ಬೃಹತ್ ಈಡಿಗ-ಬಿಲ್ಲವ ಪಾದಯಾತ್ರೆ ಜ.6ರಿಂದ ಆರಂಭ

Prasthutha|

►ಕಲ್ಯಾಣ ಕರ್ನಾಟಕದ ಈಡಿಗರ ನಡೆ ಮಂಗಳೂರು ಕಡೆ

- Advertisement -

ಕಲ್ಬುರ್ಗಿ: ಮಂಗಳೂರು ಗೋಕರ್ಣನಾಥ ಕ್ಷೇತ್ರದಿಂದ ಜ.6 ರಂದು ಆರಂಭಗೊಳ್ಳುವ ಮಂಗಳೂರು-ಬೆಂಗಳೂರು ಮಹಾಪಾದಯಾತ್ರೆಯಲ್ಲಿ ಪಾಲ್ಗೊಳ್ಳಲು ಕಲ್ಯಾಣ ಕರ್ನಾಟಕ ಭಾಗದ ಈಡಿಗ ಸಮುದಾಯದ ಜನರು ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಕಲ್ಯಾಣ ಕರ್ನಾಟಕ ಸಮಿತಿಯ ಅಧ್ಯಕ್ಷರಾದ ಸತೀಶ್ ವಿ ಗುತ್ತೇದಾರ್ ಮತ್ತು ಕಾರ್ಯದರ್ಶಿ ವೆಂಕಟೇಶ್ ಕಡೇಚೂರವರು ತಿಳಿಸಿದ್ದಾರೆ.

          ಕಲಬುರ್ಗಿ ಜಿಲ್ಲೆ ಚಿತ್ತಾಪುರ ತಾಲೂಕು ಕರದಾಳು ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿ ಪೀಠದ ಡಾ. ಪ್ರಣವಾನಂದ ಸ್ವಾಮೀಜಿಯವರ ನೇತೃತ್ವದಲ್ಲಿ ಹೊರಡುವ ಈ ಮಹಾನ್ ಪಾದಯಾತ್ರೆಯಲ್ಲಿ ಕೂಡಲೇ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆ 500 ಕೋಟಿಗಳ ಅನುದಾನ ಮಂಜೂರು ಕುಲಕಸುಬು ಸೇಂದಿ ನಿಷೇಧ ರದ್ದತಿ ಸಿಗಂದೂರು ಚೌಡೇಶ್ವರಿ ಕ್ಷೇತ್ರದಲ್ಲಿ ಸರಕಾರದ ಹಸ್ತಕ್ಷೇಪ ನಿಲ್ಲಿಸುವುದು. ಸಾರಾಯಿ ಹಾಗೂ ಸೇಂದಿ ನಿಷೇಧದಿಂದ ನಿರ್ಗತಿಕರಾದ ಕುಟುಂಬ ಸಾಮಾಜಿಕ ಭದ್ರತೆ ಒದಗಿಸುವುದು ಮುಂತಾದ ಬೇಡಿಕೆಗಳನ್ನು ಮುಂದಿಟ್ಟು ಕಲ್ಯಾಣ ಕರ್ನಾಟಕ ಭಾಗದ ಎಲ್ಲ ಜಿಲ್ಲೆಗಳಿಂದ ಈಡಿಗ ಸಮುದಾಯದ ಜನರು ಬಸ್ ಮತ್ತಿತರರ ವಾಹನಗಳ ಮೂಲಕ ಜ 5ರಂದು (ನಾಳೆ) ಮಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ. ಜಿಲ್ಲಾ ಸಮಿತಿ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಹಾಗೂ ಅಭಿಮಾನಿಗಳು ಈ ಮಹಾನ್ ಯಾತ್ರೆಯಲ್ಲಿ ಭಾಗವಹಿಸಲಿದ್ದು ಮಂಗಳೂರಿನಲ್ಲಿ ಕುದ್ರೋಳಿ ಕ್ಷೇತ್ರದ ಆವರಣದಲ್ಲಿ ಯಾರದಂದು ಬೆಳಿಗ್ಗೆ 10.30 ಕ್ಕೆ ಈಡಿಗ ಬಿಲ್ಲವ ಸಮುದಾಯದ ಮಹಾನ್ ನಾಯಕರಾದ ಹಾಗೂ ಮಾಜಿ ಕೇಂದ್ರ ಸಚಿವರಾದ ಬಿ. ಜನಾರ್ದನ ಪೂಜಾರಿಯವರು ಮಹಾಪಾದಯಾತ್ರೆ ಉದ್ಘಾಟನೆ ಮಾಡಲಿದ್ದಾರೆ. ತೆಲಂಗಾಣದ ಅಬಕಾರಿ ಹಾಗು ಪ್ರವಾಸೋದ್ಯಮ ಖಾತೆಯ ಸಚಿವರಾದ ಶ್ರೀನಿವಾಸ ಗೌಡ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಚಾಲನೆ ನೀಡಲಿರುವರು ಜೊತೆಗೆ ಕರ್ನಾಟಕದ ಈಡಿಗ ಬಿಲ್ಲವ ನಾಮಧಾರಿ ಜೀವರ ನಾಯಕ ಕಲಾಲ್ ಮುಂತಾದ 26 ಪಂಗಡಗಳ ನಾಯಕರುಗಳು ಭಾಗವಹಿಸಲಿದ್ದು, ಇದೊಂದು ಐತಿಹಾಸಿಕ ಪಾದಯಾತ್ರೆ ಆಗಲಿದೆ ಮಂಗಳೂರಿನಿಂದ ಉಡುಪಿ,ತೀರ್ಥಳ್ಳಿ, ಸಿದ್ದಾಪುರ,  ಶಿವಮೊಗ್ಗ, ದಾವಣಗೆರೆ ದಾರಿಯಾಗಿ 658 ಕಿಲೋಮೀಟರ್ ಸಂಚರಿಸುವ ಪಾದಯಾತ್ರೆಯಲ್ಲಿ ಸಮಾಜದ ಬಾಂಧವರು ಪಾಲ್ಗೊಳ್ಳಲಿದ್ದಾರೆ. ಸಮುದಾಯದ ಎಲ್ಲರೂ ಕೂಡ ಈ ಮಹಾಪಾದಯಾತ್ರೆಯನ್ನು ಯಶಸ್ವಿಗೊಳಿಸಬೇಕೆಂದು ಮನವಿ ಮಾಡಲಾಗಿದೆ.

- Advertisement -

ಕಣ್ಣಿಗೆ ಮಣ್ಣೆರೆಚುವ ಸರಕಾರದ ನಿರ್ಧಾರಕ್ಕೆ ವಿರೋಧ:

         ಈಗಾಗಲೇ ಪಾದಯಾತ್ರೆ ಮತ್ತು ನಿರಶನ ಹೋರಾಟಗಳನ್ನು ಹತ್ತಿಕ್ಕಲು ಕೇವಲ ಆಶ್ವಾಸನೆಯ ಮಾತುಗಳೊಂದಿಗೆ ಸರಕಾರವು ಸಮುದಾಯದ ಜನರಿಗೆ ಕಣ್ಣಿಗೆ ಮಣ್ಣೆರೆಚುವ ಕೆಲಸವನ್ನು ಮಾಡಿದೆ. ಆದರೆ ಈ ಬಾರಿ ನಿಗಮ ಮತ್ತು ಇತರ ಎಲ್ಲ ಬೇಡಿಕೆಗಳನ್ನು ಈಡೇರಿಸದಿದ್ದರೆ ಪಾದಯಾತ್ರೆಯನ್ನು ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಹೋರಾಟ ಸಮಿತಿಯ ಉಪಾಧ್ಯಕ್ಷರಾದ ಮಹಾದೇವ ಗುತ್ತೇದಾರ್ ಅವರು ಖಂಡಾತುಂಡವಾಗಿ ತಿಳಿಸಿದ್ದಾರೆ. ಜನಪ್ರತಿನಿಧಿಗಳು ನಾಯಕರು ಆಗಮಿಸಿ, ಪೊಳ್ಳು ಆಶ್ವಾಸನೆ ನೀಡಿ ಮೋಸ ಮಾಡಿದಂತೆ ಇನ್ನು ಮುಂದೆ ಇಂತಹ ಕ್ರಮ ನಡೆಯುವುದಿಲ್ಲ ಎಂಬುದಾಗಿ ಅವರು ಕಟುವಾಗಿ ತಿಳಿಸಿದ್ದಾರೆ.

ಡಾ. ಪ್ರಣವಾನಂದ ಸ್ವಾಮೀಜಿ ಅವರು ಯಾವುದೇ ಸ್ವಾರ್ಥಪರ ಲಾಲಸೆ ಇಲ್ಲದೆ ಸಮಾಜದ ಜನರ ಅಭ್ಯುದಯಕ್ಕಾಗಿ ಹೋರಾಟ ಮಾರ್ಗವನ್ನು ಅನುಸರಿಸಿದ್ದು ಇದಕ್ಕೆ ರಾಜ್ಯ ಸರ್ಕಾರವು ಕೂಡಲೇ ಸ್ಪಂದನೆ ಮಾಡಿ ಸಮಸ್ಯೆ ಇತ್ಯರ್ಥಪಡಿಸಲು ಪ್ರಯತ್ನಿಸಬೇಕು ಎಂದು ಅವರು ಕೋರಿದ್ದಾರೆ. ಮಂಗಳೂರಿನಿಂದ 658 ಕಿಲೋಮೀಟರ್ ದೂರದ ಪಾದಯಾತ್ರೆ ಇದು ಕೇವಲ ಸಮುದಾಯದ ಜನರ ಅಹವಾಲು ಮಾತ್ರ ಆಗದೆ ಇದಕ್ಕೆ ಸರ್ವ ಪಕ್ಷದ ಬೆಂಬಲವಿದ್ದು ಸರಕಾರವು ಪರಿಸ್ಥಿತಿಯನ್ನು ತಿಳಿದು ಕೂಡಲೇ ಸ್ಪಂದಿಸಿದರೆ ಭವಿಷ್ಯದಲ್ಲಿ ಉತ್ತಮವಾಗಲಿದೆ ಎಂದು ಅವರು ಹೇಳಿದರು.

Join Whatsapp