ಮುಂಬೈ: ಸ್ವಾತಂತ್ರ್ಯ ಹೋರಾಟಗಾರ ಟಿಪ್ಪು ಸುಲ್ತಾನ್ ಅವರ ಹೆಸರನ್ನು ಮುಂಬೈನಲ್ಲಿ ನವೀಕರಿಸಿದ ಕ್ರೀಡಾ ಸಂಕೀರ್ಣಕ್ಕೆ ಮರುನಾಮಕರಣ ಮಾಡುವ ಕ್ರಮದ ವಿರುದ್ಧ ಬಿಜೆಪಿ ಮತ್ತು ಬಜರಂಗದಳ ಪ್ರತಿಭಟನೆ ನಡೆಸಿದೆ. ಇದಕ್ಕೆ ಗುರುವಾರ ಪ್ರತಿಕ್ರಿಯಿಸಿದ ಶಿವಸೇನಾ ಸಂಸದ ಸಂಜಯ್ ರಾವತ್ , ಬಿಜೆಪಿಗೆ ಮಾತ್ರ ಇತಿಹಾಸದ ಜ್ಞಾನ ಇದೆ ಎಂದು ಭಾವಿಸುತ್ತದೆ. ಎಲ್ಲರೂ ಹೊಸ ಇತಿಹಾಸ ಬರೆಯಲು ಕುಳಿತಿದ್ದಾರೆ, ಇತಿಹಾಸವನ್ನು ಬದಲಾಯಿಸಲು ಹೊಸ ಇತಿಹಾಸಕಾರರು ಬಂದಿದ್ದಾರೆ. ಟಿಪ್ಪು ಸುಲ್ತಾನ್ ಬಗ್ಗೆ ನಮಗೆ ತಿಳಿದಿದೆ, ಬಿಜೆಪಿಯಿಂದ ಕಲಿಯಬೇಕಾಗಿಲ್ಲ ಎಂದು ಸಂಜಯ್ ರಾವತ್ ಹೇಳಿದ್ದಾರೆ.
ಕ್ರೀಡಾ ಸಂಕೀರ್ಣಕ್ಕೆ ಟಿಪ್ಪು ಎಂದು ಹೆಸರಿಟ್ಟರೆ ಬಿಜೆಪಿಯವರು ಪ್ರತಿಭಟನೆ ಮಾಡುತ್ತೇವೆ ಎನ್ನುವುದು ಸರಿಯಲ್ಲ. ರಾಜ್ಯ ಸರ್ಕಾರವು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಹೊಸ ಇತಿಹಾಸ ಬರೆಯಬೇಡಿ. ನೀವು ದೆಹಲಿಯಲ್ಲಿ ಇತಿಹಾಸವನ್ನು ಬದಲಾಯಿಸುವ ಪ್ರಯತ್ನವನ್ನು ಮುಂದುವರಿಸಬಹುದು ಆದರೆ ನೀವು ಯಶಸ್ವಿಯಾಗುವುದಿಲ್ಲ ಎಂದರು.
ರಾಷ್ಟ್ರಪತಿ ಕೋವಿಂದ್ ಅವರು ಕರ್ನಾಟಕಕ್ಕೆ ತೆರಳಿ ಟಿಪ್ಪು ಸುಲ್ತಾನ್ ಒಬ್ಬ ಐತಿಹಾಸಿಕ ಯೋಧ, ಸ್ವಾತಂತ್ರ್ಯ ಹೋರಾಟಗಾರ ಎಂದು ಹೊಗಳಿದ್ದರು. ಹಾಗಾದರೆ ರಾಷ್ಟ್ರಪತಿಗಳ ರಾಜೀನಾಮೆಯನ್ನೂ ಕೇಳುತ್ತೀರಾ? ಈ ಬಗ್ಗೆ ಬಿಜೆಪಿ ಸ್ಪಷ್ಟನೆ ನೀಡಬೇಕು, ಇದು ಬಿಜೆಪಿಯವರ ನಾಟಕ ಎಂದಿದ್ದಾರೆ.