ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಗೆ 4 ನೇ ವರ್ಷದ ಸಂಭ್ರಮ: ವೈವಿಧ್ಯಮಯ ಕಾರ್ಯಕ್ರಮ

Prasthutha|

ಮಂಗಳೂರಿನ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ತನ್ನ 3 ವರ್ಷಗಳ ಪಯಣವನ್ನು ಅತ್ಯಂತ ಯಶಸ್ವಿಯಾಗಿ ಪೂರೈಸಿ ಇದೀಗ 4 ನೇ ವರ್ಷಕ್ಕೆ ಹೆಜ್ಜೆ ಇಡುತ್ತಿದೆ. ಇದರ ಪ್ರಯುಕ್ತ ವೈವಿಧ್ಯಮಯ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದೆ ಎಂದು ಸಂಸ್ಥೆಯ ಗೌರವ ಸಲಹೆಗಾರ ಹುಸೈನ್ ಕಾಟಿಪಳ್ಳ ತಿಳಿಸಿದ್ದಾರೆ.


ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 3 ವರ್ಷಗಳ ಅವಧಿಯಲ್ಲಿ ಸಂಘಟನೆಯ ಸಾಧನೆ ಅಪಾರವಾದುದು. ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ರಕ್ತದಾನ ಶಿಬಿರಗಳನ್ನು ಏರ್ಪಡಿಸಿ ಸುಮಾರು 5000 ಕ್ಕೂ ಹೆಚ್ಚು ಯುನಿಟ್ ರಕ್ತವನ್ನು ಸಂಗ್ರಹಿಸಿ ರಕ್ತದ ಅವಶ್ಯಕತೆ ಇರುವ ರೋಗಿಗಳಿಗೆ ವಿತರಿಸಿ ನೂರಾರು ಜೀವ ಉಳಿಸಿದಂತಹ ಪುಣ್ಯ ಕಾರ್ಯ ಮಾಡಲಾಗಿದೆ ಎಂದರು.

- Advertisement -


ಮಾತ್ರವಲ್ಲ ತುರ್ತಾಗಿ ರಕ್ತದ ಅವಶ್ಯಕತೆ ಇದ್ದ ರೋಗಿಗಳಿಗೆ ಸಂಸ್ಥೆಯ ಸದಸ್ಯರಿಂದಲೇ ರಕ್ತದಾನ ಮಾಡಲಾಗಿದೆ. ಒಬ್ಬನ ಜೀವ ಉಳಿಸಿದರೆ ಇಡೀ ಮಾನವ ಕುಲಕ್ಕೆ ಜೀವದಾನ ಮಾಡಿದಂತೆ ಎಂದು ಪವಿತ್ರ ಕುರಾನ್ ಸಾರುತ್ತದೆ. ದಾನಗಳಲ್ಲಿ ಅತ್ಯಂತ ಶ್ರೇಷ್ಠವಾದ ದಾನ ರಕ್ತದಾನವಾಗಿದೆ. ಈ ಎಲ್ಲಾ ಅಂಶಗಳ ಹಿನ್ನೆಲೆಯಲ್ಲಿ ಜನರ ಜೀವ ರಕ್ಷಣೆ ಮಾಡುವ ಕೆಲಸ ತಮ್ಮಿಂದ ಆಗಬೇಕು ಎಂಬ ಸದುದ್ದೇಶದಿಂದ ರವೂಫ್ ಬಂದರ್ ಮತ್ತು ಸಂಘಡಿಗರ ಪ್ರಯತ್ನದಿಂದ ಹುಟ್ಟಿಕೊಂಡ ಸಂಘಟನೆಯೇ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್. ಮಂಗಳೂರಿನ ರಾವ್ & ರಾವ್ ಸರ್ಕಲ್ ಸಮೀಪದ ಸಿಟಿ ಟವರ್ ನಲ್ಲಿ ಸ್ವಂತ ಕಚೇರಿ ಹೊಂದಿರುವ ಈ ಸಂಸ್ಥೆಗೆ ಆಧ್ಯಾತ್ಮಿಕ ಕ್ಷೇತ್ರದ ಮಹಾನ್ ವಿದ್ವಾಂಸ ಮರ್ಹೂಮ್ ಮಿತ್ತಬೈಲ್ ಜಬ್ಬಾರ್ ಉಸ್ತಾದ್ ಚಾಲನೆ ನೀಡಿದ್ದರು. ರಕ್ತದಾನ ಸಂಘಟನೆಯ ಮುಖ್ಯ ಧ್ಯೇಯ ವಾಗಿದ್ದರೂ ಇನ್ನಿತರ ಹಲವಾರು ಸಮಾಜ ಸೇವಾ ಕಾರ್ಯಕ್ರಮಗಳನ್ನು ಕೂಡಾ ಸಂಸ್ಥೆಯ ವತಿಯಿಂದ ಮಾಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.


ಅನಾರೋಗ್ಯ ಪೀಡಿತ ಅಶಕ್ತರನ್ನು ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ಕೊಡಿಸುವುದು. ಅವರಿಗೆ ಆರ್ಥಿಕ ಸಹಾಯ ಒದಗಿಸುವುದು, ಸಮಾಜದ ಬಡ ಕುಟುಂಬಗಳಿಗೆ ಜಾತಿ ಧರ್ಮ ಭೇದ ಮರೆತು ಆಹಾರ ಕಿಟ್ ಗಳನ್ನು ನೀಡಿ ಅವರ ಹಸಿವನ್ನು ತಣಿಸುವುದು, ಬಡ ಹೆಣ್ಣುಮಕ್ಕಳ ಮದುವೆಗೆ ಸಹಾಯ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವು, ಸೌಹಾರ್ದ ಸಮಾವೇಶಗಳನ್ನು ಏರ್ಪಡಿಸಿ ಸಮಾಜದ ಭಾವೈಕ್ಯತೆಯನ್ನು ಗಟ್ಟಿಗೊಳಿಸುವ ಪ್ರಯತ್ನ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಅತ್ಯಂತ ಯಶಸ್ವಿಯಾಗಿ ಏರ್ಪಡಿಸಲಾಗಿದೆ ಎಂದು ಕಾಟಿಪಳ್ಳ ತಿಳಿಸಿದರು.


ಸಂಘಟನೆಯ ಈ ಎಲ್ಲಾ ಚಟುವಟಿಕೆಗಳನ್ನು ಗುರುತಿಸಿದ ವಿಶ್ವದ ಪ್ರತಿಷ್ಠಿತ ಸಂಘಟನೆ ಎಂಬ ಕೀರ್ತಿಗೆ ಪಾತ್ರವಾದ ಲಯನ್ಸ್ ಕ್ಲಬ್, ದಕ್ಷಿಣ ಕನ್ನಡ ಜಿಲ್ಲೆಯ ತನ್ನ 100 ನೇ ಸಂಘಟನೆ ಸ್ಥಾಪಿಸಲು ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಗೆ ಅವಕಾಶ ನೀಡಿರುವುದು ಇವರ ಸಾಧನೆಗೆ ಸಿಕ್ಕಿದ ಗೌರವವಾಗಿದೆ. ಇದೀಗ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಸಂಸ್ಥೆಯ ಸದಸ್ಯರನ್ನೊಳಗೊಂಡ ಸೆಂಚುರಿಯನ್ ಲಯನ್ಸ್ ಕ್ಲಬ್ ವತಿಯಿಂದಲೂ ಸಮಾಜ ಸೇವಾ ಚಟುವಟಿಕೆಗಳು ಭರದಿಂದ ಸಾಗಿದೆ. ಈ ಎಲ್ಲಾ ಯಶಸ್ವಿಯ ಹಿಂದೆ ರವೂಫ್ ಬಂದರ್ ಮತ್ತು ಬಳಗದವರ ಪರಿಶ್ರಮ ಅಪಾರವಾದುದು. ರವೂಫ್ ರವರು ಸ್ಥಾಪಕ ಅಧ್ಯಕ್ಷರಾಗಿ ಎಲ್ಲಾ ಸದಸ್ಯರನ್ನು ಒಗ್ಗೂಡಿಸಿ ಈ ಸಂಘಟನೆಯನ್ನು ಮುನ್ನಡೆಸಿದ ರೀತಿ ಅಪೂರ್ವವಾದುದು. ಜೊತೆಗೆ ಸಂಘಟನೆಯ ಎಲ್ಲಾ ಸದಸ್ಯರ ತೊಡಗಿಸಿಕೊಳ್ಳುವಿಕೆಯಿಂದ ಹಾಗೂ ಮಂಗಳೂರಿನ ಪ್ರತಿಷ್ಠಿತ ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ಸಹಭಾಗಿತ್ವದಿಂದ ಮತ್ತು ಜಿಲ್ಲೆಯ ಇತರ ಸಂಘ ಸಂಸ್ಥೆಗಳ ಸಹಕಾರದಿಂದ ಕೇವಲ 3 ವರ್ಷಗಳ ಅಲ್ಪಾವಧಿಯಲ್ಲಿಯೇ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಇಂದು ಜಿಲ್ಲೆಯ ಹೆಸರಾಂತ ಸಂಘಟನೆಗಳಲ್ಲಿ ಒಂದಾಗಿ ಗುರುತಿಸಿಕೊಂಡಿದೆ. ಇದೀಗ 4 ನೇ ವರ್ಷಾಚರಣೆಯ ಪ್ರಯುಕ್ತ ವೈವಿಧ್ಯಮಯ ಜನಪರ ಕಾರ್ಯಕ್ರಮಗಳನ್ನು ಏರ್ಪಡಿಸಲು ಉದ್ದೇಶಿಸಲಾಗಿದ್ದು ಈಗಾಗಲೇ ಒಂದು ಬಡ ಹೆಣ್ಣಿನ ಮದುವೆಗೆ ಬೇಕಾದ ಬಟ್ಟೆಗಳನ್ನು ಒದಗಿಸಲಾಗಿದೆ ಎಂದರು.


ಮಂಗಳೂರಿನ ಮಸ್ಜಿದ್ ಜೀನತ್ ಭಕ್ಷ್ ನ ಮಾಜಿ ಅಧ್ಯಕ್ಷ ಸಿ. ಅಬ್ದುಲ್ ಹಮೀದ್ ಸಾಹೇಬ್ ರವರ ಸ್ಮರಣಾರ್ಥ ಲಯನ್ಸ್ ಕ್ಲಬ್ ಸೆಂಚುರಿಯನ್ ಅಧ್ಯಕ್ಷ ಹಾಗೂ ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ನ ಮುಖ್ಯಸ್ಥರೂ ಆಗಿರುವ ಸಾದತ್ ಫರ್ಹಾನ್ ರವರು ಕೊಡುಗೆಯಾಗಿ ನೀಡಿದ ವಾಟರ್ ಕೂಲರ್ ನ್ನು ಕುದ್ರೋಳಿಯ ಹ್ರದಯಬಾಗದಲ್ಲಿರುವ ಆಟೋರಿಕ್ಷಾ ಪಾರ್ಕ್ ನ ಸಮೀಪ ಸಾರ್ವಜನಿಕರಿಗೆ ಸಮರ್ಪಿಸಲಾಗುವುದು ಎಂದು ಹುಸೈನ್ ತಿಳಿಸಿದರು.
ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ರೂಬಿಯ ಅಖ್ತರ್ ಮಾತನಾಡಿ, ಸೆಪ್ಟೆಂಬರ್ ತಿಂಗಳಲ್ಲಿ ಸಂಸ್ಥೆಯ ಮಹಿಳಾ ಘಟಕ ಸ್ಥಾಪನೆ ಮಾಡಲಾಗುವುದು ಎಂದು ಹೇಳಿದರು.
ಪತ್ರಿಕಾ ಗೋಷ್ಠಿಯಲ್ಲಿ ಸ್ಥಾಪಕ ಅಧ್ಯಕ್ಷ ಅಬ್ದುಲ್ ರವೂಫ್ ಬಂದರ್, ಅಧ್ಯಕ್ಷ ತೌಹೀದ್, ಅನೀಸ್ ಬಂದರ್, ನಝೀರ್, ಸಾಧಿಕ್, ಅಳಿಷಾ ಮತ್ತಿತರರು ಉಪಸ್ಥಿತರಿದ್ದರು.

- Advertisement -