ಉತ್ತರಪ್ರದೇಶ ಚುನಾವಣೆ: 100ಕ್ಕೂ ಅಧಿಕ ಹಾಲಿ ಬಿಜೆಪಿ ಶಾಸಕರಿಗೆ ತಪ್ಪಲಿದೆ ಟಿಕೆಟ್!

Prasthutha: January 12, 2022

ಲಕ್ನೋ: ಉತ್ತರ ಪ್ರದೇಶದ ಚುನಾವಣೆಯಲ್ಲಿ ಹೊಸ ರಾಜಕೀಯ ತಂತ್ರಗಾರಿಕೆ ಹೆಣೆಯಲು ಮುಂದಾಗಿರುವ ಆಡಳಿತಾರೂಢ ಬಿಜೆಪಿ ತಳಹಂತದಲ್ಲಿ ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶೇ.25ಕ್ಕೂ ಹೆಚ್ಚು ಶಾಸಕರಿಗೆ ಈ ಬಾರಿ ಟಿಕೆಟ್ ನಿರಾಕರಿಸುವ ಚಿಂತನೆ ನಡೆಸಿದೆ.

ಚುನಾವಣೆಗೆ ಹಂತ ಹಂತವಾಗಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲು ನಿರ್ಧರಿಸಿರುವ ಬಿಜೆಪಿ ಮೊದಲ ಎರಡು ಹಂತದ ಚುನಾವಣೆಗೆ ಮುಂದಿನ ವಾರಾಂತ್ಯದಲ್ಲಿ ಪಟ್ಟಿ ಬಿಡುಗಡೆ ಮಾಡಲಿದೆ. ಆದರೆ ಅದಕ್ಕೂ ಮುನ್ನ ತಳಹಂತದಲ್ಲಿ ಸಾರ್ವಜನಿಕ ವಿರೋಧ ಎದುರಿಸುತ್ತಿರುವ ಶಾಸಕರನ್ನು “ಸೋಸು’ವುದಕ್ಕೆ ಚಿಂತನೆ ನಡೆಸಲಾಗಿದೆ. ಒಟ್ಟು ಸಂಖ್ಯಾ ಬಲದ ಶೇ.25ಷ್ಟು ಎಂದರೆ ಹೆಚ್ಚು ಕಡಿಮೆ 100ಕ್ಕೂ ಹೆಚ್ಚು ಶಾಸಕರು ಈ ಬಾರಿ ಅವಕಾಶ ಕಳೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸೋಮವಾರ ನಡೆದ ಬಿಜೆಪಿ ಚುನಾವಣಾ ಸಮಿತಿ ಸಭೆಯಲ್ಲಿ ಈ ಹೊಸ ತಂತ್ರಗಾರಿಕೆ ಪ್ರಸ್ತಾಪವಾಗಿದೆ. ಇದರ ಬೆನ್ನಲ್ಲೆ ಬಿಜೆಪಿಯ ಹಾಲಿ ಶಾಸಕರು ಪಕ್ಷ ತೊರೆದು ಅನ್ಯ ಪಕ್ಷಗಳ ಮೂಲಕ ಟಿಕೆಟ್ ಗಟ್ಟಿ ಮಾಡಿಕೊಳ್ಳುವ ಪ್ರಯತ್ನ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಜತೆಗೆ ಈ ವಾರದಲ್ಲೇ ವರಿಷ್ಠರು ದಿಲ್ಲಿಯಲ್ಲಿ ಸಭೆ ನಡೆಸಲಿದ್ದಾರೆ. ಹಾಲಿ ಶಾಸಕರ ಬಗ್ಗೆ ಬಿಜೆಪಿ ಈಗಾಗಲೇ ಕಾರ್ಯಕರ್ತರು ಹಾಗೂ ಸರ್ವೆ ಮೂಲಕ ಮಾಹಿತಿ ಪಡೆದುಕೊಂಡಿದ್ದು ಸೋಲಿನ ಸಾಧ್ಯತೆ ಇರುವವರಿಗೆ ಟಿಕೆಟ್ ನೀಡದೇ ಇರಲು ನಿರ್ಧರಿಸಲಾಗಿದೆ. ಮುಂದಿನ ಕೆಲ ದಿನಗಳ ಕಾಲ ಈ ವಿಚಾರ ಸಂಬಂಧ ಉತ್ತರಪ್ರದೇಶದಲ್ಲಿ ಭಾರಿ ವಿವಾದ ಸೃಷ್ಟಿಯಾಗುವ ಸಾಧ್ಯತೆ ಇದೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!