ಉತ್ತರ ಪ್ರದೇಶ: ವಿಗ್ರಹ ಮುಟ್ಟಿದ್ದಾನೆಂದು ಆರೋಪಿಸಿ ದಲಿತ ವ್ಯಕ್ತಿಯ ಕೊಲೆ- ಕುಟುಂಬದ ಆರೋಪ

Prasthutha|

ಲಕ್ನೋ: ಉತ್ತರ ಪ್ರದೇಶದ ಪ್ರತಾಪ್ ಗಢ್ ಜಿಲ್ಲೆಯ ಉಧಾ ಗ್ರಾಮದಲ್ಲಿ ದಲಿತ ವ್ಯಕ್ತಿಯೊಬ್ಬರು ದುರ್ಗಾ ಪೂಜೆಯ ಮಂಟಪದಲ್ಲಿ ವಿಗ್ರಹವನ್ನು ಮುಟ್ಟಿದ್ದಾನೆಂದು ಆರೋಪಿಸಿ ಆತನನ್ನು ಕೊಲೆಗೈದಿರುವ ದಾರುಣ ಘಟನೆ ನಡೆದಿದೆ.

- Advertisement -


ಆದರೆ ಈ ಆರೋಪವನ್ನು ಪೊಲೀಸರು ನಿರಾಕರಿಸಿದ್ದಾರೆ.
ಸೆಪ್ಟೆಂಬರ್ 30ರಂದು ಸಂಭವಿಸಿದ ಈ ಘಟನೆಯನ್ನು ಹಿಂದಿ ನ್ಯೂಸ್ ಪೋರ್ಟಲ್ ‘ಬೋಲ್ಟಾ ಹಿಂದೂಸ್ತಾನ್’ ಅಕ್ಟೋಬರ್ 4ರಂದು ಪ್ರಕಟಿಸಿದೆ. ನಂತರ ಅದನ್ನು ಆಮ್ ಆದ್ಮಿ ಪಕ್ಷದ ನಾಯಕ ಸಂಜಯ್ ಸಿಂಗ್ ಸೇರಿದಂತೆ ಹಲವರು ರೀಟ್ವೀಟ್ ಮಾಡಿದ್ದಾರೆ.


ಬೋಲ್ಟಾ ಹಿಂದೂಸ್ತಾನ್ ಟ್ವೀಟ್ ಮಾಡಿರುವ ವಿಡಿಯೊದಲ್ಲಿ ಮಹಿಳೆಯೊಬ್ಬರು “ಜಗ್ರೂಪ್ ಹರಿಜನ್ ಅವರು ದುರ್ಗಾ ಪೂಜೆಯನ್ನು ನೋಡಲು ಹತ್ತಿರದ ಮನೆಗೆ ಹೋದ ಸಂದರ್ಭದಲ್ಲಿ ಮುನ್ನಾ ಮತ್ತು ಸಂದೀಪ್ ಸೇರಿ ಕೊಲೆಮಾಡಿದ್ದಾರೆ” ಎಂದು ಉಲ್ಲೇಖಿಸಲಾಗಿದೆ.

- Advertisement -


ಮತ್ತೊಂದು ವಿಡಿಯೊ ಕುರಿತು ‘ದಿ ವೈರ್’ ವರದಿ ಮಾಡಿದ್ದು ಜಗ್ರೂಪ್ ಅವರ ಅಳಿಯ ಎಂದು ಹೇಳಲಾಗುವ ವ್ಯಕ್ತಿಯೊಬ್ಬರು “ಜಗ್ರೂಪ್ ವಿಗ್ರಹದ ಪಾದಗಳನ್ನು ಮುಟ್ಟಿದ ತಕ್ಷಣ ಅರ್ಧ ಜೀವ ಹೋಗುವಂತೆ ದಾಳಿ ನಡೆಯಿತು. ಜಗ್ರೂಪ್ ಅವರನ್ನು ದಾಳಿಕೋರರು ಮನೆಗೆ ಕರೆತಂದಿದ್ದಾರೆ. ನಂತರ ಅವರು ಜಗ್ರೂಪ್ ಅವರನ್ನು ಚಿಕಿತ್ಸೆಗಾಗಿ ಪ್ರತಾಪಗಢಕ್ಕೆ ಕರೆದೊಯ್ದರು, ಆದರೆ ಅವರು ಅಷ್ಟರದಲ್ಲಿ ನಿಧನರಾಗಿದ್ದರು”ಎಂದಿದ್ದಾರೆ. ಕುಟುಂಬಕ್ಕೆ ಯಾವುದೇ ನೆರವು ಸಿಕ್ಕಿಲ್ಲ ಮತ್ತು ನ್ಯಾಯಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲು ಸಿದ್ಧ ಎಂದು ಹೇಳಿದ್ದಾರೆ.

ಜಾತಿ ಕಾರಣಕ್ಕಾಗಿ ಕೊಲೆಯಾಗಿದೆ ಎಂಬುದನ್ನು ಪೊಲೀಸರು ತಳ್ಳಿಹಾಕಿದ್ದು, “ಇದು ಕೇವಲ ಸಾಮಾಜಿಕ ಮಾಧ್ಯಮದ ವದಂತಿ” ಎಂದು ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 304 ಅಡಿಯಲ್ಲಿ ಪ್ರತಾಪ್ ಗಢ ಪೊಲೀಸರು ದಾಖಲಿಸಿದ ಎಫ್ ಐಆರ್ ನಲ್ಲಿ, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯ ಸೆಕ್ಷನ್ 3(2)(v) ಅನ್ನೂ ಸೇರಿಸಲಾಗಿದೆ.


ಈ ವೀಡಿಯೊವನ್ನು ಯಾವಾಗ ಚಿತ್ರೀಕರಿಸಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಎಫ್ ಐಆರ್ ನ ಪ್ರತಿಯನ್ನು ಅಕ್ಟೋಬರ್ 2 ರಂದು ದಾಖಲಿಸಲಾಗಿದೆ.
ಪ್ರತಾಪ್ಗಢ ಪೊಲೀಸರು ಅಕ್ಟೋಬರ್ 4 ರಂದು ವಿಡಿಯೊವೊಂದನ್ನು ಬಿಡುಗಡೆ ಮಾಡಿದ್ದಾರೆ. ಕೊಲೆಯಾದ ವ್ಯಕ್ತಿಯನ್ನು ‘ರಾಮ್ ಜೀವನ್’ ಎಂದು ಗುರುತಿಸಲಾಗಿದೆ.
ಪೂರ್ವ ಪ್ರತಾಪ್ ಗಢದ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವಿದ್ಯಾಸಾಗರ್ ಮಿಶ್ರಾ ಅವರು ಘಟನೆಯನ್ನು ವಿವರಿಸಿ, ಪಂಕಜ್ ದುಬೆ ಮತ್ತು ರಾಮ್ ಸರೋಬರ್ ಮಿಶ್ರಾ ಅವರ ಮನೆಗೆ ರಾಮ್ ಜೀವನ್ ಅವರು ವಿಗ್ರಹವನ್ನು ನೋಡಲು ಹೋಗಿದ್ದರು. “ಅಲ್ಲಿ ಕುಲದೀಪ್ ಮತ್ತು ಸಂದೀಪ್ ಎಂಬುವರು ತಮಗೆ ಸೈಕಲ್ ಬಿಡಲು ಕೊಡುವಂತೆ ರಾಮ್ ಜೀವನ್ ಗೆ ಕೇಳಿಕೊಂಡರು. ಆದರೆ ಅವರು ನಿರಾಕರಿಸಿದಾಗ ಕುಲದೀಪ್ ಮತ್ತು ಸಂದೀಪ್ ಅವರು ರಾಮ್ ಜೀವನ್ ಮೇಲೆ ದಾಳಿ ಮಾಡುತ್ತಾರೆ. ನಂತರ ಗಾಯಗೊಂಡ ಆತನನ್ನು ಆತನ ಮನೆಗೆ ಕರೆದೊಯ್ದರು. ಅಂತಿಮವಾಗಿ ರಾಮ್ ಮನೆಯಲ್ಲೇ ಕೊನೆಯುಸಿರೆಳೆದರು” ಎಂದು ಎಎಸ್ಪಿ ಹೇಳಿದ್ದಾರೆ.


ಆರೋಪಿಗಳನ್ನು ಬಂಧಿಸಲು ತನಿಖಾ ತಂಡವನ್ನು ರಚಿಸಲಾಗಿದೆ ಮತ್ತು ಎಫ್ ಐಆರ್ ದಾಖಲಿಸಲಾಗಿದೆ ಎಂದು ಮಿಶ್ರಾ ಹೇಳಿದ್ದಾರೆ. ವಿಗ್ರಹವನ್ನು ಸ್ಪರ್ಶಿಸಿದ ಕಾರಣಕ್ಕೆ ಸಾವು ಸಂಭವಿಸಿಲ್ಲ ಎಂದು ಅವರು ಹೇಳಿದ್ದಾರೆ.
“ದುರ್ಗಾ ಮೂರ್ತಿಯನ್ನು ಮುಟ್ಟಿದ ಕಾರಣಕ್ಕೆ ವ್ಯಕ್ತಿಯನ್ನು ಥಳಿಸಿ ಕೊಲ್ಲಲಾಯಿತು ಎಂಬ ವದಂತಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದೆ. ಇದು ಸಂಪೂರ್ಣ ಸುಳ್ಳು” ಎಂದು ಮಿಶ್ರಾ ವಿಡಿಯೋ ಮೂಲಕ ತಿಳಿಸಿದ್ದಾರೆ.


‘ದಿ ಇಂಡಿಯನ್ ಎಕ್ಸ್ ಪ್ರೆಸ್’ ವರದಿ ಪ್ರಕಾರ ಮೂವರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ ಎಂದು ಎಎಸ್ ಪಿ ಹೇಳಿದ್ದಾರೆ. ಆರೋಪಿಗಳಾದ ಸಂದೀಪ್ ಮಿಶ್ರಾ, ಕುಲದೀಪ್ ಮಿಶ್ರಾ ಮತ್ತು ಮುನ್ನಾ ಲಾಲ್ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.




Join Whatsapp