ಅಫ್ಘಾನ್ ಮುಂದೇನು

Prasthutha|

ತಾಲಿಬಾನ್ ಗೆ ಲಭಿಸಿದ ಯಶಸ್ಸನ್ನು ಜಗತ್ತು ನಿಬ್ಬೆರಗಾಗಿ ನೋಡುತ್ತಿದೆ. ಅಮೆರಿಕ ಹಾಗೂ ಇತರ ದೇಶಗಳು ಸೇರಿದಂತೆ ಒಟ್ಟು 42 ದೇಶಗಳು ಜತೆಗೂಡಿದ ಮೈತ್ರಿಕೂಟ ಪಡೆ ಸುದೀರ್ಘ 20 ವರ್ಷಗಳವರೆಗೆ ಭಾರೀ ಯುದ್ಧ ನಡೆಸಿದರೂ ತಾಲಿಬಾನ್ ಕೈಗಳಲ್ಲಿ ಸೋಲನುಭವಿಸಿರುವುದು ಜಗತ್ತನ್ನೇ ಸ್ತಂಭೀಭೂತಗೊಳಿಸಿದೆ. ತಾಲಿಬಾನ್ ಗಳಿಗೆ ಜಾಗತಿಕವಾಗಿ ಪರ-ವಿರೋಧದ ಅಭಿಪ್ರಾಯಗಳು ಕೇಳಿಬರುತ್ತಿರುವುದು ಮತ್ತು ತಾಲಿಬಾನ್ ಕೂಡ ‘ನಮ್ಮದು ಹಿಂದಿನಂತಹ ಆಡಳಿತವಲ್ಲ’ ಎಂದಿರುವುದು ಜಾಗತಿಕವಾಗಿ ತೀವ್ರ ಕುತೂಹಲ ಆಸಕ್ತಿ ಮೂಡಿಸಿದೆ. ಅಫ್ಘಾನಿಸ್ತಾನದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಎಲ್ಲಾ ಮಗ್ಗಲುಗಳಿಂದ ವಿಶ್ಲೇಷಣೆಯ ಅಗತ್ಯವಿದೆ.


ಅಫ್ಘಾನಿಸ್ತಾನದಲ್ಲಿ ಅಮೆರಿಕ ಹಾಗೂ ಸಂಯುಕ್ತ ಪಡೆಗಳು ಅನುಭವಿಸಿದ ಸೋಲು ಈ ಹಿಂದಿನ ಅದರ ವಿಯೆಟ್ನಾಂ ಯುದ್ಧದ ಸೋಲಿಗಿಂತ ಅವಮಾನಕರವಾಗಿದೆಯೆಂದು ಅಮೆರಿಕನ ವಿಶ್ಲೇಷಕರನ್ನೊಳಗೊಂಡಂತೆ ಜಾಗತಿಕ ಚಿಂತಕರ ಅಭಿಪ್ರಾಯವಾಗಿದೆ. ಅಫ್ಘಾನಿಸ್ತಾನದಲ್ಲಿ ನಡೆದಿರುವ ಭೀಕರ ಯುದ್ಧ, ನಾಗರಿಕರ ಸಮೂಹ ಹತ್ಯೆ, ಅರಾಜಕತೆ ಇತ್ಯಾದಿಗಳಿಗೆ ಅಮೆರಿಕ, ರಷ್ಯಾ ಹಾಗೂ ಕೆಲ ಯುರೋಪಿಯನ್ ದೇಶಗಳೇ ಮೂಲ ಕಾರಣ ಎಂಬುದಂತೂ ಸ್ಪಷ್ಟ. ತನ್ನ ಸಾಮ್ರಾಜ್ಯ ವಿಸ್ತರಿಸುವ ರಶ್ಯದ ದುರಾಸೆಯೇ ಅಫ್ಘಾನ್ ಆಡುಂಬೋಲದ ಮೂಲಬೇರು.

- Advertisement -


1978ರಲ್ಲಿ ನಡೆದ ಮಿಲಿಟರಿ ದಂಗೆಯ ಹಿಂದೆ ಅಂದಿನ ಯು ಎಸ್ ಎಸ್ ಆರ್ (ಸಂಯುಕ್ತ ಸೋವಿಯತ್ ಗಣರಾಜ್ಯ) ಅಧ್ಯಕ್ಷರಾಗಿದ್ದ ನಿಯೋನೆಡ್ ಬ್ರೆಝ್ನೇವ್ ಕುಮ್ಮಕ್ಕು ಕಾರಣ. ಅಫ್ಘಾನ್ ಅಧ್ಯಕ್ಷರಾಗಿದ್ದ ಮುಹಮ್ಮದ್ ದಾವೂದ್ ಖಾನ್ ಸರಕಾರದ ವಿರುದ್ಧ ಮಿಲಿಟರಿ ದಂಗೆಯೆದ್ದು ಅಧ್ಯಕ್ಷರು ಹಾಗೂ ಇತರ ಪ್ರಮುಖರ ಹತ್ಯೆ ನಡೆಸಿ ಸರಕಾರವನ್ನು ಪತನಗೊಳಿಸಿ ನೂತನ ಅಧಿಕಾರವನ್ನು ಸ್ಥಾಪಿಸಿದ ವಿದ್ಯಮಾನಕ್ಕೆ ರಷ್ಯಾ ಸಂಪೂರ್ಣ ಸಹಕಾರ ಬೆಂಬಲ ನೀಡಿತ್ತು. ನಂತರ ಬಂದ ನೂರ್ ಮುಹಮ್ಮದ್ ತಾರಕಿ ಅಧ್ಯಕ್ಷತೆಯ ಕಮ್ಯುನಿಸ್ಟ್ ಸರಕಾರ ಸುಧಾರಣೆಯ ಹೆಸರಿನಲ್ಲಿ ಜನಪೀಡಕ ಕಾನೂನು ಹಾಗೂ ನೀತಿಗಳನ್ನು ಜಾರಿಗೆ ತಂದಿತು. ಭೂ ಸುಧಾರಣೆಯ ಹೆಸರಲ್ಲಿ ಜನರ-ರೈತರ ಜಮೀನುಗಳನ್ನು ಬಲವಂತವಾಗಿ ಕಿತ್ತುಕೊಂಡಿತು. ಆಧುನೀಕರಣದ ಹೆಸರಿನಲ್ಲಿ ವಿಪರೀತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡು ಅದು ಅಲ್ಲಿನ ಗ್ರಾಮೀಣರ, ರೈತರ ಹಾಗೂ ಧಾರ್ಮಿಕ ಕೆಂಗಣ್ಣಿಗೆ ಈಡಾಗಿ ಸಾಮಾಜಿಕ ಕೋಲಾಹಲವೆದ್ದಿತು.


ಇಂತಹ ಜನಪೀಡಕ ಹಾಗೂ ಸಂಸ್ಕೃತಿ ವಿರೋಧಿ ಸರಕಾರದ ವಿರುದ್ಧ ಪ್ರತಿರೋಧ ತೋರಿದ ಉಲಮಾಗಳನ್ನು ಹಾಗೂ ಸಾಮಾಜಿಕ ನೇತಾರರನ್ನು ಅಂದಿನ ಕಮ್ಯುನಿಸ್ಟ್ ಸರಕಾರ ನಿರ್ದಯವಾಗಿ ಕೊಂದು ಹಾಕಿತ್ತು. ಸುಮಾರು 27,000 ರಾಜಕೀಯ ಕೈದಿಗಳನ್ನು ಪುಲ್ ಇ ಚರ್ ಕಿಯಲ್ಲಿ ಹತ್ಯೆಗೈದಿತ್ತು. ಹತ್ಯೆಗೊಳಗಾದವರಲ್ಲಿ ಮುಸ್ಲಿಮ್ ಉಲೆಮಾಗಳು (ಮುಲ್ಲಾ ಗಳೆಂದೇ ಪ್ರಸಿದ್ಧಿ) ಒಳಗೊಂಡಿದ್ದರು. ಇದುವೇ ಅಫ್ಘಾನ್ ಆಡುಂಬೋಲದ ಆರಂಭ.

1978ರಲ್ಲಿ ಅಂದಿನ ದಮನಕಾರಿ ಸರಕಾರದ ವಿರುದ್ಧ ಮೊತ್ತ ಮೊದಲ ದಂಗೆ ಎದ್ದಿರುವುದು ಕುವಾರ ಪ್ರಾಂತ್ಯದಲ್ಲಿ. ಸರಕಾರಿ ಪಡೆಗಳ ವಿರುದ್ಧ ಗೆರಿಲ್ಲಾ ಆಕ್ರಮಣಗಳು ವ್ಯಾಪಕವಾಗಿ ನಡೆಯಿತು. ಅಂದಿನ ಯು ಎಸ್ ಎಸ್ ಆರ್ (ರಷ್ಯಾ) ಅಧ್ಯಕ್ಷರಾಗಿದ್ದ ಬ್ರೆಝ್ನೇವ್ ರಷ್ಯನ್ ಪಡೆಗಳನ್ನು ಅಫ್ಘಾನ್ ಗೆ ಕಳುಹಿಸಿದರು. ರಷ್ಯನ್ ಪಡೆ ಅಫ್ಘಾನ್ ನಲ್ಲಿ ಮಿಲಿಟರಿ ನೆಲೆಯನ್ನು ಸ್ಥಾಪಿಸಿತು ಹಾಗೂ ಜನಗಳ ಮೇಲೆ ನೇರ ಆಕ್ರಮಣ ನಡೆಸಿ ಹತ್ಯಾಕಾಂಡಗೈದಿತು.


ಮುಲ್ಲಾಗಳ ಹಾಗೂ ಸಾಮಾಜಿಕ ಮುಖಂಡರ ನೇತೃತ್ವದಲ್ಲಿ ಜನ ಸಂಘಟಿತರಾಗಿ ರಷ್ಯನ್ ಪಡೆಗಳ ವಿರುದ್ಧ ಯುದ್ಧವನ್ನೇ ಪ್ರಾರಂಭಿಸಿದರು. 1979ರಿಂದ ಪ್ರಾರಂಭವಾದ ಈ ಯುದ್ಧ 1989ರ ವರೆಗೆ, ಅಂದರೆ 9 ವರ್ಷಗಳ ಕಾಲ ನಡೆಯಿತು. ರಷ್ಯಾದ ಸಾಂಪ್ರದಾಯಿಕ ಶತ್ರುವಾಗಿದ್ದ ಅಮೆರಿಕ, ಅಫ್ಫಾನ್ನರಿಗೆ ಸಂಪೂರ್ಣ ಸಹಾಯ ನೀಡಿತು. ಶಸ್ತ್ರಾಸ್ತ್ರ, ಮಿಲಿಟರಿ ನೆರವು, ಹಣಕಾಸಿನ ಪೂರೈಕೆ ನೀಡಿತು. ಈ ಯುದ್ಧದಲ್ಲಿ ಅಫ್ಘಾನಿನ ಸುಮಾರು ಶೇಕಡಾ 11ರಷ್ಟು ಜನಸಂಖ್ಯೆ ರಷ್ಯನ್ ಮಿಲಿಟರಿಗಳ ಕೈಯಲ್ಲಿ ಹತ್ಯೆಗೈಯ್ಯಲ್ಪಟ್ಟಿತು. ಅಂದರೆ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಕೊಲ್ಲಲ್ಪಟ್ಟಿದ್ದರು. 30 ಲಕ್ಷಕ್ಕೂ ಹೆಚ್ಚು ಜನ ಗಾಯಾಳುಗಳಾದರು. 20 ಲಕ್ಷಕ್ಕೂ ಹೆಚ್ಚು ಜನ ನಿರ್ವಸಿತರಾದರು.


ಅಫ್ಘಾನಿಸ್ತಾನರ ಹೋರಾಟ, ಶೌರ್ಯದ ಮುಂದೆ ರಷ್ಯನ್ ಪಡೆಗಳ ಶಕ್ತಿ ಕರಗಿಹೋಯಿತು. ರಷ್ಯಾದ ಮಿಲಿಟರಿಯಲ್ಲೂ ಸುಮಾರು 50 ಸಾವಿರಕ್ಕೂ ಹೆಚ್ಚು ಸೈನಿಕರು ಹತ್ಯೆಗೀಡಾದರು. ಹಣ ಹಾಗೂ ಮಿಲಿಟರಿ ಶಕ್ತಿಯ ಹೊಳೆಯನ್ನೇ ಹರಿಸಿದ್ದ ರಷ್ಯಾ, ಕಡೆಗೆ ಸೋತು ಸುಣ್ಣವಾಗಿ, ತನ್ನ ದೇಶದ ಆರ್ಥಿಕ ಶಕ್ತಿ ಹಾಗೂ ಹಿಡಿತವನ್ನೇ ಕಳೆದುಕೊಂಡಿತು. ಮುಂದೆ ಇದು ಸಂಯುಕ್ತ ರಷ್ಯನ್ ಗಣರಾಜ್ಯದ ಪತನಕ್ಕೆ ನಾಂದಿಯಾಗಿ ರಷ್ಯ ಚೂರು ಚೂರು ಆಗಿ ಒಡೆಯಿತು. 9 ವರ್ಷಗಳಲ್ಲಿ ರಷ್ಯ ಅಫ್ಘಾನಿಸ್ತಾನದ ಹಳ್ಳಿಗಳ ಮೇಲೆ ಬಾಂಬ್ ಮಳೆ ಸುರಿದು ನಾಶ ಮಾಡಿತ್ತು. ರೈತರಿಗೆ ವರದಾನವಾಗಿದ್ದ ಕೆರೆ ಕಾಲುವೆಗಳನ್ನು ಒಡೆದು ಹಾಕಿತ್ತು. ಜನವಸತಿಗಳ ಮೇಲೂ ಬಾಂಬ್ ಸುರಿದು ಸಾಮೂಹಿಕ ಹತ್ಯಾಕಾಂಡ ನಡೆಸಿತ್ತು. ರಷ್ಯನ್ ಪಡೆಗಳ ವಿರುದ್ಧ ‘ಮುಜಾಹಿದೀನ್’ ಗಳ ದಢ ಹಾಗೂ ಅಚಲ ಹೋರಾಟವು ರಷ್ಯಾದ ಬೆನ್ನೆಲುಬನ್ನೇ ಮುರಿದು ಹಾಕಿತ್ತು. ರಷ್ಯಾದ ಈ ದುರಾಕ್ರಮಣ ಹಾಗೂ ಭಯೋತ್ಪಾದನೆಯನ್ನು ವಿರೋಧಿಸಿ ಅಮೆರಿಕವು ರಷ್ಯಾದಲ್ಲಿ ನಡೆದ ‘ಬೇಸಿಗೆಯ ಒಲಿಂಪಿಕ್’ ಅನ್ನು ಬಹಿಷ್ಕರಿಸಿತು. ಅದೇ ರೀತಿ ರಷ್ಯಾ ಕೂಡ 1984ರಲ್ಲಿ ಲಾಸ್ ಎಂಜಲೀಸ್ ನಲ್ಲಿ ನಡೆದಿದ್ದ ಒಲಿಂಪಿಕ್ಸ್ ಅನ್ನು ಬಹಿಷ್ಕರಿಸಿತು.


ಅಲ್ಲಿಗೇ ಅಫ್ಘಾನ್ ನಲ್ಲಿ ವಸಾಹತುಶಾಹಿಗಳ ಆಕ್ರಮಣ ನಿಲ್ಲಲಿಲ್ಲ. 9 ವರ್ಷಗಳ ಅಫ್ಘಾನ್ ಯುದ್ಧದಲ್ಲಿ ಅಲ್ಲಿಗೆ ನುಸುಳಿದ್ದ ಅಮೆರಿಕನ್ ಹಿತಾಸಕ್ತಿ ಹಾಗೂ ಮಿಲಿಟರಿ ನೆಲೆಗಳು ಪಕ್ಕದ ಇರಾಕ್ ನಲ್ಲೂ ಹತ್ಯಾಕಾಂಡ, ಹಿಂಸೆ, ನಾಶ ನಡೆಸಿತ್ತು. ಇರಾಕಿಗಳ ಮಾರಣಹೋಮ ನಡೆಸಿ ಅಲ್ಲಿ ನರಕ ಸದೃಶ ಸ್ಥಿತಿಯನ್ನು ನಿರ್ಮಿಸಿತ್ತು. ಇತ್ತ ಅಫ್ಘಾನಿಸ್ತಾನದಲ್ಲಿ ಮುಜಾಹಿದೀನ್ ಗಳು ‘ತಾಲಿಬಾನ್’ ಸರಕಾರವನ್ನು ರಚಿಸಿದರು. ಮುಲ್ಲಾ ಉಮರ್ ನೇತೃತ್ವದಲ್ಲಿ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ‘ಶರಿಯಾ’ ಸರಕಾರವನ್ನು ತುಂಬಾ ಕಠಿಣವಾಗಿ ಜಾರಿಗೊಳಿಸಿಸಲಾಯಿತು. ಹೊರಗಿನ ಯಾವುದೇ ವಸಾಹಿತು ಶಕ್ತಿಗಳು ಇನ್ನು ಮುಂದೆ ಅಫ್ಘಾನಿಸ್ತಾನದಲ್ಲಿ ನುಸುಳಬಾರದೆಂಬ ದೃಢ ಸಂಕಲ್ಪ ಹಾಗೂ ಛಿದ್ರಗೊಂಡ ಅಫ್ಘಾನಿಸ್ತಾನವನ್ನು ಮರು ನಿರ್ಮಿಸಬೇಕೆಂಬ ಯೋಜನೆಯೊಂದಿಗೆ ತಾಲಿಬಾನ್ ಸರಕಾರ ಕಾರ್ಯನಿರ್ವಹಿಸಲು ಆರಂಭಿಸಿತು. 1994- 1996ರ ವರೆಗಿನ ಅವಧಿಯಲ್ಲಿ ತಾಲಿಬಾನ್ ಅಫ್ಘಾನಿಸ್ತಾನದ ಆಂತರಿಕ ಗುಂಪು ಹಾಗೂ ರಾಜಕೀಯ ಹಿತಾಸಕ್ತಿಗಳ ವಿರುದ್ಧ ಸೈನಿಕ ಸಂಘರ್ಷ ನಡೆಸಿ 1996ರಲ್ಲಿ ಸರಕಾರ ಸ್ಥಾಪಿಸಿ 2001ರವರೆಗೆ ಸರಕಾರ ನಡೆಸಿತು.


ಮುಂದೆ ಅಮೆರಿಕದ ವರ್ಲ್ಡ್ ಟ್ರೇಡ್ ಸೆಂಟರ್ ನ ಮೇಲೆ ನಡೆದ ಆಕ್ರಮಣದ ನಂತರ ತಾಲಿಬಾನ್ ಸರಕಾರವನ್ನು ಅಮೆರಿಕ ಹಾಗೂ ನ್ಯಾಟೋ ಸಂಯುಕ್ತ ಪಡೆ ಬುಡಮೇಲುಗೊಳಿಸಿತು. 2002ರಲ್ಲಿ ಅಮೆರಿಕ, ನ್ಯಾಟೋ ಪಡೆಗಳು ತಾಲಿಬಾನ್ ಮೇಲೆ ಭೀಕರ ದಾಳಿ ನಡೆಸಿತು. ಎಲ್ಲಾ ಅತ್ಯಾಧುನಿಕ ಯುದ್ಧಾಸ್ತ್ರಗಳು, ಬಾಂಬ್ ಹಾಗೂ ಮಾರಕಾಸ್ತ್ರಗಳನ್ನು ಬಳಸಿ ನಡೆಸಿದ ಸುದೀರ್ಘ 20 ವರ್ಷಗಳ ಯುದ್ಧದಲ್ಲಿ ಹತರಾದ ಅಫ್ಘಾನಿಸ್ತಾನ ಪ್ರಜೆಗಳು ಸೇರಿದಂತೆ ಒಟ್ಟು ಸಂಖ್ಯೆ ಎಷ್ಟು ಗೊತ್ತೇ? ಬರೋಬ್ಬರಿ 2.15 ಲಕ್ಷ. ಅಮೆರಿಕದ ಮೇಲೆ ಅಲ್ ಖೈದಾ ದಾಳಿ ನಡೆಸಿದೆ ಎಂಬ ಕಾರಣಕ್ಕೆ ಅಲ್ ಖೈದಾ ಹಾಗೂ ತಾಲಿಬಾನ್ ಮುಜಾಹಿದೀನ್ ಗಳನ್ನು ಕೊಲ್ಲಲು ಅಥವಾ ಸೆರೆಹಿಡಿಯಲು ಅಫ್ಘಾನಿಸ್ತಾನದ ಬಹುತೇಕ ಎಲ್ಲಾ ಗುಡ್ಡಗಾಡುಗಳ ಮೇಲೆ ಕ್ಲಷ್ಟರ್ ಬಾಂಬು, ಬಂಕರ್ ಬಾಂಬ್, ಕಾರ್ಪೆಟ್ ಬಾಂಬು ಇತ್ಯಾದಿಗಳನ್ನು ನ್ಯಾಟೋ ಪಡೆ ಸುರಿದಿತ್ತು. ರಷ್ಯಾ ನಡೆಸಿದ ಒಂಭತ್ತು ವರ್ಷಗಳ ಯುದ್ಧದಲ್ಲಿ ಸುರಿದಿದ್ದ ಬಾಂಬ್ ಗಳು ಹಾಗೂ ಅಲ್ಲಲ್ಲಿ ಹುದುಗಿಸಿದ್ದ ನೆಲ ಬಾಂಬ್ ಗಳು ಈಗಲೂ ಅಲ್ಲಲ್ಲಿ ಪತ್ತೆಯಾಗುತ್ತಿವೆ. ಅವುಗಳು ಸ್ಫೋಟವಾಗಿ ಜನ ಕೊಲ್ಲಲ್ಪಟ್ಟಿದ್ದು ಅಥವಾ ತೀವ್ರ ಗಾಯಾಳು ಗಳಾಗಿದ್ದ ವರದಿಗಳು ನಿರಂತರ ಕೇಳಿಬರುತ್ತಿವೆ.

ಬಹುಶಃ ಆಧುನಿಕ ಜಗತ್ತಿನ ಇತಿಹಾಸದಲ್ಲಿ ಅಫ್ಘಾನಿಸ್ತಾನದ ಯುದ್ಧದಲ್ಲಿ ಸಿಕ್ಕಿರುವ ಫಲಿತಾಂಶಗಳು ಅನೇಕ ಸತ್ಯಾಸತ್ಯತೆಗಳನ್ನು ಎತ್ತಿ ತೋರಿಸುತ್ತದೆ. ಇಂದು ಮಾಧ್ಯಮಗಳಲ್ಲಿರುವ ಕೆಲವು ಪೂರ್ವಗ್ರಹ ಪೀಡಿತ ಶಕ್ತಿಗಳು ತಾಲಿಬಾನ್ ನಾಯಕರನ್ನು ಜೀವವಿರೋಧಿ ಅಥವಾ ಮತಾಂಧರೆಂದು ಬಿಂಬಿಸುತ್ತಿವೆಯಾದರೂ ಅಮೆರಿಕ, ಬ್ರಿಟನ್, ನ್ಯಾಟೋ ಮುಂತಾದ ಶಕ್ತಿಗಳು ನಡೆಸಿರುವ ಲಕ್ಷೋಪಲಕ್ಷ ಮಂದಿಗಳ ಹತ್ಯಾಕಾಂಡ, ಕ್ರೂರ ಚಿತ್ರಹಿಂಸೆ ಹಾಗೂ ಸಣ್ಣಪುಟ್ಟ ದೇಶಗಳ ಮೇಲೆ ನಡೆಸಿದ ಅನ್ಯಾಯ ಹಾಗೂ ವಿನಾಕಾರಣದ ಆಕ್ರಮಣಗಳ ಮೇಲೆ ಚಕಾರವೆತ್ತದಿರುವುದರ ಹಿಂದಿನ ಮನಸ್ಸುಗಳು ಯಾವುದೆಂಬುದು ಎಲ್ಲರೂ ಚೆನ್ನಾಗಿ ಬಲ್ಲರು. ತಾಲಿಬಾನ್ ಗಳ ಕೈಯಲ್ಲಿ ಅದೇನೂ ಅತ್ಯಾಧುನಿಕ ಯುದ್ಧಾಸ್ತ್ರಗಳಿಲ್ಲ. ಎಕೆ-47 ಅಥವಾ ಕೋವಿಗಳನ್ನು ಹಿಡಿದುಕೊಂಡು ಬೃಹತ್ ಮಿಲಿಟರಿ ಶಕ್ತಿಗಳ ವಿರುದ್ಧ ಯುದ್ಧ ಮಾಡಿ ಜಯಿಸಿದ್ದುದೇನೂ ಆಗಿದೆ. ಇನ್ನು ಮುಂದಿನ ನಡೆ ಏನು? ಎಂಬುದನ್ನು ವಿಶ್ಲೇಷಿಸಬೇಕಾಗಿದೆ.

ಸಾಮ್ರಾಜ್ಯಶಾಹಿ ದೇಶಗಳ ಸಾಮ್ರಾಜ್ಯ ವಿಸ್ತರಣಾ ಪ್ರವೃತ್ತಿ ಹಿಂದಿನಿಂದಲೂ ನಡೆದುಕೊಂಡು ಬರುತ್ತಿದೆ. ಹಿಂದೆ ಅರಸರ ಕಾಲದಲ್ಲಿ ದೇಶದ ಮೇಲೆ ಆಕ್ರಮಣ ಮಾಡಿ ಭೂ ಪ್ರದೇಶವನ್ನು ವಿಸ್ತರಿಸಿ ಅಲ್ಲಿ ರಾಜ್ಯಪಾಲನನ್ನೋ, ಆಡಳಿತಾಧಿಕಾರಿಯನ್ನೋ ನೇಮಿಸಲಾಗುತ್ತಿತ್ತು. ಆಧುನಿಕ ಕಾಲದಲ್ಲೂ ಈ ಪ್ರವೃತ್ತಿ ಮುಂದುವರಿಯುತ್ತಿದೆ. ಸ್ವತಂತ್ರ ದೇಶವೊಂದರ ಮೇಲೆ ಆಕ್ರಮಣಗೈಯ್ಯಲು ಭಯೋತ್ಪಾದನೆಯ ನೆಪ ಸಾಕು. ಶಂಕಿತ ಉಗ್ರರು ಅಡಗಿದ್ದಾರೆ ಎಂಬ ಕಾರಣ ನೀಡಿ ಸಾಮ್ರಾಜ್ಯಶಾಹಿ ದೇಶಗಳು ಬಡ ದೇಶಗಳ ಮೇಲೆ ದಾಳಿ ನಡೆಸಿ ಅಲ್ಲಿ ತಮ್ಮ ಕೈಗೊಂಬೆ ಸರ್ಕಾರ ಸ್ಥಾಪಿಸಿ, ಆ ದೇಶಗಳ ಸಂಪತ್ತುಗಳನ್ನು ದೋಚುವ ದುಷ್ಟತನ ಪ್ರದರ್ಶಿಸುತ್ತಿವೆ. ಈ ಅಕ್ರಮಕ್ಕೆ ವಿಶ್ವಸಂಸ್ಥೆಯ ಮುದ್ರೆ ಕೂಡ ಸಿಗುವುದರಿಂದ ಇವು ಕಾನೂನುಬದ್ಧ ಕಾರ್ಯಾಚರಣೆಯಾಗಿ ಪರಿಗಣಿತವಾಗುತ್ತದೆ.


ಇಂತಹ ಬೂಟಾಟಿಕೆಗಳು ನಿಲ್ಲದ ಹೊರತು ಅಫ್ಘಾನ್ ನಂತಹ ಬಡ ದೇಶಗಳು ಸ್ವತಂತ್ರವಾಗಿ ಆಡಳಿತ ನಡೆಸಲು ಸಾಧ್ಯವಾಗುವುದಿಲ್ಲ. ಭವಿಷ್ಯದಲ್ಲಿ ಸುಳ್ಳು ನೆಪಗಳನ್ನಿಟ್ಟು ಸಂಪತ್ಭರಿತ ದೇಶಗಳ ಮೇಲೆ ದಾಳಿ ನಡೆಯದಂತಹ ವಾತಾವರಣ ಸಷ್ಟಿಯಾದರೆ ಜಗತ್ತಿನಲ್ಲಿ ಶಾಂತಿ ನೆಲೆಸಬಹುದು. ಅದಕ್ಕೆ ವಿಶ್ವಸಂಸ್ಥೆ ಮತ್ತು ಸದಸ್ಯ ರಾಷ್ಟ್ರಗಳು ಬದ್ಧತೆ ಪ್ರದರ್ಶಿಸಬೇಕಷ್ಟೇ.

- Advertisement -