ಮಹಿಳೆಗೆ ಜವಾಬ್ದಾರಿ ನೀಡದೆಯೇ ಅನುಭವ ಇಲ್ಲ ಎನ್ನುತ್ತಾರೆ: ಡಾ.ಆರ್ ಇಂದಿರಾ ವಿಷಾದ

Prasthutha|

ಮಂಡ್ಯ: ಇಂದಿನ ದಿನಮಾನಗಳಲ್ಲಿ ಮಹಿಳಾ ಪ್ರಾತಿನಿಧ್ಯವನ್ನು ಇಲ್ಲದಂತೆ ಮಾಡುವ ವ್ಯವಸ್ಥಿತ ಹುನ್ನಾರಗಳು ನಡೆಯುತ್ತಿವೆ. ಮಹಿಳೆಯರಿಗೆ ಅನುಭವ ಇಲ್ಲ ಎಂಬ ಹಣೆಪಟ್ಟಿ ಕಟ್ಟಿ ಹಿಂದೆ ಸರಿಸಲಾಗುತ್ತಿದೆ. ಜವಾಬ್ದಾರಿ ಕೊಟ್ಟಾಗಲೇ ಅನುಭವ ಬರುತ್ತದೆ. ಹಾಗಾಗಿ ಪಟ್ಟು ಹಿಡಿದು ಜವಾಬ್ದಾರಿ ತೆಗೆದುಕೊಳ್ಳಲು ಮಹಿಳೆ ಹಿಂದೆ ಮುಂದೆ ನೋಡಬಾರದು ಎಂದು ಸಾಹಿತಿ, ಹಿರಿಯ ಬರಹಗಾರ್ತಿ ಡಾ. ಆರ್ ಇಂದಿರಾ ಹೇಳಿದ್ದಾರೆ.

- Advertisement -

ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ಸ್ (ಸಿಐಟಿಯು) ಸಾವಿತ್ರಿ ಬಾಯಿ ಫುಲೆ ಜನ್ಮ ದಿನ ಹಾಗೂ ಸಿಐಟಿಯು 17ನೇ ಅಖಿಲ ಭಾರತ ಸಮ್ಮೇಳನದ ಪ್ರಯುಕ್ತ ಮಂಡ್ಯದಲ್ಲಿ “ದುಡಿಯುವ ಮಹಿಳೆಯರ ತಲ್ಲಣಗಳು” ಎಂಬ ವಿಚಾರ ಸಂಕಿರಣದಲ್ಲಿ ಸಾವಿತ್ರಿ ಬಾಯಿ ಫುಲೆ ಅವರ ಭಾವಚಿತ್ರ ಪುಷ್ಪನಮನವನ್ನು ಸಲ್ಲಿಸಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

  ನಾವು ಮಾಡುವ ಕೆಲಸದ ಮೇಲೆ ಪ್ರೀತಿ ಇರಬೇಕು. ಆ ಕೆಲಸವನ್ನು ಪುರುಷರು ಗೌರವಿಸಬೇಕು. ಶೇ. 40ರಷ್ಟು ಕುಟುಂಬಗಳು ಹೆಣ್ಣ ಮಕ್ಕಳ ಆದಾಯದಿಂದ ನಡೆಯುತ್ತಿದೆ. ಆದರು ನಾಯಕ, ಯಜಮಾನ ಎಂಬ ಪದಗಳಿಂದ ಪುರುಷರನ್ನು ಕರೆಯಲಾಗುತ್ತಿದೆ. ಸದ್ಯ ಶೇ. 10ರಷ್ಟು ಮಾತ್ರ ಪ್ರಾತಿನಿಧ್ಯ ಇದೆ. ನೇಮಕಾತಿ ವಿಚಾರದಲ್ಲಿ ಮಹಿಳೆಯನ್ನು ಕೊನೆ ಅವಧಿಯಲ್ಲಿ ಪರಿಗಣಿಸಲಾಗುತ್ತಿದೆ ಎಂದರು.

- Advertisement -

ಶಿಕ್ಷಣದಲ್ಲಿ ಮಹಿಳೆಯರಿಗೆ ಆದ್ಯತೆ ಸಿಗುತ್ತಿದೆ. ಆದರೆ ಅದಕ್ಕೆ ತಕ್ಕಂತೆ ಉದ್ಯೋಗದಲ್ಲಿ ಆಧ್ಯತೆ ಸಿಗುತ್ತಿಲ್ಲ. ಹೆಣ್ಣು ತನ್ನ ಬದುಕಿನ ನಿರ್ಧಾರಗಳನ್ನು ಯಾವಾಗ ತೆಗೆದುಕೊಳ್ಳುತ್ತಾಳೋ ಆಗ ಸಶಕ್ತಳಾಗಿದ್ದಾಳೆ ಎಂದು ಅರ್ಥ ಎಂದು ತಿಳಿಸಿದರು.

ಕೆಲಸದ ಸ್ಥಳದಲ್ಲಿ ಲೈಂಗಿಕ ಕುರುಕುಳ ವಿರೋಧಿ ಸಮಿತಿ ರಚಿಸಬೇಕು

ಕಾರ್ಯಕ್ರಮವನ್ನು ಉದ್ದೇಶಿಸಿ ಮಂಡ್ಯ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಎ.ಎಂ. ನಳಿನಿ ಮಾತನಾಡಿ, ಕೆಲಸ ಮಾಡುವ ಸ್ಥಳದಲ್ಲಿ ಮಹಿಳೆಯರು ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಮೈ-ಕೈ ಮುಟ್ಟುವುದು, ಸನ್ನೆ ಮಾಡುವುದು ಇದಕ್ಕೆ ವಿರೋಧಿಸಿದರೆ ಹೆಚ್ಚುವರಿ ಕೆಲಸ ಇಲ್ಲವೆ ಜನರ ನಡುವೆ ಅವಮಾನಿಸುವ ಕೆಲಸಗಳು ನಡೆಯುತ್ತಲಿವೆ. ಕೆಲಸದ ಸ್ಥಳದಲ್ಲಿ ಲೈಂಗಿಕ ಕುರುಕುಳ ವಿರೋಧಿ ಸಮಿತಿ ರಚನೆ ಆಗಬೇಕು ಎಂದು ತಿಳಿಸಿದರು.

ಕೆಲಸ ಮಾಡುವ ಸ್ಥಳ ಅಥವಾ ಕಚೇರಿಗಳಲ್ಲಿ 10 ಜನಕ್ಕಿಂತ ಹೆಚ್ಚು ಮಹಿಳೆಯರು ಕೆಲಸ ಮಾಡುತ್ತಿದ್ದರೆ ಕಡ್ಡಾಯವಾಗಿ ಸಮಿತಿ ರಚಿಸಬೇಕು ಹಾಗೂ ಈ ಸಮಿತಿಯ ಹಕ್ಕು, ರಕ್ಷಣೆಯ ಕುರಿತು ನೋಟೀಸ್ ಬೋರ್ಡ್ ನಲ್ಲಿ ಕಾಣುವಂತೆ ಹಾಕಬೇಕು. 10 ಕ್ಕಿಂತ ಕಡಿಮೆ ಇರುವ ಕಚೇರಿಗಳಲ್ಲಿ ಜಿಲ್ಲಾ ಮಟ್ಟದ ಸಮಿತಿಯೊಂದನ್ನು ರಚಿಸಬೇಕು. ಅದಕ್ಕೊಬ್ಬರನ್ನು ಸಮಿತಿಗೆ ನೇಮಿಸಿ ಅವರ ಮೂಲಕ ಮಹಿಳೆಯರ ಸುರಕ್ಷತೆ ರಕ್ಷಣೆ ಕುರಿತು ಚರ್ಚಿಸಬೇಕು. ಈ ಕುರಿತು ಜಾಗೃತಿ ಮೂಡಿಸುವಂತಹ ಕೆಲಸ ಈ ಸಮಿತಿಯದ್ದಾಗಿದೆ ಎಂದು ತಿಳಿಸಿದರು.

ದೌರ್ಜನ್ಯದಂತಹ ಘಟನೆ ನಡೆದರೆ ಆಕೆ, ಇಲ್ಲವೆ ಆಕೆಯ ಕುಟುಂಬದ ಸದಸ್ಯರು, ಇಲ್ಲವೆ ಸ್ನೇಹಿತರು ದೂರು ಸಲ್ಲಿಸಬಹುದಾಗಿದೆ ಎಂದು ಎ.ಎಣ. ನಳಿನಿ ಹೇಳಿದರು.

ಶೋಷಣೆ-ಸಂಕಷ್ಟಗಳ ನಡುವೆ ದುಡಿಯುವ ಮಹಿಳೆ

ದುಡಿಯುವ ಮಹಿಳೆಯರ ಸಮನ್ವಯ ಸಮಿತಿ(ಸಿಐಟಿಯು) ರಾಜ್ಯ ಸಂಚಾಲಕಿ ಹೆಚ್ ಎಸ್ ಸುನಂದಾ ಮಾತನಾಡಿ, ದುಡಿಯುವ ಸ್ಥಳದಲ್ಲಿ ಮಹಿಳೆಯರಿಗೆ ಸೂಕ್ತ ಸೌಲಭ್ಯಗಳಿಲ್ಲ. ಶೌಚಾಲಯ, ವಿಶ್ರಾಂತಿ ಕೊಠಡಿಗಳಿಲ್ಲದೆ ಹಿಂಸೆ ಅನುಭವಿಸುತ್ತಿದ್ದಾರೆ. ಈ ಎಲ್ಲಾ ಶೋಷಣೆ, ಸಂಕಷ್ಟಗಳ ನಡುವೆ ದುಡಿಯುತ್ತಿರುವ ಮಹಿಳೆಯನ್ನು ಗೌರವಿಸುವ ಬದಲು ಅವಮಾನಿಸುವ, ಹಲ್ಲೆ ನಡೆಸುವ ಕೆಲಸಗಳಾಗುತ್ತಿವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಕಾರ್ಯದರ್ಶಿ ದೇವಿ ವಹಿಸಿದ್ದರು. ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ, ಸಿಐಟಿಯು ರಾಜ್ಯ ಕಾರ್ಯದರ್ಶಿ ಯಮುನಾ ಗಾಂವ್ಕರ್, ಎಐಐಇಎ ವಲಯ ಕಾರ್ಯದರ್ಶಿ ಎಸ್.ಕೆ. ಗೀತಾ, ಮುಖಂಡರಾದ ಶೋಭಾ ಲೋಕಣ್ಣ ಉಪಸ್ಥಿತರಿದ್ದರು.  

ಕಾರ್ಯಕ್ರಮವನ್ನು ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ನಿರ್ವಹಿಸಿದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಸುಶೀಲ್ ವಂದನಾರ್ಪಣೆ ಮಾಡಿದರು. ವಿವಿಧ ಜಿಲ್ಲೆಗಳಿಂದ ನೂರಾರು ಸಂಖ್ಯೆಯಲ್ಲಿ ದುಡಿಯುವ ಮಹಿಳೆಯರು ಭಾಗವಹಿಸಿದ್ದರು.   

Join Whatsapp