‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ ಗೆ ಆಯ್ಕೆಯಾದ ಐವರು ಕನ್ನಡಿಗರು

Prasthutha|

- Advertisement -

ಹೊಸದಿಲ್ಲಿ: ‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ ಗೆ ಐವರು ಕನ್ನಡಿಗರು ಆಯ್ಕೆಯಾಗಿದ್ದಾರೆ.

ಸಂಗೀತ, ನಾಟಕ ಹಾಗೂ ನೃತ್ಯ ಕ್ಷೇತ್ರಗಳಲ್ಲಿ ಅಮೋಘ ಸಾಧನೆ ಮಾಡಿರುವ ಕರ್ನಾಟಕದ ಐವರು ಸಾಧಕರು ಸೇರಿದಂತೆ ವಿವಿಧ ರಾಜ್ಯಗಳ 86 ಮಂದಿಗೆ ‘ಸಂಗೀತ ನಾಟಕ ಅಕಾಡೆಮಿ ಅಮೃತ ಪ್ರಶಸ್ತಿ’ಯನ್ನು ಶುಕ್ರವಾರ ಘೋಷಿಸಲಾಗಿದೆ.

- Advertisement -

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸಂಗೀತ ನಾಟಕ ಅಕಾಡೆಮಿಯು ಘೋಷಿಸಿದ ಈ ಪ್ರಶಸ್ತಿಗೆ ರಾಜ್ಯದ ಹಿರಿಯ ಸಾಧಕರಾದ ಗೌರಿ ಕುಪ್ಪುಸ್ವಾಮಿ (ಕರ್ನಾಟಕ ಸಂಗೀತ), ಅನುಸೂಯ ಕುಲಕರ್ಣಿ (ಕರ್ನಾಟಕ ಸಂಗೀತ), ಲಲಿತಾ ಶ್ರೀನಿವಾಸನ್‌ (ಭರತನಾಟ್ಯ), ಎ.ಎಸ್. ಜಯತೀರ್ಥ (ರಂಗಭೂಮಿ), ಮಾರೆಪ್ಪ ಚನ್ನದಾಸರ (ಜನಪದ) ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.

ಈ ಪ್ರಶಸ್ತಿಯು ತಲಾ ₹1 ಲಕ್ಷ ನಗದು ಹಾಗೂ ತಾಮ್ರಪತ್ರವನ್ನು ಒಳಗೊಂಡಿದೆ. 75 ವರ್ಷ ದಾಟಿದ ಹಾಗೂ ಈವರೆಗೆ ರಾಷ್ಟ್ರೀಯ ಪ್ರಶಸ್ತಿಯನ್ನು ಪಡೆಯದ ಕಲಾವಿದರನ್ನು ಗುರುತಿಸಿ ಈ ಗೌರವಕ್ಕೆ ಆಯ್ಕೆ ಮಾಡಲಾಗಿದೆ ಎಂದು ಅಕಾಡೆಮಿಯ ಪ್ರಕಟಣೆ ತಿಳಿಸಿದೆ.

ಇದೇ ವೇಳೆ, 2019, 2020, 2021ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ‍ಪ್ರಶಸ್ತಿಯ ಪುರಸ್ಕೃತ ಹೆಸರನ್ನು (ಅಕಾಡೆಮಿ ಪುರಸ್ಕಾರ) ಪ್ರಕಟಿಸಲಾಗಿದೆ. 2019ನೇ ಸಾಲಿನ ಪ್ರಶಸ್ತಿಗೆ ವಿನಾಯಕ ತೊರವಿ (ಹಿಂದೂಸ್ಥಾನಿ ಸಂಗೀತ), ವಸುಂಧರಾ ದೊರೆಸ್ವಾಮಿ (ಭರತನಾಟ್ಯ), ಮಂಜು ಭಾರ್ಗವಿ (ಕೂಚಿಪುಡಿ), ಎನ್.ಕೆ.ರಾಮಕೃಷ್ಣ (ಮೇಕಪ್‌) ಆಯ್ಕೆಯಾಗಿದ್ದಾರೆ.

2020ನೇ ಸಾಲಿನ ಪ್ರಶಸ್ತಿಗೆ ಆರ್‌.ಕೆ.ಪದ್ಮನಾಭ (ಕರ್ನಾಟಕ ಸಂಗೀತ), ಎಸ್‌.ಜಿ.ಲಕ್ಷ್ಮಿದೇವಮ್ಮ (ಜನಪದ), ಆರತಿ ಅಂಕಲಿಕರ್‌ (ಹಿಂದೂಸ್ಥಾನಿ ಸಂಗೀತ), 2021ನೇ ಸಾಲಿನ ಪ್ರಶಸ್ತಿಗೆ ರವೀಂದ್ರ ಯಾವಗಲ್‌ (ತಬಲಾ), ಎಚ್.ಆರ್.ಲೀಲಾವತಿ (ಸುಗಮ ಸಂಗೀತ), ಗರ್ತಿಕೆರೆ ರಾಘಣ್ಣ (ಜನಪದ) ಹಾಗೂ ಡಿ.ಬಾಲಕೃಷ್ಣ (ವೀಣೆ) ಅವರನ್ನು ಆಯ್ಕೆ ಮಾಡಲಾಗಿದೆ.

ಅಕಾಡೆಮಿ ಪ್ರಶಸ್ತಿ ಪುರಸ್ಕೃತರಿಗೆ ತಲಾ ₹1 ಲಕ್ಷ ನಗದು ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ. ರಾಷ್ಟ್ರಪತಿ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಉಸ್ತಾದ್‌ ಬಿಸ್ಮಿಲ್ಲಾ ಖಾನ್‌ ಯುವ ಪುರಸ್ಕಾರಕ್ಕೆ (2019, 2020 ಹಾಗೂ 2021) ಬಿ.ಎಸ್‌.ಅರುಣ್‌ ಕುಮಾರ್‌ (ಸಂಗೀತ), ಅಮಿತ್‌ ಎ.ನಾಡಿಗ್‌ (ಕೊಳಲು), ವಸಂತ್‌ ಕಿರಣ್‌ (ಕೂಚಿಪುಡಿ) ಅವರನ್ನು ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿಯು ತಲಾ ₹25 ಸಾವಿರ ನಗದು ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ ಎಂದು ಪ್ರಕಟಣೆ ತಿಳಿಸಿದೆ.

Join Whatsapp