ಪೊಲೀಸ್ ನೇಮಕಾತಿಯಲ್ಲಿ ಹಿಜಾಬ್ ನಿಷೇಧವನ್ನು ವಿರೋಧಿಸಿ ಹೋರಾಟಕ್ಕಿಳಿದ ಮುಸ್ಲಿಮ್ ಯುವತಿಯರು

Prasthutha|

ಕೋಲ್ಕತ್ತಾ: ಕಾನ್ ಸ್ಟೇಬಲ್ ಗಳ ನೇಮಕಾತಿಗೆ ನಡೆದ ಪರೀಕ್ಷೆಯಲ್ಲಿ ಹಿಜಾಬ್ ಗೆ ನಿಷೇಧ ಹೇರಿದ ಕ್ರಮವನ್ನು ಖಂಡಿಸಿ ಮುಸ್ಲಿಮ್ ಯುವತಿಯರು ಪಶ್ಚಿಮ ಬಂಗಾಳದ ಪೊಲೀಸ್ ನೇಮಕಾತಿ ಮಂಡಳಿ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಸೆಪ್ಟೆಂಬರ್ 26 ರಂದು ಆಯೋಜಿಸಿದ ಪರೀಕ್ಷೆಯ ಮೊದಲು ವಿತರಿಸಿದ ಫಾರಂ ಅನ್ನು ಭರ್ತಿ ಮಾಡುವಾಗ ಹಿಜಾಬ್ ಧರಿಸಿದ ಫೋಟೋವನ್ನು ಅಪ್ಲೋಡ್ ಮಾಡಿದ ಹಿನ್ನೆಲೆಯಲ್ಲಿ ಮಂಡಳಿಯು, ತಮ್ಮ ಅರ್ಜಿಗಳನ್ನು ತಿರಸ್ಕರಿಸಿತ್ತು ಎಂದು ಪ್ರತಿಭಟನಕಾರರು ಆರೋಪಿಸಿದ್ದಾರೆ.

- Advertisement -

ಈ ಸಲದ ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿದ ಪೈಕಿ 30 ಸಾವಿರ ಅರ್ಜಿಯನ್ನು ತಿರಸ್ಕರಿಸಲಾಗಿದ್ದು, ಅದರಲ್ಲಿ 1000 ಮುಸ್ಲಿಮ್ ಯುವತಿಯರ ಅರ್ಜಿಯನ್ನು ಹಿಜಾಬ್ ಧರಿಸಿದ ಫೋಟೋ ಅಪ್ಲೋಡ್ ಮಾಡಿದ ಹಿನ್ನೆಲೆಯಲ್ಲಿ ವಜಾಗೊಳಿಸಲಾಗಿತ್ತು.

ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಸಂತ್ರಸ್ತೆ ತುಹಿನಾ ಖತೂನ್ ಎಂಬಾಕೆ ಮುರ್ಷಿದಾಬಾದ್ ನಲ್ಲಿರುವ ಪೊಲೀಸ್ ಕಚೇರಿಗೆ ತೆರಳಿ, ತನ್ನ ಅರ್ಜಿಯನ್ನು ತಿರಸ್ಕರಿಸಿರುವ ಕುರಿತು ವಿಚಾರಿಸಿದಾಗ ಹಿಜಾಬ್ ಧರಿಸಿದ ಹಿನ್ನೆಲೆಯಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ ಎಂದು ಮಾಹಿತಿ ನೀಡಿದರು. ಮಾತ್ರವಲ್ಲ ಹಿಜಾಬ್ ಸಂವಿಧಾನ ಬದ್ಧವಾದ ನಮ್ಮ ಹಕ್ಕು ಎಂಬ ನೆಲೆಯಲ್ಲಿ ಪೊಲೀಸ್ ಇಲಾಖೆಯ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ಆಕೆ ತಿಳಿಸಿದ್ದಾಳೆ.

- Advertisement -

ಈ ಸಂಬಂಧ ಪೊಲೀಸ್ ಇಲಾಖೆಯ ನಡೆಯನ್ನು ಪ್ರಶ್ನಿಸಿ ಕೋಲ್ಕತ್ತಾ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.

Join Whatsapp