ಜಾತಿ ಆಧಾರಿತ ಜನಗಣತಿಗೆ ಹೆಚ್ಚಿದ ಒತ್ತಡ: ತ್ವರಿತ ನಿರ್ಧಾರಕ್ಕೆ ಪ್ರಧಾನಿಯನ್ನು ಒತ್ತಾಯಿಸಿದ ಬಿಜೆಪಿ ಸಂಸದರು

Prasthutha|

ಹೈದರಾಬಾದ್: ಬಿಜೆಪಿಯ ಮೈತ್ರಿ ಪಕ್ಷವಾಗಿರುವ ಜನತಾದಳ – ಯುನೈಟೆಡ್ (ಜೆಡಿಯು) ಕಡೆಯಿಂದ ಜಾತಿ ಆಧಾರಿತ ಜನ ಗಣತಿಗೆ ಒತ್ತಡ ಹೆಚ್ಚುತ್ತಿದೆ. ಜಾತಿ ಆಧಾರಿತ ಜನಗಣತಿ ನಡೆಸುವ ಸಂಬಂಧ ಈಗಾಗಲೇ ಪ್ರಧಾನಿ ಮೋದಿ ಅವರು ಜೆಡಿಯುನೊಂದಿಗೆ ಎರಡು ಸಭೆಗಳನ್ನು ಆಯೋಜಿಸಿದ್ದರು. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ ಅವರು ಜಾತಿ ಆಧಾರಿತ ಜನಗಣತಿಗೆ ಸಂಬಂಧಿಸಿದಂತೆ ತನ್ನ ತ್ವರಿತ ನಿರ್ಧಾರವನ್ನು ಪ್ರಕಟಿಸಲಿದ್ದಾರೆ ಎಂದು ತೆಲಂಗಾಣ ಬಿಜೆಪಿ ಸಂಸದರು ಆಗ್ರಹಿಸಿದ್ದಾರೆ.

- Advertisement -

ಈ ಸಂಬಂಧ ಪ್ರಧಾನಿ ಮೋದಿಗೆ ಪತ್ರ ಬರೆದ ಬಿಜೆಪಿ ಸಂಸದ ಆನಂದ್ ಭಾಸ್ಕರ್ ರಾಪೋಲು, ಜನಗಣತಿ ರಿಜಿಸ್ಟಾರ್ ಮತ್ತು ಸಂಬಂಧಿತ ಸಚಿವಾಲಯವು ಜಾತಿಗಣತಿಯನ್ನು ನಡೆಸಲು ಬೇಕಾದ ಎಲ್ಲಾ ಅಗತ್ಯ ಸಿದ್ಧತೆ ನಡೆಸುತ್ತಿದೆ ಎಂದು ತಿಳಿಸಿದರು.
ಪಾರದರ್ಶಕ ಮತ್ತು ಜಾತಿ ಆಧಾರಿತ ಜನಗಣತಿಯ ಮೂಲಕ ಕಲ್ಯಾಣ ರಾಷ್ಟ್ರದ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಧಾನಿಯವರ ತೀರ್ಮಾನವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಅವರು ಹೇಳಿದರು.

ಒಬಿಸಿಗಳ ಕಲ್ಯಾಣದ ಹಿತದೃಷ್ಟಿಯಿಂದ ಸಂಸದೀಯ ಸಮಿತಿಯು ಜಾತಿ ಆಧಾರಿತ ಜನಗಣತಿಗೆ ಶಿಫಾರಸ್ಸು ಮಾಡಿದೆ. ಸಾಮಾಜಿಕ ನ್ಯಾಯ, ಸಬಲೀಕರಣ ಮತ್ತು ಗೃಹ ಸಚಿವಾಲಯ ಜಂಟಿಯಾಗಿ ಜಾತಿ ಆಧಾರಿತ ಜನಗಣತಿಗೆ ಸಕಲ ಸಿದ್ದತೆಯನ್ನು ಪೂರ್ತಿಗೊಳಿಸಿದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

- Advertisement -

ಈ ಹಿಂದೆ ಆಗಸ್ಟ್ 23 ರಂದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನೇತೃತ್ವದ 11 ಸದಸ್ಯರ ನಿಯೋಗವು ಜನಗಣತಿಯಲ್ಲಿ ಓಬಿಸಿಗಳ ಜಾತಿವಾರು ಎಣಿಕೆಯನ್ನು ಶೀಘ್ರವಾಗಿ ನಡೆಸುವಂತೆ ಒತ್ತಾಯಿಸಲು ಪ್ರಧಾನಿ ಮೋದಿಯವರನ್ನು ಭೇಟಿ ಮಾಡಿತು. ಎಸ್ಸಿ ಮತ್ತು ಎಸ್ಟಿಗಳಿಗೆ ಹೊರತುಪಡಿಸಿ ಜಾತಿವಾರು ಜನಗಣತಿಯನ್ನು ನಡೆಸುವುದಿಲ್ಲವೆಂದು ಜುಲೈನಲ್ಲಿ ಒಕ್ಕೂಟ ಸರ್ಕಾರ ಲೋಕಸಭೆಗೆ ತಿಳಿಸಿತ್ತು.

Join Whatsapp