ಬೆಂಗಳೂರು: ರಾಜ್ಯದಲ್ಲಿ ಭಾರಿ ಸದ್ದು ಮಾಡಿದ್ದ ಮತದಾರರ ಗುರುತಿನ ಚೀಟಿ ಪರಿಷ್ಕರಣೆ ಅಕ್ರಮ ಪ್ರಕರಣದಲ್ಲಿ ಕೇಂದ್ರ ಚುನಾವಣೆ ಆಯೋಗ ಮಧ್ಯೆ ಪ್ರವೇಶ ಮಾಡಿದ್ದು, ಹಗರಣದಲ್ಲಿ ಅಧಿಕಾರಿಗಳ ಪಾತ್ರ ಧೃಡಪಟ್ಟಿದ್ದು ಈ ಹಿನ್ನೆಲೆಯಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳಾದ ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ, ಹಾಗೂ ಹೆಚ್ಚುವರಿ ಜಿಲ್ಲಾ ಚುನಾವಣಾಧಿಕಾರಿಯಾಗಿದ್ದ ಬೆಂಗಳೂರು ನಗರ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಅವರನ್ನು ಅಮಾನತು ಮಾಡಿ ಕೇಂದ್ರ ಚುನಾವಣೆ ಆಯೋಗ ತನಿಖೆಗೆ ಆದೇಶಿಸಿದೆ.
ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತರಾಗಿರುವ ಎಸ್.ರಂಗಪ್ಪ ಅವರು ಶಿವಾಜಿನಗರ, ಚಿಕ್ಕಪೇಟೆ ಕ್ಷೇತ್ರದ ಉಸ್ತುವಾರಿ ಸಹ ಆಗಿದ್ದರು. ಇನ್ನು ಬೆಂಗಳೂರು ನಗರ ಜಿಲ್ಲಾಧಿಕಾರಿ ಆಗಿರುವ ಕೆ.ಶ್ರೀನಿವಾಸ್ ಅವರು ಮಹದೇವಪುರ ಕ್ಷೇತ್ರದ ಉಸ್ತುವಾರಿ ಅಧಿಕಾರಿ ಆಗಿದ್ದರು. ಇದೀಗ ಈ ಇಬ್ಬರು ಐಎಎಸ್ ಅಧಿಕಾರಿಗಳನ್ನು ಅಮಾನತು ಮಾಡಿರುವ ಕೇಂದ್ರ ಚುನಾವಣೆ ಆಯೋಗ, ರಂಗಪ್ಪ, ಕೆ.ಶ್ರೀನಿವಾಸ್ ವಿರುದ್ಧ ಇಲಾಖಾ ವಿಚಾರಣೆಗೆ ಸಿಎಸ್, ರಾಜ್ಯ ಚುನಾವಣಾ ಆಯುಕ್ತರಿಗೆ ನಿರ್ದೇಶನ ನೀಡಿದೆ.
ಅಲ್ಲದೆ ಈವರೆಗೆ ಸಂಗ್ರಹಿಸಿರುವ ಡೇಟಾ ಬಳಸದಂತೆಯೂ ಸೂಚಿಸಿದ್ದು, ಬೆಂಗಳೂರಿನ ಮೂರು ಕ್ಷೇತ್ರಗಳಲ್ಲಿ ಮತ್ತೊಮ್ಮೆ ಶೇ 100ರಷ್ಟು ಮತದಾರರ ಪರಿಷ್ಕರಣೆ ನಡೆಯಬೇಕು ಎಂದು ಹೇಳಿರುವ ಕೇಂದ್ರ ಚುನಾವಣೆ ಆಯೋಗ, ಚಿಕ್ಕಪೇಟೆ, ಮಹದೇವಪುರ ,ಶಿವಾಜಿನಗರ ಉಸ್ತುವಾರಿ ಅಧಿಕಾರಿಗಳನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದೆ.