ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ: ಸೌಹಾರ್ದ ಕೆಡಿಸುವ ಬಿಜೆಪಿ ಸರಕಾರದ ಕೋಮುವಾದಿ ನಡೆಗೆ ಪಾಪ್ಯುಲರ್ ಫ್ರಂಟ್ ಆಕ್ರೋಶ

Prasthutha|

ಬೆಂಗಳೂರು: ಬಾಬಾ ಬುಡನ್ ಗಿರಿ ದರ್ಗಾದಲ್ಲಿ ವೈದಿಕ ಆಚರಣೆಗಳಿಗೆ ಅವಕಾಶ ನೀಡಿ ಕರ್ನಾಟಕದ ಸೌಹಾರ್ದ ಪರಂಪರೆಯನ್ನು ಕೆಡಿಸುವ ಬಿಜೆಪಿ ಸರಕಾರದ ಕೋಮುವಾದಿ ನಡೆಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ರಾಜ್ಯಾಧ್ಯಕ್ಷ ನಾಸಿರ್ ಪಾಶ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಬಿಜೆಪಿ-ಸಂಘಪರಿವಾರವು ದಕ್ಷಿಣ ಭಾರತದಲ್ಲಿ ಹಿಂದುತ್ವ ಫ್ಯಾಶಿಸ್ಟ್ ಅಜೆಂಡಾವನ್ನು ಬಲಪಡಿಸಲು ಸರ್ವಧರ್ಮೀಯರ ಶ್ರದ್ಧಾ ಕೇಂದ್ರವಾದ ಬಾಬಾ ಬುಡನ್ ಗಿರಿಯನ್ನು ತನ್ನ ನೆಲೆಯನ್ನಾಗಿ ಮಾಡಿಕೊಂಡಿತು. ಆ ಬಳಿಕ ದತ್ತ ಮಾಲಾ, ದತ್ತ ಜಯಂತಿ ಹೆಸರಿನಲ್ಲಿ ಸಂಘಪರಿವಾರದ ಸಂಘಟನೆಗಳು ಕೋಮು ವೈಷಮ್ಯವನ್ನು ಹರಡುತ್ತಾ ಬಾಬಾ ಬುಡನ್ ಗಿರಿಯನ್ನು ವಿವಾದ ತಾಣವನ್ನಾಗಿ ಮಾರ್ಪಡಿಸಿದವು. ಇದೀಗ ಬಿಜೆಪಿ ಸರಕಾರವು ವ್ಯವಸ್ಥಾಪನಾ ಸಮಿತಿಯ ಮೂಲಕ ಇಲ್ಲದ ಆಚರಣೆಗಳಿಗೆ ಅವಕಾಶ ಕಲ್ಪಿಸಿರುವುದು ಕಾನೂನುಬಾಹಿರವಾಗಿದೆ. ಇನ್ನು ಪ್ರತ್ಯೇಕ ಅರ್ಚಕರನ್ನು ನೇಮಿಸುವ ನಿರ್ಧಾರವೂ ಸೂಫಿ ಪರಂಪರೆಗೆ ವಿರುದ್ಧವಾಗಿದೆ. ಈ ನಿರ್ಧಾರದ ಮೂಲಕ ಮುಜಾವರ್ ಹಾಗೂ ಶಾಕಾದ್ರಿಗಳ ಆಡಳಿತಾತ್ಮಕ ಮತ್ತು ಧಾರ್ಮಿಕ ಅಧಿಕಾರವನ್ನು ಮೊಟಕುಗೊಳಿಸಲಾಗಿದ್ದು, ಇದು ಸ್ಪಷ್ಟವಾಗಿ ಕಾನೂನಿನ ಉಲ್ಲಂಘನೆಯಾಗಿದೆ. ಬಿಜೆಪಿ ಸರಕಾರದ ಈ ನಿರ್ಧಾರದ ಮೂಲಕ ಬಾಬಾ ಬುಡನ್ ಗಿರಿಯನ್ನು ಕೋಮುವಾದೀಕರಣಗೊಳಿಸುವ ಸಂಘಪರಿವಾರದ ದುಷ್ಟ ಪ್ರಯತ್ನಕ್ಕೆ ಹಾದಿ ಸುಗಮಗೊಳಿಸಿದಂತಾಗಿದೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾವೈಕ್ಯ ಕೇಂದ್ರ ಬಾಬಾ ಬುಡನ್ ಗಿರಿಯನ್ನು ನಿಯಂತ್ರಣಕ್ಕೆ ಪಡೆಯಲು ಸಂಘಪರಿವಾರವು ನಿರಂತರ ಪ್ರಯತ್ನ ನಡೆಸುತ್ತಿದೆ. ಆದರೆ ಪ್ರಗತಿಪರ, ಸಮಾನ ಮನಸ್ಕ ಸಂಘಟನೆಗಳು, ಸೌಹಾರ್ದ ಪ್ರೇಮಿಗಳ ನಿರಂತರ ಹೋರಾಟದ ಫಲವಾಗಿ ಅದು ತನ್ನ ದುಷ್ಟ ಪ್ರಯತ್ನದಲ್ಲಿ ಹಿನ್ನಡೆ ಅನುಭವಿಸುತ್ತಾ ಬಂದಿತ್ತು. ಹಿಂದು-ಮುಸ್ಲಿಮರ ಸೌಹಾರ್ದವನ್ನು ಗಮನದಲ್ಲಿಟ್ಟುಕೊಂಡು ಸುಪ್ರೀಂ ಕೋರ್ಟ್ ಕೂಡ ತೀರ್ಪು ನೀಡಿತ್ತು. ಆದರೆ ಬಿಜೆಪಿ ಸರಕಾರದ ಕೋಮುವಾದಿ ನಿರ್ಧಾರವು ಬಾಬಾ ಬುಡನ್ ಗಿರಿಯ ಸಾಂಸ್ಕೃತಿಕ ಅಸ್ಮಿತೆ, ಧಾರ್ಮಿಕ ಸೌಹಾರ್ದವನ್ನು ವಿನಾಶದಂಚಿಗೆ ತಂದು ನಿಲ್ಲಿಸಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದ ಈ ಹಿಂದುತ್ವ ಫ್ಯಾಶಿಸ್ಟ್ ನಡೆಯ ವಿರುದ್ಧ ಎಲ್ಲಾ ಜಾತ್ಯತೀತ ಪಕ್ಷಗಳು, ಸಾಮಾಜಿಕ-ಧಾರ್ಮಿಕ ಸಂಘಟನೆಗಳು, ಜಾತ್ಯತೀತ ಪ್ರೇಮಿಗಳು ಮತ್ತೊಂದು ಸುತ್ತಿನ ಪ್ರಜಾಸತ್ತಾತ್ಮಕ ಹಾಗೂ ನ್ಯಾಯಾಂಗ ಹೋರಾಟಕ್ಕೆ ಅಣಿಯಾಗಬೇಕು ಮತ್ತು ಕನ್ನಡ ನಾಡಿನ ಸೌಹಾರ್ದ ಪರಂಪರೆಯನ್ನು ಎತ್ತಿ ಹಿಡಿಯಲು ಕಾರ್ಯೋನ್ಮುಖರಾಗಬೇಕೆಂದು ನಾಸಿರ್ ಪಾಶ ಕರೆ ನೀಡಿದ್ದಾರೆ.

Join Whatsapp