ಚೆಕ್ ಪೋಸ್ಟ್ ತಪ್ಪಿಸಲು ಹೋಗಿ ಸ್ನೇಹಿತನನ್ನೇ ಬಲಿಕೊಟ್ಟ ಬೈಕ್ ಸವಾರ; ಸಿಸಿಟಿವಿಯಲ್ಲಿ ಸೆರೆಯಾಯಿತು ಭೀಕರ ದೃಶ್ಯ!

Prasthutha|

ತೆಲಂಗಾಣ: ಅರಣ್ಯ ಇಲಾಖೆಯ ಚೆಕ್ ಪೋಸ್ಟ್ ತಪ್ಪಿಸಲು ಹೋಗಿ ಹಿಂಬದಿ ಸವಾರನ ಸಾವಿಗೆ ಬೈಕ್ ಸವಾರನೇ ಕಾರಣನಾದ ಘಟನೆ ಮಂಚೇರಿಯಲ್ ಜಿಲ್ಲೆಯ ತಪಲ್ಪುರ್ ಚೆಕ್ ಪೋಸ್ಟ್ ನಲ್ಲಿ ನಡೆದಿದೆ. ಘಟನೆಯು ಮೇ 22ರ ಮಧ್ಯಾಹ್ನ 12.53 ರ ವೇಳೆಗೆ ನಡೆದಿದ್ದು, ಇಂದು ಘಟನೆಗೆ ಸಂಬಂಧಿಸಿದ ಸಿಸಿಟಿವಿ ವೀಡಿಯೋ ವೈರಲ್ ಆಗುತ್ತಿದ್ದಂತೆ ಘಟನೆ ಬೆಳಕಿಗೆ ಬಂದಿದೆ.

- Advertisement -


ಸಿಸಿಟಿವಿಯಲ್ಲಿ ಸೆರೆಯಾಗಿರುವ ವೀಡಿಯೋದಲ್ಲಿ ಯುವಕರಿಬ್ಬರು ಅತಿ ವೇಗವಾಗಿ ಬಂದಿದ್ದು, ಈ ಸಂದರ್ಭ ಚೆಕ್ ಪೋಸ್ಟ್ ಬಳಿ ಪಹರೆಯಲ್ಲಿದ್ದ ಅರಣ್ಯ ಸಿಬ್ಬಂದಿ ಬೈಕ್ ಸವಾರನಿಗೆ ವಾಹನವನ್ನು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ ಅತಿ ವೇಗದಲ್ಲಿದ್ದ ಸವಾರ ಮುನ್ನುಗ್ಗಿ ಬರುತ್ತಿದ್ದದ್ದನ್ನು ಕಂಡ ಅರಣ್ಯ ಸಿಬ್ಬಂದಿ ತಕ್ಷಣವೇ ಗೇಟ್ ಅನ್ನು ತೆರೆಯಲು ಮುಂದಾಗಿದ್ದರೂ, ಬೈಕ್ ಸವಾರ ಗೇಟ್ ನಡಿಯಲ್ಲಿ ನುಸುಳಿಕೊಂಡು ಮುಂದೆ ಸಾಗಿದ್ದಾನೆ. ಆದರೆ ಹಿಂಬದಿ ಸವಾರನ ತಲೆ ವೆಕ್ ಪೋಸ್ಟ್ ನ ಕಬ್ಬಿಣದ ಗೇಟ್ ಗೆ ಬಲವಾಗಿ ಬಡಿದಿದ್ದು ರಸ್ತೆ ಮೇಲೆ ಎಸೆಯಲ್ಪಟ್ಟಿದ್ದಾನೆ. ತಲೆಗೆ ಗಂಭೀರ ಗಾಯಗೊಂಡ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟಿದ್ದಾನೆ ಎನ್ನಲಾಗಿದೆ.


ಆರಂಭದಲ್ಲಿ ಇದು ಅರಣ್ಯ ಇಲಾಖೆ ಸಿಬ್ಬಂದಿಗಳ ತಪ್ಪಿನಿಂದ ನಡೆದ ಅಪಘಾತ ಎಂದು ಗ್ರಾಮಸ್ಥರು ಭಾವಿಸಿಕೊಂಡಿದ್ದರು. ಆದರೆ ಸಿಸಿಟಿವಿ ವೀಡಿಯೋ ಅಪಘಾತದ ಅಸಲಿಯತ್ತು ಮುಂದಿಟ್ಟಿದ್ದು, ನಿರ್ಲಕ್ಷ್ಯತನದ ಹಾಗೂ ಬೇಜವಾಬ್ದಾರಿಯಿಂದ ಕೂಡಿದ ಬೈಕ್ ಚಾಲನೆಗೆ ಸವಾರನ ಮೇಲೆ ಐಪಿಸಿ 304 ಸೆಕ್ಷನ್ ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಅಲ್ಲದೇ, ಅಪಘಾತ ಸಮಯದಲ್ಲಿ ಬೈಕ್ ಸವಾರ ಅತಿಯಾದ ಮದ್ಯ ಸೇವಿಸಿದ್ದ ಎನ್ನುವುದು ಪೊಲೀಸರ ತನಿಖೆಯಲ್ಲಿ ತಿಳಿದು ಬಂದಿದೆ.

- Advertisement -


ಮೃತ ಸಹಸವಾರನನ್ನ ವೆಂಕಟೇಶ್ ಗೌಡ್(30) ಎಂದು ಗುರುತಿಸಲಾಗಿದೆ. ಬೈಕ್ ಚಲಾಯಿಸುತ್ತಿದ್ದ ಚಂದ್ರಶೇಖರ್ ನನ್ನು ಘಟನೆ ನಡೆದ ಕೆಲವೇ ಘಂಟೆಗಳಲ್ಲಿ ಪೊಲೀಸರು ಬಂಧಿಸಿದ್ದಾಗಿ ತಿಳಿದು ಬಂದಿದೆ.

Join Whatsapp