ನಿಂತೇ ಹೋಗಿತ್ತು ಸ್ವಿಮ್ಮರ್ ಉಸಿರು, ದೇವರಂತೆ ಬಂದು ಕಾಪಾಡಿದ ಕೋಚ್ !

Prasthutha|

ಈಜುಕೊಳದಲ್ಲಿ ಮೂರ್ಛೆ ಹೋಗಿ ಮುಳುಗುತ್ತಿದ್ದ ಸ್ಪರ್ಧಿಯೊಬ್ಬರನ್ನು ಆಕೆಯ ಕೋಚ್‌ ಅತ್ಯಂತ ಸಾಹಸ ರೀತಿಯಲ್ಲಿ ರಕ್ಷಿಸಿದ ಅಪರೂಪದ ಘಟನೆ ಬುಡಾಪೆಸ್ಟ್‌ನಲ್ಲಿ ನಡೆದಿದೆ. 

- Advertisement -

2022 ಫಿನ ವಿಶ್ವ ಅಕ್ವಾಟಿಕ್ ಚಾಂಪಿಯನ್​ಶಿಪ್ ಸ್ಪರ್ಧೆಯ ಮಹಿಳೆಯರ ವೈಯಕ್ತಿಕ ಫ್ರೀ ಆರ್ಟಿಸ್ಟಿಕ್ ವಿಭಾಗದಲ್ಲಿ ಅಮೆರಿಕದ ಈಜುಗಾರ್ತಿ ಅನಿತಾ ಆಲ್ವಾರೆಜ್ ಫೈನಲ್‌ ತಲುಪಿದ್ದರು. ಅಂತಿಮ ಪ್ರದರ್ಶನ ನೀಡುತ್ತಿದ್ದ ವೇಳೆ ಈಜುಕೊಳದಲ್ಲಿ ಮೂರ್ಛೆ ಹೋಗಿ ನೀರಿನಲ್ಲಿ ಮುಳುಗುತ್ತಿದ್ದರು. ಅನಿತಾ ಆಳಕ್ಕೆ ಹೋಗುತ್ತಿರುವುದನ್ನು ಗಮನಿಸಿದ ಆಕೆಯ ಕೋಚ್‌,  ಆ್ಯಂಡ್ರಿ ಫ್ಯೂಯೆಂಟೆಸ್ ಕ್ಷಣ ಮಾತ್ರದಲ್ಲಿ ನೀರಿಗೆ ಧುಮುಕಿ ಅನಿತಾರನ್ನು ಮೇಲಕ್ಕೆತ್ತಿದ್ದಾರೆ. ಈ ವೇಳೆ ಅನಿತಾರ ಉಸಿರಾಟ ನಿಂತು ಹೋಗಿತ್ತು. ತಕ್ಷಣವೇ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗಿದ್ದು, ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ. ಅನಿತಾರನ್ನು ಕೋಚ್‌ ಮೇಲೆಕ್ಕೆತ್ತಿದ ಕ್ಷಣ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ಹಲವರು ಕಣ್ಣೀರಿಡುತ್ತಿದ್ದರು. ಫೈನಲ್‌ ಸ್ಪರ್ಧೆ ಆರಂಭವಾಗುವುದಕ್ಕೂ ಮೊದಲು ಅನಿತಾ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದರೂ ಸಹ, ಅದನ್ನು ಲೆಕ್ಕಿಸದೆ ಸ್ಪರ್ಧಿಸುವ ಧೈರ್ಯ ತೋರಿದ್ದರು.

ಅನಿತಾ ಮುಳುಗುತ್ತಿದ್ದರೂ, ಚಾಂಪಿಯನ್‌ಷಿಪ್‌ಗೆ ನೇಮಕವಾಗಿದ್ದ ಸ್ವಯಂಸೇವಕ  ಜೀವರಕ್ಷಕರು ಏನು ಮಾಡಬೇಕು ಎಂದು ತೋಚದೆ ಕುಳಿತಿದ್ದರು. ತಕ್ಷಣ ನೀರಿಗಿಳಿಯುವಂತೆ ಅವರಿಗೆ ಕೋಚ್‌ ಆ್ಯಂಡ್ರಿ ಫ್ಯೂಯೆಂಟೆಸ್ ಸೂಚನೆ ನೀಡಿದ್ದರೂ, ಅವರು ಕೇಳಿಸಿಕೊಂಡಿರಲಿಲ್ಲ ಹೀಗಾಗಿ ತಾವೇ ಸ್ಪರ್ಧಿಯ ರಕ್ಷಣೆಗೆ ಧಾವಿಸಿದ್ದರು. ಕೋಚ್‌  ಸಮಯಪ್ರಜ್ಞೆಗೆ ಎಲ್ಲಡೆಯಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗಿದೆ.

- Advertisement -

ʼನಾನು ಮತ್ತು ಅನಿತಾ ಆಲ್ವಾರೆಜ್‌ಗೆ ಕೆಲಕಾಲ ಆತಂಕಕ್ಕೆ ಒಳಗಾಗಿದ್ದೆವು. ಅನಿತಾ ಉಸಿರಾಟ ನಿಂತಿದ್ದ ಕಾರಣ ನಾನು ಭಯಗೊಂಡಿದ್ದೆ. ಈಗ ಚೇತರಿಸಿಕೊಂಡಿದ್ದಾಳೆ. ಶುಕ್ರವಾರದ ಸ್ಪರ್ಧೆಯಲ್ಲಿ ಭಾಗವಹಿಸುವ ನಿರೀಕ್ಷೆ ಹೊಂದಿದ್ದೇನೆ ಎಂದು ನಾಲ್ಕು ಬಾರಿ ಒಲಿಂಪಿಕ್ ಪದಕ  ಗೆದ್ದಿರುವ ಮಾಜಿ ಈಜುಗಾರ್ತಿ, ಕೋಚ್‌ ಫ್ಯೂಯೆಂಟೆಸ್ ಘಟನೆಯ ಬಳಿಕ ಪ್ರತಿಕ್ರಿಯಿಸಿದ್ದಾರೆ.

ಇದೇ ಮೊದಲಲ್ಲ !

ಅಮೆರಿಕಾದ 25 ವರ್ಷದ ಈಜುಗಾರ್ತಿ ಅನಿತಾ ಆಲ್ವಾರೆಜ್, ಮೂರನೇ ಬಾರಿಗೆ ವಿಶ್ವ ಅಕ್ವಾಟಿಕ್ ಚಾಂಪಿಯನ್​ಶಿಪ್ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಾರೆ.‌ ಕಳೆದ ವರ್ಷ ಸ್ಪೈನ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ ಅರ್ಹತಾ ಟೂರ್ನಿಯ ವೇಳೆಯೂ ಅನಿತಾ ಈಜುಕೊಳದಲ್ಲಿ ಪ್ರಜ್ಞೆತಪ್ಪಿದ್ದರು. ಆ ವೇಳೆಯೂ ಕೋಚ್‌ ಫ್ಯೂಯೆಂಟೆಸ್ ರಕ್ಷಣೆಗೆ ಧಾವಿಸಿದ್ದರು.

Join Whatsapp