆ ನೀಡಿದ್ದಾನೆ. ಅಚ್ಚರಿಯೆಂಬಂತೆ ದೆಹಲಿಯಲ್ಲಿ ‘ಷಡ್ಯಂತ್ರ’ ಎಂಬ ಹೆಸರಿನಲ್ಲಿ ಸಣ್ಣ ಪ್ರಕರಣಕ್ಕೂ ಹಲವರನ್ನು ಬಂಧಿಸುವ ದೆಹಲಿ ಪೊಲೀಸರು ಈ ಪ್ರಚೋದನಾತ್ಮಕ ಮತ್ತು ಸಂವಿಧಾನ ವಿರೋಧಿ ಪ್ರತಿಭಟನೆಯ ಸಂಘಟಕರ ವಿರುದ್ಧವಾಗಲೀ, ಹಿಂಸೆಗೆ ಪ್ರಚೋದಿಸಿದ, ಘೋಷಣೆ ಕೂಗಿದವರ ವಿರುದ್ಧವಾಗಲೀ ಯಾವುದೇ ಪ್ರಕರಣ ದಾಖಲಿಸಿಲ್ಲ.

ಈ ಪ್ರತಿಭಟನಾ ಸಭೆಯಲ್ಲಿ ಬಿಜೆಪಿ ದೆಹಲಿ ನಾಯಕರಾದ ಆದೇಶ್ ಗುಪ್ತಾ ಅವರು ಕೂಡಾ ಭಾಗವಹಿಸಿದ್ದರು.

Join Whatsapp