ಪಾಕಿಸ್ತಾನ| ಕ್ರಿಕೆಟ್ ಪಂದ್ಯದ ವೇಳೆ ಮೈದಾನದಲ್ಲಿ ಕುಸಿದು ಬಿದ್ದು ಆಟಗಾರ ಸಾವು

ಲಾಹೋರ್: ಕ್ರಿಕೆಟ್‌ ಪಂದ್ಯದ ನಡುವೆಯೇ ಕ್ಷೇತ್ರರಕ್ಷಣೆಯಲ್ಲಿದ್ದ ಆಟಗಾರನೋರ್ವ ಕುಸಿದುಬಿದ್ದು ಮೃತಪಟ್ಟಿರುವ ಘಟನೆ ಪಾಕಿಸ್ತಾನದಲ್ಲಿ ನಡೆದಿದೆ.

ಪಾಕಿಸ್ತಾನ ಕಾರ್ಪೋರೇಟ್ ಲೀಗ್ ಟೂರ್ನಿಯ ಭಾಗವಾಗಿ ಬರ್ಗರ್ ಪೇಂಟ್ಸ್ ಮತ್ತು ಫ್ರೈಸ್ ಲ್ಯಾಂಡ್ ತಂಡಗಳು ಭಾನುವಾರ ಮುಖಾಮುಖಿಯಾಗಿದ್ದವು.  ಲಾಹೋರ್‌ನ ಜುಬಲಿ ಕ್ರಿಕೆಟ್ ಮೈದಾದನಲ್ಲಿ ನಡೆದ ಪಂದ್ಯದ ಮೊದಲ ಇನ್ನಿಂಗ್ಸ್‌ನ 11ನೇ ಓವರ್‌ನಲ್ಲಿ ಕ್ಷೇತ್ರರಕ್ಷಣೆಯಲ್ಲಿ ತೊಡಗಿದ್ದ ಫ್ರೈಸ್ ಲ್ಯಾಂಡ್ ತಂಡದ ಉಸ್ಮಾನ್ ಶಿನ್ವಾರಿಗೆ ಹೃದಯಾಘಾತವಾಗಿ ಮೈದಾನದಲ್ಲೇ ಕುಸಿದು ಬಿದ್ದರು. ಕೂಡಲೇ ಶಿನ್ವಾರನ್ನು  ಆಸ್ಪತ್ರೆಗೆ ದಾಖಲಾಯಿಸಿತಾದರೂ, ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ. ಘಟನೆಯ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.‌

- Advertisement -

ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ

ಪಂದ್ಯದ ನಡುವೆಯೇ ಹೃದಯಾಘಾತವಾಗಿ ಪಾಕಿಸ್ತಾನದ ಆಟಗಾರ ಉಸ್ಮಾನ್ ಶಿನ್ವಾರಿ ಮೃತಪಟ್ಟಿದ್ಧಾರೆ ಎಂಬ ಸುದ್ದಿ ಎಲ್ಲೆಡೆ ಹರಡಿತ್ತು. ವಾಸ್ತವವಾಗಿ ಉಸ್ಮಾನ್‌ ಶಿನ್ವಾರಿ, ಪಾಕಿಸ್ತಾನದ ರಾಷ್ಟ್ರೀಯ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುವ ಆಟಗಾರನಾಗಿದ್ದಾರೆ. ಮೃತಪಟ್ಟ ಉಸ್ಮಾನ್‌, ಸ್ಥಳಿಯ ತಂಡಗಳ ಪರ ಆಡುತ್ತಿದ್ದರು.

ಈ ಹಿನ್ನಲೆಯಲ್ಲಿ ತಮ್ಮ ಟ್ವಿಟರ್‌ ಖಾತೆಯಲ್ಲಿ ಈ ಕುರಿತು ಅಂತಾರಾಷ್ಟ್ರೀಯ ಆಟಗಾರ  ಉಸ್ಮಾನ್‌ ಶಿನ್ವಾರಿ ಸ್ಪಷ್ಟನೆ ನೀಡಿದ್ದಾರೆ.

ʻಅಲ್ಲಾಹುವಿನ ಕಾರುಣ್ಯದಿಂದಾಗಿ ನಾನು ಆರೋಗ್ಯವಾಗಿದ್ದೇನೆ. ನನ್ನ ಕುಟುಂಬದವರಿಗೆ ನಿರಂತರವಾಗಿ ಕರೆಗಳು ಬರುತ್ತಿದೆ. ದಯವಿಟ್ಟು ಇಂತಹ ಸುದ್ದಿಗಳನ್ನು ಹರಡುವ ಮೊದಲು ಸತ್ಯಾಸತ್ಯಾತೆಯನ್ನು ವಿಚಾರಿಸಿ ಎಂದು ಎಲ್ಲರಲ್ಲೂ ವಿನಂತಿಸುತ್ತಿದ್ದೇನೆʼ ಎಂದು ಶಿನ್ವಾರಿ ಟ್ವೀಟ್‌ ಮಾಡಿದ್ದಾರೆ.