ರೊನಾಲ್ಡ್ ಕೋಮನ್’ಗೆ ಬಾರ್ಸಿಲೋನಾ ತಂಡದಿಂದ ಗೇಟ್’ಪಾಸ್..!

Prasthutha|


ಬಾರ್ಸಿಲೋನಾ: ಪ್ರಮುಖ ಸ್ಪ್ಯಾನಿಷ್ ಕ್ಲಬ್ ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಹುದ್ದೆಯಿಂದ ರೊನಾಲ್ಡ್ ಕೋಮನ್’ಗೆ ಗೇಟ್’ಪಾಸ್ ನೀಡಲಾಗಿದೆ. ಲಾ ಲೀಗ್ ಟೂರ್ನಿಯಲ್ಲಿ ಬುಧವಾರ ತಡರಾತ್ರಿ ನಡೆದ ಪಂದ್ಯದಲ್ಲಿ ರಯೊ ವಲ್ಲೆಕಾನೊ ತಂಡದ ವಿರುದ್ಧ 0-1 ಅಂತರದಲ್ಲಿ ಬಾರ್ಸಿಲೋನಾ ಸೋಲನುಭವಿಸಿತ್ತು.

- Advertisement -


ರೊನಾಲ್ಡ್ ಕೋಮನ್’ಗೆ ಸ್ಥಾನಕ್ಕೆ ಬಾರ್ಸಿಲೋನಾ ತಂಡದ ಮಾಜಿ ಸ್ಟಾರ್ ಆಟಗಾರ ಕ್ಸಾವಿ ನೇಮಕವಾಗುವ ಸಾಧ್ಯತೆಯಿದೆ. ಪ್ರಸ್ತುತ ಖತಾರ್ ಕ್ಲಬ್ ಅಲ್ ಸದ್ದ ಎಫ್’ಸಿ ತಂಡದ ಮುಖ್ಯ ತರಬೇತುದಾರನಾಗಿರುವ ಕ್ಸಾವಿ ಸದ್ಯದಲ್ಲೇ ತನ್ನ ಮಾಜಿ ತಂಡದಲ್ಲಿ ಮಹತ್ವದ ಜವಾಬ್ಧಾರಿಯನ್ನು ವಹಿಸಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.
2020 ಆಗಸ್ಟ್’ನಲ್ಲಿ ರೊನಾಲ್ಡ್ ಕೋಮನ್’ ಬಾರ್ಸಿಲೋನಾ ತಂಡದ ಮುಖ್ಯ ಕೋಚ್ ಆಗಿ ನೇಮಕವಾಗಿದ್ದರು. ಆದರೆ ಕೋಮನ್ ನೇಮಕವಾಗುತ್ತಲೇ ಬಾರ್ಸಿಲೋನಾ ತಂಡದಲ್ಲಿ ಸಮಸ್ಯೆಗಳು ತಲೆತೋರಿದ್ದವು. ಲಿಯಾನೆಲ್ ಮೆಸ್ಸಿಯಂತಹ ಅಗ್ರ ಅಟಗಾರನನ್ನು ಆಡುವ ಹನ್ನೊಂದರ ಬಳಗದಿಂದ ಹೊರಗಿಡುವ ಹುಚ್ಚು ನಿರ್ಧಾರದ ಮೂಲಕ ಅಭಿಮಾನಿಗಳ ಕೆಂಗಣ್ಣಿಗೆ ರೊನಾಲ್ಡ್ ಕೋಮನ್ ಗುರಿಯಾಗಿದ್ದರು.


ಆಧುನಿಕ ಫುಟ್ಬಾಲ್’ನಲ್ಲಿ ಅತೀ ಹೆಚ್ಚು ಅಭಿಮಾನಿಗಳನ್ನು ಹೊಂದಿರುವ ಆಟಗಾರ ಲಿಯಾನೆಲ್ ಮೆಸ್ಸಿ ಬಾರ್ಸಿಲೋನಾ ಜೊತೆಗಿನ 19 ವರ್ಷಗಳ ತನ್ನ ಸುಧೀರ್ಘ ಒಪ್ಪಂದವನ್ನು ಮುಂದುವರಿಸದೇ ಇರಲು ತಂಡದ ಕೋಚ್ ರೊನಾಲ್ಡ್ ಕೋಮನ್ ಮುಖ್ಯ ಪಾತ್ರವಹಿಸಿದ್ದರು ಎನ್ನುವ ಆರೋಪ ಕೇಳಿಬಂದಿತ್ತು. ಇದನ್ನು ಪುಷ್ಠೀಕರಿಸುವ ರೀತಿಯಲ್ಲಿ ಬಾರ್ಸಿಲೋನಾ ಕ್ಲಬ್’ನ ಮುಖ್ಯಸ್ಥ ಹೇಳಿಕೆ ನೀಡಿದ್ದಾರೆ.

- Advertisement -

ಲಿಯಾನೆಲ್ ಮೆಸ್ಸಿ ಬಾರ್ಸಿಲೋನಾ ಕ್ಲಬ್ ಬಿಟ್ಟು ಹೋಗಲು ಹಾಗೂ ಕ್ಲಬ್’ನ ಇಂದಿನ ಆರ್ಥಿಕ ಪರಿಸ್ಥಿತಿ ತೀರಾ ಹದಗೆಡಲು ಕೋಮಾನ್’ನ ಕೆಲವೊಂದು ಕೆಟ್ಟ ನಿರ್ಧಾರಗಳೇ ಪ್ರಮುಖ ಕಾರಣವಾಗಿದೆ ಎಂದು ಕ್ಲಬ್’ನ ಅಧ್ಯಕ್ಷ ಲಾಪೋರ್ಟೆ ಹೇಳಿದ್ದಾರೆ.


ಬಾರ್ಸಿಲೋನಾ ತಂಡ ಆಡಿರುವ ಕಳೆದ 4 ಪಂದ್ಯಗಳಲ್ಲಿ 3ರಲ್ಲೂ ಸೋಲು ಅನುಭವಿಸಿದೆ. ಚಾಂಪಿಯನ್ಸ್ ಲೀಗ್’ನ ಗ್ರೂಪ್ ಹಂತದ ಎರಡು ಪಂದ್ಯಗಳಲ್ಲಿ ಬಾರ್ಸಿಲೋನಾ ಮುಗ್ಗರಿಸಿತ್ತು. ಪ್ರತಿಷ್ಠಿತ ಎಲ್ ಕ್ಲಾಸಿಕೋ ಪಂದ್ಯದಲ್ಲಿ ಬದ್ಧವೈರಿ ರಿಯಾಲ್ ಮ್ಯಾಡ್ರಿಡ್ ವಿರುದ್ಧ 1-2 ಗೋಲುಗಳ ಅಂತರದಲ್ಲಿ ಬಾರ್ಸಿಲೋನಾ ಶರಣಾಗಿತ್ತು. ಈ ಸೋಲಿನ ಬಳಿಕ ಕೋಮಾನ್ ನಿರ್ಗಮನ ಬಹುತೇಕ ನಿಶ್ಚಿತವಾಗಿತ್ತು.


ಲಾ ಲೀಗಾದ ಪ್ರಸಕ್ತ ಸೀಸನ್’ನಲ್ಲಿ 10 ಪಂದ್ಯಗಳನ್ನು ಆಡಿರುವ ಬಾರ್ಸಿಲೋನಾ, 4 ಜಯ, 5 ಡ್ರಾ ಹಾಗೂ 1 ಪಂದ್ಯಗಳಲ್ಲಿ ಸೋಲು ಕಾನು ಮೂಲಕ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ಬಾರ್ಸಿಲೋನಾದ ಬದ್ಧವೈರಿ ರಿಯಾಲ್ ಮ್ಯಾಡ್ರಿಡ್ ಕ್ಲಬ್ 10 ಪಂದ್ಯಗಳಲ್ಲಿ 21 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ

Join Whatsapp