ವಿಧಾನಸೌಧ ದಲ್ಲಾಳಿಗಳ ಅಡ್ಡೆಯಾಗುತ್ತಿದೆ : ಬಿಜೆಪಿ ಶಾಸಕ ಎಚ್.ವಿಶ್ವನಾಥ್

Prasthutha|

ಬೆಂಗಳೂರು : ವಿಧಾನಸೌಧ ದಲ್ಲಾಳಿಗಳ ಅಡ್ಡೆಯಾಗುತ್ತಿದೆ. ಇಲ್ಲಿ ಜನಸಾಮಾನ್ಯರಿಗಿಂತ ಮಧ್ಯವರ್ತಿಗಳ ಹಾವಳಿಯೇ ಹೆಚ್ಚಾಗಿದೆ ಎಂದು ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಗಂಭೀರ ಆರೋಪ ಮಾಡಿದ್ದಾರೆ.

- Advertisement -

ವಿಧಾನಪರಿಷತ್‍ನಲ್ಲಿ ಬಜೆಟ್ ಮೇಲಿನ ಚರ್ಚೆ ಆರಂಭಿಸಿದ ಅವರು, ತಮ್ಮ ಭಾಷಣದುದ್ದಕ್ಕೂ ಆಡಳಿತ ವ್ಯವಸ್ಥೆಯನ್ನು ತೀವ್ರವಾಗಿ ಟೀಕಿಸಿದ್ದಾರೆ.

ಒಮ್ಮೆ ಮಧ್ಯಾಹ್ನದ ವೇಳೆಯೆ ವಿಧಾನಸೌಧದ ಎಲ್ಲ ಬಾಗಿಲುಗಳನ್ನು ಬಂದ್ ಮಾಡಿ ಒಳಗೆ ಇರುವವರೆನ್ನೆಲ್ಲ ವಿಚಾರಣೆಗೊಳಪಡಿಸಿದರೆ ಯಾರು, ಯಾವ ಕಾರಣಕ್ಕೆ ಬಂದಿದ್ದಾರೆ ಎಂಬುದನ್ನು ವಿಚಾರಿಸಿದರೆ ವಿಧಾನಸೌಧದಲ್ಲಿ ನಡೆಯುತ್ತಿರುವ ಲೂಟಿಯ ಬಗ್ಗೆ ಸ್ಪಷ್ಟತೆ ಸಿಗುತ್ತದೆ. ಇಲ್ಲಿ ಮಧ್ಯವರ್ತಿಗಳೆ ಹೆಚ್ಚಾಗಿ ತುಂಬಿರುತ್ತಾರೆ ಎಂದು ಅವರು ಆರೋಪಿಸಿದ್ದಾರೆ.

- Advertisement -

ಕರ್ನಾಟಕದಲ್ಲಿ ಹೊಂದಾಣಿಕೆ ರಾಜಕೀಯ ನಡೆಯುತ್ತಿದೆ. ವಿರೋಧ ಪಕ್ಷಗಳು ಬಲವಾಗಿಲ್ಲ. ವಿಪಕ್ಷಗಳು ಪ್ರಬಲವಾಗಿದ್ದರೆ ಮಾತ್ರ ಆಡಳಿತದಲ್ಲಿ ಆರೋಗ್ಯಕರ ಪರಿಸ್ಥಿತಿ ನಿರ್ಮಾಣವಾಗಲು ಸಾಧ್ಯ. ಈಗಿನ ವ್ಯವಸ್ಥೆಯಿಂದ ಟೂರಿಂಗ್ ಟಾಕೀಸ್‍ನಲ್ಲಿ ಕರೆಂಟ್ ಹೋದಂತಹ ಪರಿಸ್ಥಿತಿ ಉಂಟಾಗಿದೆ. ಟೂರಿಂಗ್ ಟಾಕೀಸ್‍ನಲ್ಲಿ ಕರೆಂಟ್ ಹೋದರೆ ಯಾರು ಯಾರನ್ನ ಬೇಕಾದರೂ ತಬ್ಬಿಕೊಳ್ಳಬಹುದು. ಈಗಿನ ಸರ್ಕಾರದ ವ್ಯವಸ್ಥೆ ಕೂಡ ಅದೇ ರೀತಿ ಇದೆ ಎಂದರು.

ಪ್ರಸ್ತುತ ದಿನಗಳಲ್ಲಿ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಹಲವಾರು ಜಾತಿಗಳು ಮೀಸಲಾತಿಗಾಗಿ, ಇನ್ನು ಕೆಲವು ಜಾತಿಗಳು ಮೀಸಲಾತಿ ಹೆಚ್ಚಳಕ್ಕಾಗಿ ಪ್ರತಿಭಟನೆ ನಡೆಸುತ್ತಿವೆ ಎಂದು ವಿಶ್ವನಾಥ್ ವಿವರಣೆ ನೀಡಿ, ಮೀಸಲಾತಿ ಸೌಲಭ್ಯಕ್ಕೆ ಕೆನೆಪದರ ಪದ್ದತಿಯನ್ನು ಜಾರಿಗೆ ತನ್ನಿ. ಶ್ರೀಮಂತರು, ಪ್ರಭಾವಿ ಮಕ್ಕಳಿಗೂ ಮೀಸಲಾತಿ ಬೇಕು ಎಂದರೆ ಅದು ಸರಿ ಹೋಗುವುದಿಲ್ಲ.

ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ, ಅವರ ಮಕ್ಕಳಿಗೂ ಮೀಸಲಾತಿ ಬೇಕು, ನನಗೂ, ನಮ್ಮ ಮಕ್ಕಳಿಗೂ ಮೀಸಲಾತಿ ಬೇಕು ಎಂದರೆ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಆಡಳಿತಾತ್ಮಕ ವೆಚ್ಚವನ್ನು ಕಡಿಮೆ ಮಾಡಬೇಕು. ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಕಬೇಕು ಎಂದು ಅವರು ಸಲಹೆ ನೀಡಿದ್ದಾರೆ.

Join Whatsapp