ಬಿಜೆಪಿಯಲ್ಲಿ ತೀವ್ರಗೊಂಡ ಒಳಜಗಳ : ವೇದಿಕೆಯಲ್ಲಿಯೇ ಯತ್ನಾಳ್, ನಿರಾಣಿ ಪರಸ್ಪರ ವಾಗ್ದಾಳಿ!

Prasthutha|

ಬಾಗಲಕೋಟೆ: ರಾಜ್ಯ ಬಿಜೆಪಿಯಲ್ಲಿ ಅಡ್ಜಸ್ಟ್ ಮೆಂಟ್ ರಾಜಕಾರಣದ ಕದನ ತೀವ್ರಗೊಂಡಿದ್ದು, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಮುರುಗೇಶ್ ನಿರಾಣಿ ವೇದಿಕೆಯಲ್ಲೇ ಪರಸ್ಪರ ವಾಗ್ವಾದಕ್ಕಿಳಿದ ಘಟನೆ ನಡೆದಿದೆ.

- Advertisement -

ಬಾಗಲಕೋಟೆಯಲ್ಲಿ ಮಾತಾಡಿದ ನಿರಾಣಿ, ಯಾರಾದ್ರೂ ಬಾಯಿಗೆ ಬಂದಂತೆ ಮಾತಾಡಿದ್ರೆ, ಅದಕ್ಕಿಂತ ಅಪ್ಪನಂತೆ ಮಾತಾಡಲು ನನಗೂ ಬರುತ್ತೆ. ಬೇರೆಯವರ ಬಗ್ಗೆ ಮಾತಾಡುವ ಮೊದಲು ತಾವೇನು ಮಾಡಿದ್ದೇವೆ ಎಂಬ ಬಗ್ಗೆ ಮೊದಲು ಮಾತಾಡ್ಬೇಕು. ಯಾರ್ಯಾರು ಯಾರ್ಯಾರಿಂದ ಸೋತಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಇಷ್ಟುದಿನ ನಾನು ಸುಮ್ಮನಿರೋದು ನನ್ನ ದೌರ್ಬಲ್ಯ ಅಲ್ಲ. ಇಲಿ ಹೊಡೆಯಲು ಹೋಗಿ, ಗಣಪತಿಗೆ ಪೆಟ್ಟು ಬೀಳಬಾರದು ಎಂದು ಸುಮ್ಮನಿದ್ದೇನೆ. ಯಾರಾದ್ರೂ ನನ್ನ ಬಗ್ಗೆ ಮಾತನಾಡುವಾಗ ಎಚ್ಚರದಿಂದ ಇರಲಿ ಎಂದು ಗುಡುಗಿದ್ದಾರೆ.

ಈ ಮೂಲಕ ತಮ್ಮ ಸೋಲಿಗೆ ಯತ್ನಾಳ್ ಕಾರಣ ಎಂದು ಪರೋಕ್ಷವಾಗಿ ದೂಷಿಸಿದ್ದಾರೆ. ಇದಕ್ಕೆ ಯತ್ನಾಳ್ ವೇದಿಕೆಯಲ್ಲೇ ತಿರುಗೇಟು ಕೊಟ್ಟಿದ್ದಾರೆ. ನನ್ನ ಸೋಲಿಸಲು ಎಲ್ಲೆಲ್ಲಿಂದಲೋ ದುಡ್ಡು ಕಳಿಸಿದ್ರು. ನಾನು ನೋಡ್ತೀನಿ, ನಮ್ಮ ಕಡೆನೂ ತಾಕತ್ತಿದೆ ಎನ್ನುವ ಮೂಲಕ ನಿರಾಣಿಗೆ ಎಚ್ಚರಿಕೆ ಕೊಟ್ಟಿದ್ದಾರೆ. ಇದಕ್ಕೆ ಮತ್ತೆ ಪ್ರತ್ಯುತ್ತರ ನೀಡಿದ ನಿರಾಣಿ, ನಾನು ಹಣ ಕೊಟ್ಟಿದ್ದು ಬಿಜೆಪಿಗರಿಗೆ, ಕಾಂಗ್ರೆಸ್ಸಿಗರಿಗಲ್ಲ. ಈ ಅವಮಾನಕ್ಕೆ ಸರಿಯಾದ ಸಮಯದಲ್ಲಿ ಉತ್ತರ ಕೊಡ್ತೀನಿ ಅಂತಾ ವಾರ್ನಿಂಗ್ ನೀಡಿದ್ದಾರೆ.