ಒಂದೂವರೆ ವರ್ಷದ ಮಗಳನ್ನು ಬಿಟ್ಟು 10 ದಿನ ಟ್ರಿಪ್ ಹೋದ ತಾಯಿ ; ಮಗು ಸಾವು

Prasthutha|

ನ್ಯೂಯಾರ್ಕ್: ಪಾಪಿ ತಾಯಿಯೊಬ್ಬಳು ತನ್ನ ಒಂದೂವರೆ ವರ್ಷದ ಮಗಳನ್ನು ಮನೆಯಲ್ಲಿ ಏಕಾಂಗಿಯಾಗಿ ಬಿಟ್ಟು 10 ದಿನಗಳ ಕಾಲ ಟ್ರಿಪ್ ಮಾಡಲು ಹೋಗಿರುವ ಅಮಾನವೀಯ ಘಟನೆ ಅಮೆರಿಕಾದಲ್ಲಿ ನಡೆದಿದೆ.

- Advertisement -

ಹೆಣ್ಣು ಮಗು ಸಾವನ್ನಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಅಲ್ಲಿನ ಪೊಲೀಸರು ಕ್ರಿಸ್ಟಲ್ ಎ.ಕ್ಯಾಂಡೆಲಾರಿಯೊ (31) ಎಂಬಾಕೆಯನ್ನು ಬಂಧಿಸಿದ್ದಾರೆ. ಮೃತ ಮಗುವನ್ನು ಜೈಲಿನ್ (16 ತಿಂಗಳು) ಎಂದು ಗುರುತಿಸಲಾಗಿದೆ.

ಅಮೆರಿಕಾದ ಓಹಿಯೋ ನಿವಾಸಿ ಕ್ರಿಸ್ಟಲ್ ತನ್ನ ಹೆಣ್ಣು ಮಗು ಜೈಲಿನ್ ಳನ್ನು 10 ದಿನಗಳ ಕಾಲ ಮನೆಯಲ್ಲಿ ಒಬ್ಬಂಟಿಯಾಗಿ ಬಿಟ್ಟಿದ್ದಳು. ತನ್ನ ಮಗುವನ್ನು ನೋಡಿಕೊಳ್ಳಿ ಎಂದು ಪಕ್ಕದ ಮನೆಯವರಲ್ಲಿ ಹೇಳಿದ್ದಳು. ಆದರೆ ಆಕೆ ಟ್ರಿಪ್ ಹೊರಡುವಾಗ ಯಾರಿಗೂ ಕರೆ ಮಾಡಲಿಲ್ಲ. ಹೀಗಾಗಿ ಮಗುವನ್ನು ಆಕೆ ಕರೆದುಕೊಂಡು ಹೋಗಿರಬಹುದು ಎಂದು ನೆರೆಮನೆಯವರು ಸುಮ್ಮನಿದ್ದರು. ಆದರೆ ಮನೆಯಲ್ಲಿ ಒಬ್ಬಂಟಿಯಾಗಿದ್ದ ಮಗು ಹೊಟ್ಟೆಗೆ ಏನೂ ಇಲ್ಲದೆ ಮೃತಪಟ್ಟಿದೆ.

- Advertisement -

ಇತ್ತ ಟ್ರಿಪ್ ಮುಗಿಸಿ ಅಂದರೆ ಜೂನ್ 16 ರಂದು ಮನೆಗೆ ವಾಪಸ್ ಬಂದು ನೋಡಿದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹಾಸಿಗೆಯಲ್ಲಿಯೇ ಮಲ-ಮೂತ್ರ ಮಾಡಿ ಅದರ ಮೇಲೆಯೇ ಮಲಗಿರುವಂತೆ ಕಂಡಿತು. ಇದರಿಂದ ಆತಂಕಗೊಂಡ ಕ್ರಿಸ್ಟಲ್ ಕೂಡಲೇ 911ಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ. ತಕ್ಷಣವೇ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಮಗುವನ್ನು ನೋಡಿದಾಗ ಅದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಕ್ರಿಸ್ಟಲ್ ಒಬ್ಬಂಟಿಯಾಗಿ ಮಗುವನ್ನು ಮನೆಯಲ್ಲಿ ಬಿಟ್ಟು ಹೋಗುವುದು ಇದು ಮೊದಲಲ್ಲ. ಈ ಹಿಂದೆಯೂ ಅನೇಕ ಬಾರಿ ಆಕೆ ಮಗುವನ್ನು ಬಿಟ್ಟು ಹೋಗಿದ್ದಾಳೆ. ಮಗುವನ್ನು ಒಬ್ಬಂಟಿಯಾಗಿ ಮನೆಯಲ್ಲಿ ಬಿಟ್ಟು ಹೋಗದಂತೆ ಸಾಕಷ್ಟು ಬಾರಿ ಹೇಳಿದ್ದೇವೆ. ಆದರೆ ಆಕೆ ನಮ್ಮ ಮಾತನ್ನು ಕೇಳುತ್ತಿರಲಿಲ್ಲ ಎಂದು ಸ್ಥಳೀಯ ನಿವಾಸಿಗಳು ಪೊಲೀಸರ ಬಳಿ ದೂರಿದ್ದಾರೆ. ಈ ಘಟನೆ ಸಂಬಂಧ ತಾಯಿ ಕ್ರಿಸ್ಟಲ್ ಕ್ಯಾಂಡೆಲಾರಿಯೊ ವಿರುದ್ಧ ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಬಂಧಿಸಿದ್ದಾರೆ ಎಂದು ವರದಿಯಾಗಿದೆ.