ಚುನಾವಣಾ ಆಯೋಗಕ್ಕೆ ಪೂರೈಸಿದ 19 ಲಕ್ಷ ಇವಿಎಂ ನಾಪತ್ತೆ: ವಿಧಾನಸಭೆಯಲ್ಲಿ ಗಂಭೀರ ಚರ್ಚೆ

Prasthutha|

ಬೆಂಗಳೂರು: ದೇಶದಲ್ಲಿ ಇದುವರೆಗೆ ಹತ್ತೊಂಬತ್ತು ಲಕ್ಷ ವಿದ್ಯುನ್ಮಾನ ಮತಯಂತ್ರಗಳು- ಇವಿಎಂ ನಾಪತ್ತೆಯಾಗಿವೆ. ಇವೆಲ್ಲವೂ ಎಲ್ಲಿ ಹೋಗಿವೆ ಎಂದು ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಎಚ್. ಕೆ ಪಾಟೀಲ್ ಸಭೆಯಲ್ಲಿ ಪ್ರಶ್ನಿಸಿದ್ದಾರೆ. ಮಂಗಳವಾರ ವಿಧಾನಸಭೆಯಲ್ಲಿ ನಡೆದ ‘ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳ ಅಗತ್ಯ’ ಎಂಬ ವಿಷಯದಲ್ಲಿ ಮಾತನಾಡಿದ ಅವರು, ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್- ಬಿಇಎಲ್ ಸಂಸ್ಥೆಯಿಂದ 9,64, 270, ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ -ಇಸಿಐಎಲ್ ಸಂಸ್ಥೆಯಿಂದ 9,29, 992 ಇವಿಎಂಗಳು ನಾಪತ್ತೆಯಾಗಿವೆ ಎಂದು ಸಾಮಾಜಿಕ ಕಾರ್ಯಕರ್ತರು ಮಾಹಿತಿ ಹಕ್ಕಿನಡಿ ಪಡೆದ ದಾಖಲೆಗಳು ಹೇಳುತ್ತವೆ. 2014- 15 ರಲ್ಲಿ ಭಾರತೀಯ ಚುನಾವಣಾ ಆಯೋಗಕ್ಕೆ 62,183 ಇವಿಎಂಗಳನ್ನು ಪೂರೈಸಿರುವುದಾಗಿ ಬಿಇಎಲ್ ಹೇಳುತ್ತಿದೆ. ಆದರೆ ಅವುಗಳು ತಲುಪಿಯೇ ಇಲ್ಲ ಎಂದು ಚುನಾವಣಾ ಆಯೋಗ ಹೇಳುತ್ತಿದೆ. ಹಾಗಾದರೆ ಇವು ಎಲ್ಲಿ ಹೋದವು ಎಂದು ಎಚ್ ಕೆ ಪಾಟೀಲ್ ಪ್ರಶ್ನಿಸಿದರು.
ಈ ಮಧ್ಯೆ ಎದ್ದುನಿಂತ ಮಾತನಾಡಿದ ಕಾಂಗ್ರೆಸ್ ಶಾಸಕ ರಮೇಶ್ ಕುಮಾರ್ , ಇದೊಂದು ಗಂಭೀರ ವಿಷಯವಾಗಿದೆ. ಸಾರ್ವಜನಿಕರು ಚುನಾವಣಾ ವ್ಯವಸ್ಥೆಯ ಬಗ್ಗೆ ನಿರಾಶೆ ವ್ಯಕ್ತ ಪಡಿಸುತ್ತಿದ್ದಾರೆ. ಆದ್ದರಿಂದ ಚುನಾವಣಾ ಆಯೋಗಕ್ಕೆ ಸಮನ್ಸ್ ನೀಡುವ ಮೂಲಕ ಅವರನ್ನು ಇಲ್ಲಿಗೆ ಕರೆಸಿ ಈ ವಿಚಾರದಲ್ಲಿ ದೇಶದ ಸಂದೇಹ ನಿವಾರಿಸಿ ಸತ್ಯ ಸ್ಥಾಪನೆ ಮಾಡುವ ನಿರ್ಣಯವನ್ನು ಸ್ಪೀಕರ್ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

Join Whatsapp