ಕೇಂದ್ರ ಬಜೆಟ್ ಬಂಡವಾಳಶಾಹಿ, ಖಾಸಗೀಕರಣದ ಪರ; ಎಸ್ ಡಿಪಿಐ ಟೀಕೆ

Prasthutha|

ಕೇಂದ್ರ ಸರ್ಕಾರ ಇಂದು ಮಂಡಿಸಿರುವ ಪ್ರಸಕ್ತ ಸಾಲಿನ ಬಜೆಟ್ ರಾಷ್ಟ್ರದ ಒಟ್ಟಾರೆ ಪ್ರಗತಿಯತ್ತ ಗಮನ ಹರಿಸುವಲ್ಲಿ ವಿಫಲವಾಗಿದ್ದು, ಜನಸಾಮಾನ್ಯರ ಮೇಲೆ ವಿಶೇಷವಾಗಿ ರೈತರ ಮೇಲೆ ಹೆಚ್ಚಿನ ಹೊರೆ ಹೊರಿಸಿದೆ ಎಂದು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಂ.ಕೆ.ಫೈಝಿ ಟೀಕಿಸಿದ್ದಾರೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಡೀಸೆಲ್ ಮತ್ತು ಪೆಟ್ರೋಲ್ ಮೇಲೆ ಸೆಸ್ ಹೇರಿರುವುದರಿಂದ ಜನಸಾಮಾನ್ಯರು ಅದರಲ್ಲೂ ವಿಶೇಷವಾಗಿ ರೈತರ ಆರ್ಥಿಕ ಪರಿಸ್ಥಿತಿ ಇನ್ನಷ್ಟು ಹದಗೆಡಲಿದೆ. ಸಾಮಾಜಿಕ ಪ್ರಗತಿ ಮತ್ತು ಸಮುದಾಯ ಅಭಿವೃದ್ಧಿಗೆ ಯಾವುದೇ ಯೋಜನೆಗಳು ಮತ್ತು ಕಾರ್ಯಕ್ರಮಗಳನ್ನು ಘೋಷಿಸದೆ ಕೇಂದ್ರ ಬಜೆಟ್ ಸಾಮಾಜಿಕ ವಲಯವನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳನ್ನು ಖಾಸಗಿ ವಲಯಗಳಿಗೆ ನೀಡುವ ಮೂಲಕ ಕೇಂದ್ರ ಸರ್ಕಾರವು ಕ್ರೋನಿ ಬಂಡವಾಳಶಾಹಿಗಳ ಕಡೆಗೆ ಒಲವು ತೋರಿಸಲು ಹೆಚ್ಚು ಆಸಕ್ತಿ ಹೊಂದಿದೆ ಎಂಬುದನ್ನು ಮತ್ತೊಮ್ಮೆ ಈ ಬಜೆಟ್ ಸಾಬೀತುಪಡಿಸಿದೆ ಎಂದು ಅವರು ದೂರಿದ್ದಾರೆ.
ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಅನುದಾನವನ್ನು ಬಜೆಟ್ ನಲ್ಲಿ ಘೋಷಿಸಲಾಗಿದ್ದರೂ, ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಬಜೆಟ್‌ ನ ಬಹುಪಾಲು ಭಾಗವನ್ನು ಮೀಸಲಿಡಲಾಗಿದೆ. ಆದಾಗ್ಯೂ, ಆರೋಗ್ಯ ಮೂಲಸೌಕರ್ಯ ಮತ್ತು ಗ್ರಾಮೀಣ ಪ್ರದೇಶಗಳ ಯೋಜನೆಗಳನ್ನು ನಿರ್ಲಕ್ಷಿಸಲಾಗಿದೆ ಎಂದು ಎಂ.ಕೆ.ಫೈಝಿ ಟೀಕಿಸಿದ್ದಾರೆ.

Join Whatsapp