ಕೌಲಲಾಂಪುರ್: ಸುದೀರ್ಘ ಕಾಲ ವಿಪಕ್ಷ ನಾಯಕರಾಗಿದ್ದ ಸುಧಾರಣಾವಾದಿ ನಾಯಕ ಅನ್ವರ್ ಇಬ್ರಾಹೀಂ ಅವರು ಮಲೇಷ್ಯಾದ ನೂತನ ಪ್ರಧಾನಿಯಾಗಿ ಗುರುವಾರ ಅಧಿಕಾರ ಸ್ವೀಕರಿಸಿದರು.
ಸಾರ್ವತ್ರಿಕ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂದ ಬಳಿಕ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಅನ್ವರ್ ಅವರು ಮೈತ್ರಿಕೂಟ ರಚಿಸಿ ಸರ್ಕಾರ ರಚಿಸಿದ್ದಾರೆ.
ಮಲೇಷ್ಯಾದ ದೊರೆ ಸುಲ್ತಾನ್ ಅಬ್ದುಲ್ಲಾ ಸುಲ್ತಾನ್ ಅಹ್ಮದ್ ಶಾ ಅವರು 75 ವರ್ಷದ ಅನ್ವರ್ ಅವರನ್ನು ದೇಶದ 10 ನೇ ಪ್ರಧಾನಿಯಾಗಿ ಘೋಷಿಸಿದ ಬಳಿಕ ಅನ್ವರ್ ಅಧಿಕಾರ ಸ್ವೀಕರಿಸಿದರು.
“ನನಗೆ ವಹಿಸಲಾದ ಈ ಜವಾಬ್ದಾರಿಯನ್ನು ನಾನು ವಿನಮ್ರತೆ ಮತ್ತು ಜವಾಬ್ದಾರಿಯೊಂದಿಗೆ ವಹಿಸಿಕೊಳ್ಳುತ್ತೇನೆ” ಎಂದು ಅನ್ವರ್ ಟ್ವೀಟ್ ಮಾಡಿದ್ದಾರೆ.
ಅನ್ವರ್ ಇಬ್ರಾಹಿಂ ಅವರ ಪಕತಾನ್ ಹರಪನ್ ಪಕ್ಷ ಇಲ್ಲವೇ ಭರವಸೆಯ ಮೈತ್ರಿಕೂಟವು ಮಲೇಷ್ಯಾದ ಸಂಸತ್ ಚುನಾವಣೆಯಲ್ಲಿ ಅತಿ ಹೆಚ್ಚು 82 ಸ್ಥಾನಗಳನ್ನು ಗೆದ್ದಿತ್ತು. ಆದರೆ ಬಹುಮತಕ್ಕೆ 112 ಸ್ಥಾನಗಳ ಅಗತ್ಯವಿತ್ತು. ಹಿಂದಿನ ಪ್ರಧಾನಿ ಮೊಯ್ದೀನ್ ಅವರ ಮಲಯ್ ಸೆಂಟ್ರಿಕ್ ಪೆರಿಕತನ್ ನಸಿವೋನಲ್ ಪಕ್ಷ ಇಲ್ಲವೇ ರಾಷ್ಟ್ರೀಯ ಮೈತ್ರಿಯು 73 ಸ್ಥಾನಗಳನ್ನಷ್ಟೇ ಪಡೆಯಲು ಶಕ್ತವಾಗಿತ್ತು.
ಕಳೆದ ಶನಿವಾರ ಮತದಾನ ನಡದಿದ್ದು, ಅತಂತ್ರ ಫಲಿತಾಂಶ ಬಂದಿದ್ದು, ಇದರಿಂದ ನಾಯಕತ್ವದ ಬಿಕ್ಕಟ್ಟು ಎದುರಾಗಿತ್ತು.
ಪ್ರತಿ ಪಕ್ಷ ಪಕತನ್ ಹರಪನ್ ಪಕ್ಷ 82 ಸ್ಥಾನ, ಆಡಳಿತಾರೂಢ ಪೆರಿಕತನ್ ನಾಸಿವೋನಲ್ ಪಕ್ಷ 73 ಹಾಗೂ ಯುನೈಟೆಡ್ ಮಲಯಾ ರಾಷ್ಟ್ರೀಯ ಸಂಘಟನೆಯು 30 ಸ್ಥಾನಗಳನ್ನು ಗೆದ್ದಿತ್ತು. ಇದು ಈಗ ಸರಕಾರ ರಚನೆಯಲ್ಲಿ ಕಿಂಗ್ ಮೇಕರ್ ಆಗಿದೆ.