ಲ್ಯಾಪ್’ಟಾಪ್, ಸ್ಮಾರ್ಟ್’ಫೋನ್’ಗಳನ್ನು ಸೋಪ್’ನಿಂದ ತೊಳೆಯುವ ಪತ್ನಿ !

Prasthutha|

ಪತ್ನಿಯ ‘ವಿಚಿತ್ರ ವರ್ತನೆ’ಯಿಂದ ಬೇಸತ್ತು ವಿಚ್ಛೇದನ ಕೊಡಿ ಎಂದ ಪತಿ !

- Advertisement -

ಬೆಂಗಳೂರು: ಒಂದು ಹಂತದವರೆಗೂ ಸ್ವಚ್ಛತೆಯ ಬಗ್ಗೆ ಗಮನ ಕೊಟ್ಟರೆ ಒಳ್ಳೆಯದು. ಆದರೆ ಅತಿರೇಕಕ್ಕೆ ಹೋದರೆ ಏನಾಗಬಹುದು ಎಂಬುದಕ್ಕೆ ಈ ಘಟನೆ ಅತ್ಯುತ್ತಮ ಉದಾಹರಣೆಯಂತಿದೆ.

ಬೆಂಗಳೂರಿನ ಗೃಹಿಣಿ ಸುಮಾ, ಕೋವಿಡ್-19ನಿಂದಾಗಿ ಸ್ವಚ್ಛತೆಯ ಬಗ್ಗೆ ಅತಿಯಾದ ಕಾಳಜಿ ತೋರುತ್ತಿದ್ದರು. ಇತ್ತೀಚೆಗೆ ಸುಮಾ ಅವರ ತಾಯಿ ನಿಧನರಾದ ಬಳಿಕ ಮಾನಸಿಕ ಆಘಾತಕ್ಕೆ ಒಳಗಾದ ಸುಮಾಳ ಸ್ವಚ್ಛತೆಯು ಅತಿರೇಕ ಎನಿಸುವಷ್ಟರ ಮಟ್ಟಕ್ಕೆ ತಲುಪಿದೆ.

- Advertisement -

ವರ್ಕ್‌ ಫ್ರಂ ಹೋಂನಲ್ಲಿರುವ ಪತಿಯ ಲ್ಯಾಪ್‌ಟಾಪ್‌, ಸ್ಮಾರ್ಟ್‌’ಫೋನ್‌ಗಳನ್ನೂ ಸೋಪ್ ಹಾಕಿ ತೊಳೆಯುತ್ತಿದ್ದಾರೆ. ದಿನಕ್ಕೆ ಐದಾರು ಬಾರಿ ಸ್ನಾನ ಮಾಡುವುದರ ಜೊತೆಗೆ ತಾವು ಬಳಸಿದ ಸೋಪನ್ನು ಮತ್ತೊಂದು ಸೋಪಿನಿಂದ ಸ್ವಚ್ಛಗೊಳಿಸುತ್ತಿದ್ದಾರೆ. ಪದೇಪದೆ ಸ್ಯಾನಿಟೈಸರ್ ಬಳಸುವುದು, ಪೀಠೋಪಕರಣಗಳು, ಚಮಚ, ಪ್ಲೋರ್, ಮ್ಯಾಟ್ ಸೇರಿದಂತೆ ಎಲ್ಲಾ ವಸ್ತುಗಳನ್ನು ಮತ್ತೆ ಮತ್ತೆ ಸ್ವಚ್ಛ ಮಾಡುತ್ತಾರೆ. ಮಕ್ಕಳು ಶಾಲೆಯಿಂದ ಹಿಂತಿರುಗಿ ಬಂದ ಬಳಿಕ ಅವರ ಬ್ಯಾಗ್, ಯೂನಿಫಾರ್ಮ್, ಶೂಗಳನ್ನು ಅತೀ ಎನಿಸುವಷ್ಟು ಶುಚಿಮಾಡುವುದು ಸೇರಿದಂತೆ ವಿಚಿತ್ರವಾಗಿ ವರ್ತಿಸುತ್ತಿದ್ದಾರೆ.

ಈ ಎಲ್ಲಾ ಕಾರಣಗಳಿಂದಾಗಿ ಬೇಸತ್ತಿರುವ ಪತಿ ಜಯಂತ್, ಇದೀಗ ವಿವಾಹ ವಿಚ್ಛೇದನಕ್ಕೆ ಮುಂದಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

2009ರಲ್ಲಿ ಜಯಂತ್, ಸುಮಾರನ್ನು (ಹೆಸರು ಬದಲಾಯಿಸಲಾಗಿದೆ) ಮದುವೆಯಾಗಿದ್ದರು.  ಎಂಬಿಎ ಪದವೀಧರೆಯಾಗಿರುವ ಸುಮಾ ಹಾಗೂ ಸಾಫ್ಟ್‌ವೇರ್‌ ಇಂಜಿನಿಯರ್‌ ಜಯಂತ್‌ ಮದುವೆಯಾದ ಬಳಿಕ ಲಂಡನ್’ನಲ್ಲಿ ನೆಲೆಸಿದ್ದರು. ಸುಮಾರಿಗೆ ಮೊದಲಿನಿಂದಲೂ ಸ್ವಚ್ಛತೆಯ ಗೀಳು. ಇಬ್ಬರು ಮಕ್ಕಳಾದ ಬಳಿಕ ಸ್ವಚ್ಛತೆ ಗೀಳು ಮತ್ತಷ್ಟು ಹೆಚ್ಚಾಗಿತ್ತು. .

ಸುಮಾ, ಒಬೆಸ್ಸಿವ್ ಕಂಪಲ್ಸಿವ್ ದಿಸೋರ್ಡರ್ –OCD ಮಾನಸಿಕ ಸಮಸ್ಯೆಯಿಂದ ಬಳಲುತ್ತಿರುವುದೇ ಇಂತಹ ವರ್ತನೆಗೆ ಕಾರಣ. ಇದರಲ್ಲಿ ಅವರ ತಪ್ಪಿಲ್ಲ ಇಂಥವರಿಗೆ ಸೂಕ್ತ ಚಿಕಿತ್ಸೆಯ ಅಗತ್ಯವಿದೆ ಎಂದು ಮಾನಸಿಕ ತಜ್ಞರು ಪ್ರತಿಕ್ರಿಯಿಸಿದ್ದಾರೆ. ಸದ್ಯ ಪೊಲೀಸರು ಈ ಪ್ರಕರಣದಲ್ಲಿ ವನಿತಾ ಸಹಾಯವಾಣಿಯ ನೆರವು ಕೋರಿದ್ದು, ಅಲ್ಲಿ ಆಪ್ತಸಮಾಲೋಚನೆ ನಡೆಸಲು ತಿಳಿಸಲಾಗಿದೆ.

Join Whatsapp