ಮಧ್ಯಪ್ರದೇಶ | ಎರಡು ಸಮುದಾಯಗಳ ನಡುವೆ ಘರ್ಷಣೆ ಆರೋಪ; ಮೂವರು ಮುಸ್ಲಿಮರ ಮನೆ ಧ್ವಂಸ

Prasthutha|

ಭೋಪಾಲ್: ಎರಡು ಸಮುದಾಯಗಳ ಯುವಕರ ನಡುವಿನ ಘರ್ಷಣೆಗೆ ಮುಸ್ಲಿಮ್ ಯುವಕರು ಕಾರಣ ಎಂದು ಆರೋಪಿಸಿ, ಮುಸ್ಲಿಮರ ಮೂರು ಮನೆಗಳನ್ನು ಅಧಿಕಾರಿಗಳು ಧ್ವಂಸಗೊಳಿಸಿದ ಘಟನೆ ಮಧ್ಯಪ್ರದೇಶದ ಮಂಡಸೌರ್’ನ ಪಕ್ಕದ ಗ್ರಾಮವಾದ ಸೂರಜ್’ನಲ್ಲಿ ನಡೆದಿದೆ. ಮುಸ್ಲಿಮ್ ಯುವಕರು ಹಿಂದೂಗಳ ನವರಾತ್ರಿ ಹಬ್ಬಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಮಧ್ಯಪ್ರದೇಶ ಪೊಲೀಸರು ಆರೋಪಿಸಿದರೆ, ಮುಸ್ಲಿಮ್ ಕುಟುಂಬಗಳು ಈ ಆರೋಪವನ್ನು ನಿರಾಕರಿಸಿದೆ.

- Advertisement -

ವಾರಾಂತ್ಯದಲ್ಲಿ ಗರ್ಭಾ ಪೆಂಡಲ್’ಗೆ ಕಲ್ಲು ತೂರಾಟ ನಡೆಸಿ, ಕಾರ್ಯಕ್ರಮ ಸಂಘಟಕರ ಮೇಲೆ ಮಾರಕಾಯುಧದಿಂದ ದಾಳಿ ನಡೆಸಿದ ಆರೋಪದಲ್ಲಿ ಮಂಡಸೌರ್ ಜಿಲ್ಲಾಡಳಿತ ಮತ್ತು ಪೊಲೀಸರು ಮೂವರ ಮನೆಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅಕ್ರಮವಾಗಿ ಮನೆಗಳನ್ನು ನಿರ್ಮಾಣ ಮಾಡಿರುವುದರಿಂದ ಈ ಕ್ರಮ ಜರುಗಿಸಿದ್ದೇವೆ. ನಾವು ಎಲ್ಲಾ ಆರೋಪಿಗಳ ಆಸ್ತಿ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದೇವೆ ಮತ್ತು ಅದರ ಆಧಾರದಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಮಂಡಸೌರ್ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಸಂದೀಪ್ ಶಿವ ಮಾಧ್ಯಮಗಳಿಗೆ ತಿಳಿಸಿದ್ದಾರೆ.

- Advertisement -

ಘರ್ಷಣೆಗೆ ಸಂಬಂಧಿಸಿದಂತೆ ಸುರ್ಜನಿ ಗ್ರಾಮದ 19 ಮಂದಿಯ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದುವರೆಗೂ 11 ಮಂದಿಯನ್ನು ಬಂಧಿಸಲಾಗಿದೆ. ಧ್ವಂಸಗೊಂಡ ಮನೆಗಳಲ್ಲಿ ಈ ಪ್ರಕರಣದ ಆರೋಪಿ ಸಲ್ಮಾನ್ ಖಾನ್ ಅವರ ಮನೆಯೂ ಸೇರಿದೆ ಎಂದು ಹೇಳಲಾಗಿದೆ.

ಆರು ತಿಂಗಳ ಹಿಂದೆ ರಾಮನವಮಿ ಹಬ್ಬದ ವೇಳೆ ಮುಸ್ಲಿಮರ ಮೇಲೆ ಗಲಭೆ ಮತ್ತು ಹಿಂಸಾಚಾರದ ಸುಳ್ಳಾರೋಪ ಹೊರಿಸಿ ಸುಮಾರು 50ಕ್ಕೂ ಅಧಿಕ ಮುಸ್ಲಿಮರ ಮನೆಗಳ ಮೇಲೆ ಬುಲ್ಡೋಝರ್ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ಅವುಗಳನ್ನು ಧ್ವಂಸಗೊಳಿಸಿದ್ದರು.

Join Whatsapp