ಉತ್ತರ ಪ್ರದೇಶ | ಕೂಲಿ ಕೇಳಿದ್ದಕ್ಕಾಗಿ ಕಾರ್ಮಿಕನನ್ನು ಥಳಿಸಿ ಕೊಂದ ಬಿಜೆಪಿಯ ಮಾಜಿ ಶಾಸಕನ ಮಗ

Prasthutha|

ಲಕ್ನೋ: ಹೋಳಿ ಹಬ್ಬ ಆಚರಣೆಗಾಗಿ ಊರಿಗೆ ತೆರಳಲು ಎರಡು ತಿಂಗಳ ವೇತನ ಕೇಳಿದ್ದಕ್ಕಾಗಿ ಬಿಜೆಪಿಯ ಮಾಜಿ ಶಾಸಕನ ಮಗ ಕೂಲಿ ಕಾರ್ಮಿಕನೊಬ್ಬನನ್ನು  ಥಳಿಸಿ ಕೊಂದ ಘಟನೆ ನಡೆದಿದೆ. ಉತ್ತರ ಪ್ರದೇಶದ ಕನೌಜ್ ಜಿಲ್ಲೆಯ ಪೈನ್‌ಬಾಬಾದ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಬಿಜೆಪಿಯ ಮಾಜಿ ಶಾಸಕ ಬನ್ವಾರಿ ಲಾಲ್ ದೋಹ್ರೆ ಅವರ ಮನೆ ಕೆಲಸ ಮಾಡುತ್ತಿದ್ದ ಸಂದೇಶ್ ಕುಮಾರ್ (22) ಹತ್ಯೆಯಾದ ಯುವಕನಾಗಿದ್ದಾನೆ.

- Advertisement -

 ಸಂದೇಶ್ ಆರು ತಿಂಗಳಿನಿಂದ ಬಿಜೆಪಿ ನಾಯಕನ ಮನೆ ಕೆಲಸ ಮಾಡುತ್ತಿದ್ದು, ಎರಡು ತಿಂಗಳಿನಿಂದ ವೇತನ ನೀಡಲಾಗಲಿಲ್ಲ. ಹೋಳಿ ಹಬ್ಬದ ರಜಾದಿನವನ್ನು ಕುಟುಂಬದೊಂದಿಗೆ ಕಳೆಯಲು ಕಳೆದ ಎರಡು ತಿಂಗಳ ವೇತನವನ್ನು ಕೋರಿದಾಗ ಬಿಜೆಪಿಯ ಮಾಜಿ ಶಾಸಕ ಬನ್ವಾರಿ ಲಾಲ್ ಅವರ ಪುತ್ರ ಅಜಿತ್ ಕುಮಾರ್ ಕೆಲಸಗಾರನ ತಲೆಗೆ ಬಂದೂಕಿನ ತುದಿಯಿಂದ ಚುಚ್ಚಿ ನಂತರ ಆತನನ್ನು ಮನೆಯ ಹೊರಗೆ ಎಳೆದೊಯ್ದು ನೆಲಕ್ಕೆ ಬೀಳಿಸಿ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ನಂತರ ಮುಖಂಡನ ಮನೆಯ ಮುಂದೆ ಸಂದೇಶ್ ಗಾಯಗೊಂಡು ಬಿದ್ದಿರುವುದಾಗಿ ಕೆಲವು ಸ್ಥಳೀಯರು ಸಂಬಂಧಿಕರಿಗೆ ಮಾಹಿತಿ ನೀಡಿದ್ದಾರೆ.

ಸಂಬಂಧಿಕರು ಆಸ್ಪತ್ರೆಗೆ ಸಾಗಿಸಿದ್ದರೂ ಮರುದಿನ ಸಂದೇಶ್ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿ ಸಾವನ್ನಪ್ಪಿದ್ದಾನೆ. ಹಂತಕ ಅಜಿತ್ ಕುಮಾರ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಜಿತ್ ಕುಮಾರ್ ಹಿಂದುತ್ವ ಸಂಘಟನೆಯಾದ ವಿಶ್ವ ಹಿಂದೂ ಮಹಾಸಂಘ್ ಜಿಲ್ಲಾಧ್ಯಕ್ಷ ಎಂದು ತಿಳಿದು ಬಂದಿದೆ. ಆತನನ್ನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಕಣಕ್ಕಿಳಿಸಲು ಬಿಜೆಪಿ ನಿರ್ಧರಿಸಿತ್ತು. ಇದಕ್ಕಾಗಿ ಅಜಿತ್ ಕುಮಾರ್ ನ ಫೋಟೋಗಳಿರುವ ಪೋಸ್ಟರ್ಗಳನ್ನು ಕನ್ನೌಜ್ ನಗರದಾದ್ಯಂತ ಅಂಟಿಸಲಾಗಿತ್ತು.

Join Whatsapp