ಮೊದಲ ಯತ್ನದಲ್ಲಿ ಗೆದ್ದು ಪಂಚಾಯತ್ ಅಧ್ಯಕ್ಷೆಯಾದ 85 ರ ಪೆರುಮಾತಾಳ್ ಅಜ್ಜಿ

Prasthutha|

ಚೆನ್ನೈ; ಕರ್ನಾಟಕದ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಆ ಸ್ಥಾನದಿಂದ ಇಳಿಸಿದ್ದಕ್ಕೆ ಸಮರ್ಥನೆಯಾಗಿ ಅವರ ವಯಸ್ಸನ್ನು ಹೇಳಲಾಗಿತ್ತು. ಕೇವಲ ವಯಸ್ಸಾಗಿದ್ದ ಕಾರಣಕ್ಕೆ ಬಿಜೆಪಿ ಪಕ್ಷದ ಹಿರಿಯ ನಾಯಕ ಎಲ್.ಕೆ. ಅಡ್ವಾನಿ ಪ್ರಧಾನಿ ಪಟ್ಟವನ್ನು ಮಿಸ್ ಮಾಡಿಕೊಂಡಿದ್ದರು. ಅಲ್ಲದೆ, 75 ವರ್ಷ ದಾಟಿದ ಅನೇಕ ಹಿರಿಯ ನಾಯಕರನ್ನು ಇದೀಗ ಸೈಡ್ ಲೈನ್ ಮಾಡಲಾಗುತ್ತಿದೆ. ಆದರೆ, ಇದೇ ಸಂದರ್ಭದಲ್ಲಿ ತಮಿಳುನಾಡಿನ 85 ವರ್ಷದ ಎಸ್. ಪೆರುಮಾತಾಳ್ ಎಂಬ ಹಿರಿಯ ಮಹಿಳೆ ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಪಂಚಾಯತ್ ಚುನಾವಣೆಯಲ್ಲಿ ಗೆದ್ದು, ಶಿವಂತಿಪಟ್ಟಿ ಪಂಚಾಯತ್ ಅಧ್ಯಕ್ಷರಾಗಿ ಆಯ್ಕೆಯಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ.

- Advertisement -

85 ವರ್ಷದ ಪೆರುಮಾತಾಳ್ ತಮಿಳುನಾಡಿನಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಆಯ್ಕೆಯಾಗುವ ಮೂಲಕ ಅತ್ಯಂತ ಹಿರಿಯ ಪಂಚಾಯತ್ ಸದಸ್ಯೆ ಎಂಬ ಹೆಗ್ಗಳಿಕೆ ಪಡೆದಿದ್ದರು. ಇದೀಗ ಅವರು ಅತ್ಯಂತ ಹಿರಿಯ ಪಂಚಾಯತ್ ಅಧ್ಯಕ್ಷೆ ಎಂಬ ದಾಖಲೆಗೂ ಪಾತ್ರರಾಗಿದ್ದಾರೆ. ದೀರ್ಘಕಾಲದಿಂದಲೂ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದ ಅವರು ಎಂದಿಗೂ ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಇದುವೆ ಮೊದಲ ಬಾರಿಗೆ ಸ್ಪರ್ಧಿಸಿದ್ದ ಅವರು ಮೊದಲ ಪ್ರಯತ್ನದಲ್ಲೇ ವಿಜಯಿಯಾಗಿ ಅಧ್ಯಕ್ಷೆಯೂ ಆಗಿದ್ದಾರೆ ಎಂದು ವರದಿಯಾಗಿದೆ.

ಪೆರುಮಾತಾಳ್ ಹಲವಾರು ವರ್ಷಗಳಿಂದ ಸ್ಥಳೀಯ ಚುನಾವಣೆಯಲ್ಲಿ ತನ್ನ ಮಗನಿಗಾಗಿ ಚುನಾವಣೆ ಪ್ರಚಾರ ಮಾಡುತ್ತಿದ್ದರು. ಆದರೆ, ಈ ಬಾರಿ ಪಂಚಾಯತ್‌ನ ಅಧ್ಯಕ್ಷ ಸ್ಥಾನವು ಮಹಿಳೆಗೆ ಮೀಸಲು ಆದ ಕಾರಣಕ್ಕೆ ಅವರು ಚುನಾವಣೆಯಲ್ಲಿ ಸ್ಫರ್ಧಿಸಲು ನಿರ್ಧರಿಸಿದ್ದರು. ಸ್ಪರ್ಧಿಸಿದ್ದ ಅವರಿಗೆ ಚಲಾವಣೆಯಾದ ಒಟ್ಟು 2,060 ಮತಗಳಲ್ಲಿ ಪೆರುಮಾತಾಳ್‌ ಅವರಿಗೆ 1,568 ಬಿದ್ದಿದೆ.

- Advertisement -

“ಮಗನ ದಾರಿಯಲ್ಲಿ ತಾನು ಅಧಿಕಾರವನ್ನು ಮುಂದುವರೆಯುತ್ತಿರುವುದು ಸಂತೋಷವಾಗಿದ್ದು, ಜನರ ಸೇವೆಯನ್ನು ಮುಂದುವರಿಸಲು ಬಯಸುತ್ತೇನೆ” ಎಂದು ಪೆರುಮಾತಾಳ್ ಅವರು ಹೇಳಿದ್ದಾರೆ.

ಮಾಧ್ಯಮಗಳ ಎದುರು ಮಾತನಾಡಿರುವ ನೂತನ ಅಧ್ಯಕ್ಷೆ ಪೆರುಮಾತಾಳ್, “ಪ್ರತಿನಿತ್ಯ ಜನರೊಂದಿಗೆ ಮಾತನಾಡುವದರಿಂದ, ಪಂಚಾಯತ್‌ನಲ್ಲಿ ಪ್ರಚಾರ ಮಾಡುವುದು ಮತ್ತು ಮನೆಗಳಿಗೆ ಭೇಟಿ ನೀಡುವುದು ನನಗೆ ಯಾವುದೇ ಸಮಸ್ಯೆಯಾಗಿರಲಿಲ್ಲ. ನಮ್ಮ ಪಂಚಾಯತ್‌ಗೆ ಕುಡಿಯುವ ನೀರಿನ ಪೂರೈಕೆ ನಿರಂತರವಾಗಿ ಆಗುವಂತೆ ನೋಡಿಕೊಳ್ಳುತ್ತೇನೆ. ನಾವು ಮಳೆಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದು, ನಮ್ಮಲ್ಲಿ ಕುಡಿಯುವ ನೀರಿಗೆ ಬೇರೆ ಯಾವುದೇ ಮೂಲವಿಲ್ಲ ನನ್ನ ಬಾಲ್ಯದಿಂದಲೂ ಕುಡಿಯುವ ನೀರು ಈ ಗ್ರಾಮದ ಪ್ರಮುಖ ಸಮಸ್ಯೆಯಾಗಿದೆ. ಆ ಸಮಸ್ಯೆಯನ್ನು ಶೀಘ್ರದಲ್ಲೇ ಬಗೆಹರಿಸುತ್ತೇನೆ. ಅಲ್ಲದೆ, ಬೀದಿದೀಪಗಳನ್ನು ಅಳವಡಿಸಲು ಮತ್ತು ಪಂಚಾಯತ್‌ನಲ್ಲಿ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನಿಸುವುತ್ತೇನೆ” ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Join Whatsapp