‘ಯುಪಿಎಸ್ ಸಿ ಜಿಹಾದ್’ ಕಾರ್ಯಕ್ರಮ ಪ್ರಸಾರ | ‘ಸುದರ್ಶನ್ ನ್ಯೂಸ್’ ಹಬ್ಬಿದ ಸುಳ್ಳುಗಳೇನು? | ಇಲ್ಲಿದೆ ಉತ್ತರ

Prasthutha|

ನವದೆಹಲಿ : ಬಿಜೆಪಿ ಬೆಂಬಲಿಗ ಪತ್ರಕರ್ತ, ‘ಸುದರ್ಶನ್ ನ್ಯೂಸ್’ ಪ್ರಧಾನ ಸಂಪಾದಕ ಸುರೇಶ್ ಚಾವಂಕೆಯ ವಿವಾದಿತ ಕಾರ್ಯಕ್ರಮ ‘ಯುಪಿಎಸ್ ಸಿ ಜಿಹಾದ್’ ಕಾರ್ಯಕ್ರಮ ಸೆ.11ರಂದು ಪ್ರಸಾರಗೊಂಡಿದೆ. ನಾಗರಿಕ ಸೇವಾ ಪರೀಕ್ಷೆ ಮುಸ್ಲಿಂ ಅಭ್ಯರ್ಥಿಗಳ ಪರವಾಗಿ ಹೇಗೆ ವಿನ್ಯಾಸಗೊಂಡಿದೆ ಮತ್ತು ಕಾರ್ಯನಿರ್ವಹಿಸುತ್ತಿದೆ ಎಂಬುದರ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚಿಸಲಾಗಿದೆ. ಕಾರ್ಯಕ್ರಮದಲ್ಲಿ ಯಾವೆಲ್ಲಾ ತಪ್ಪು ಮಾಹಿತಿಗಳು ಒಳಗೊಂಡಿವೆ ಎಂಬುದನ್ನು ‘ದ ಕ್ವಿಂಟ್’ ವೆಬ್ ವಾಹಿನಿ ವರದಿ ಮಾಡಿದೆ

ವಿವಾದಿತ ಕಾರ್ಯಕ್ರಮದ ಕುರಿತ ಪ್ರಮೋ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಚಾವಂಕೆಯ ವಿರುದ್ಧ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ, ಕೇಂದ್ರ ಸರಕಾರ ಅವರ ವಿರುದ್ಧ ನೋಟಿಸ್ ಜಾರಿಗೊಳಿಸಿತ್ತು. ಬಳಿಕ, ಕಾರ್ಯಕ್ರಮ ಪ್ರಸಾರ ನೀತಿಯನ್ನು ಉಲ್ಲಂಘಿಸುವುದಿಲ್ಲ ಎಂದು ಚಾನೆಲ್ ಭರವಸೆ ನೀಡಿರುವುದರಿಂದ ಪ್ರಸಾರಕ್ಕೆ ಅನುಮತಿ ನೀಡುತ್ತಿರುವುದಾಗಿ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯ ತಿಳಿಸಿತ್ತು. ಕಾರ್ಯಕ್ರಮ ಪ್ರಸಾರದ ಬಳಿಕ, ಅದರಲ್ಲಿ ಕಾನೂನು ಉಲ್ಲಂಘಿಸಿದ್ದರೆ ಕ್ರಮ ಕೈಗೊಳ್ಳಲಾಗುವುದು ಎಂದೂ ಸಚಿವಾಲಯ ಭರವಸೆ ನೀಡಿತ್ತು.

- Advertisement -

ಇದೀಗ ‘ಯುಪಿಎಸ್ ಸಿ ಜಿಹಾದ್’ ಎಂಬ ಒಂದು ಗಂಟೆಯ ಕಾರ್ಯಕ್ರಮದಲ್ಲಿ ಚಾವಂಕೆ ಮಾಡಿರುವ ಎಡವಟ್ಟುಗಳ ಫ್ಯಾಕ್ಟ್ ಚೆಕ್ ‘ದ ಕ್ವಿಂಟ್’ ಮಾಡಿದೆ.
ಮೊದಲನೇಯದಾಗಿ, ಯುಪಿಎಸ್ ಸಿಯ ಅಭ್ಯರ್ಥಿಗಳನ್ನು ಜಾತಿ ಆಧಾರಿತವಾಗಿ ಗುರುತಿಸುತ್ತದೆಯೇ ಹೊರತು, ಧರ್ಮಾಧಾರಿತವಾಗಿ ಅಲ್ಲ. ಅಭ್ಯರ್ಥಿಗಳನ್ನು ಸಾಮಾನ್ಯ, ಒಬಿಸಿ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹೀಗೆ ವರ್ಗೀಕರಣಗೊಳಿಸಲಾಗಿರುತ್ತದೆ.

ವಾದ 1 : ವಯೋಮಿತಿ ಸಡಿಲಿಕೆ ಲಾಭ
ಯುಪಿಎಸ್ ಸಿ ಪರೀಕ್ಷೆಗೆ ಹಾಜರಾಗುವ ಸಾಮಾನ್ಯ ಅಭ್ಯರ್ಥಿಗಳು, ಮುಸ್ಲಿಮೇತರ ಅಭ್ಯರ್ಥಿಗಳಿಗಿಂತ ಒಬಿಸಿ ಮುಸ್ಲಿಮರು ಮೂರು ವರ್ಷ ವಯೋಮಿತಿಯ ಲಾಭ ಪಡೆಯುತ್ತಾರೆ ಎಂದು ಚಾವಂಕೆ ಪ್ರತಿಪಾದಿಸುತ್ತಾರೆ.
ಸತ್ಯಾಂಶ ಏನು? :
ವಯಸ್ಸಿನ ಮಿತಿ ಕುರಿತ ಯುಪಿಎಸ್ ಸಿ ಮಾರ್ಗಸೂಚಿ ನೋಡಿ. ಯುಪಿಎಸ್ ಸಿ 2020ರ ಸುತ್ತೋಲೆ ಪ್ರಕಾರ, ಸಾಮಾನ್ಯ ವರ್ಗದ ಅಭ್ಯರ್ಥಿಗಳು 2020, ಆ.1ಕ್ಕೆ 32 ವಯಸ್ಸು ಮೀರಿರಬಾರದು. ಅದರಲ್ಲಿ ಒಬಿಸಿಗಳಿಗೆ 35 ಮತ್ತು ಎಸ್ ಸಿ/ಎಸ್ ಟಿಗಳಿಗೆ 37 ವಯೋಮಿತಿ ಅಂತಿಮವಾಗಿದ್ದು, ಒಬಿಸಿ ಮತ್ತು ಎಸ್ಸಿ/ಎಸ್ ಟಿಗಳಿಗೆ ಕ್ರಮವಾಗಿ ಮೂರು ಮತ್ತು ಐದು ವರ್ಷಗಳ ಸಡಿಲಿಕೆಯಿದೆ. ಮೂರು ವರ್ಷ ಸಡಿಲಿಕೆ ನಿಯಮ ಇತರ ಹಿಂದುಳಿದ ವರ್ಗಗಳು (ಒಬಿಸಿ) ಪಟ್ಟಿಯಲ್ಲಿ ಗುರುತಿಸಲ್ಪಟ್ಟಿರುವ ಎಲ್ಲಾ ಸಮುದಾಯಗಳಿಗೂ ಅನ್ವಯವಾಗುತ್ತದೆ. ಇದರ ಲಾಭ ಮುಸ್ಲಿಮರಿಗೆ ಮಾತ್ರ ಅಲ್ಲ. ಇಲ್ಲಿ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೇನೂ ವಿಶೇಷ ಅವಕಾಶ ನೀಡಲಾಗಿಲ್ಲ.

ವಾದ 2 : ಪರೀಕ್ಷೆಯ ಪ್ರಯತ್ನಗಳ ಸಂಖ್ಯೆಯ ಲಾಭ
ಒಬಿಸಿ ವಿಭಾಗದಲ್ಲಿ ಕೆಲವರು ಪ್ರವೇಶಿಸಿ ಪರೀಕ್ಷೆ ಬರೆದಾಗ ಆಗುವ ಪರಿಣಾಮ ನೋಡಿ, ಸಾಮಾನ್ಯ ವರ್ಗದವರು ಆರು ಪ್ರಯತ್ನಗಳಲ್ಲಿ ಪರೀಕ್ಷೆ ಯಶಸ್ವಿಯಾಗಬೇಕು. ಆದರೆ, ಮುಸ್ಲಿಮರು 9 ವರ್ಷಗಳ ಲಾಭ ಪಡೆಯುತ್ತಾರೆ ಎಂದು ಚಾವಂಕೆ ಕಾರ್ಯಕ್ರಮದಲ್ಲಿ ಹೇಳುತ್ತಾರೆ.
ಸತ್ಯಾಂಶ : ಇದೂ ಮೊದಲಿನಂತೆಯೇ, ಇಲ್ಲೂ ಧರ್ಮದ ಆಧಾರದ ಲಾಭ ಮುಸ್ಲಿಮರಿಗಿಲ್ಲ. ಎಲ್ಲಾ ಒಬಿಸಿಗಳಂತೆ, ಒಬಿಸಿ ಮೀಸಲಾತಿಗೆ ಪ್ರಯತ್ನಿಸುವ ಮುಸ್ಲಿಮರಿಗೆ ಈ ಪ್ರಯೋಜನ ಸಿಗುತ್ತದೆ.

ವಾದ 3 : ಸಂದರ್ಶನದಲ್ಲಿ ಮುಸ್ಲಿಮರಿಗೆ ‘ವಿಶೇಷ ಉಪಚಾರ’
“ನಿಮ್ಮ ಸಂದರ್ಶನ ಸಾಮಾನ್ಯ ಸಂದರ್ಶನವಾಗಿರುವುದಿಲ್ಲ, ಅದಕ್ಕೆ ಹಲವು ಕಾರಣಗಳಿವೆ, ಒಂದು ಕಾರಣ ನಿಮ್ಮ ಪ್ರಾಯ, ಮತ್ತೊಂದು ನಿಮ್ಮ ಸಮುದಾಯ’’ ಎಂದು ‘ಅಣಕು ಸಂದರ್ಶನ’ವೊಂದಲ್ಲಿ ಸಂದರ್ಶಕನೊಬ್ಬ ಹೇಳುತ್ತಾನೆ ಎಂದು ಚಾವಂಕೆ ಪ್ರತಿಪಾದಿಸುತ್ತಾರೆ. ಸಂದರ್ಶಕ ನಿಮ್ಮ ಸಂದರ್ಶನ ವಿಶೇಷ ಎಂದು ಯಾಕೆ ಹೇಳಬೇಕು? ಸಮುದಾಯದ ಕಾರಣಕ್ಕಾಗಿ ಹೆಚ್ಚು ಅಂಕಗಳನ್ನು ನೀಡಲಾಗುತ್ತದೆಯೇ? ಇಲ್ಲವಾದರೆ ಉತ್ತರ ನೀಡಿ ಎಂದು ಚಾವಂಕೆ ಹೇಳುತ್ತಾರೆ.
ಸತ್ಯಾಂಶ : ಅಣಕು ಸಂದರ್ಶನ ‘ನೈಜ್ಯ ಸಂದರ್ಶನ’ಕ್ಕೆ ಹಾಜರಾಗುವ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಸಿದ್ಧಪಡಿಸಲಾಗಿರುತ್ತದೆ. ಕಾರ್ಯಕ್ರಮದಲ್ಲಿ ಚಾವಂಕೆ, ಅದೊಂದು ಅಣಕು ಸಂದರ್ಶನ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಅಂದ ಮೇಲೆ, ನೈಜ್ಯ ಸಂದರ್ಶನ ಆಧಾರಿತ ವರದಿ ಚಾವಂಕೆ ಮಾಡಿಲ್ಲ. ಹೀಗಾಗಿ ಚಾವಂಕೆಯ ಅಣಕು ಸಂದರ್ಶನ ಆಧಾರಿತ ಹೇಳಿಕೆ ಊಹೆಯಿಂದ ಕೂಡಿದೆಯೇ ಹೊರತು, ವಾಸ್ತವವಲ್ಲ.

ವಾದ 4 : ಮುಸ್ಲಿಮ್ ವಿಶ್ವವಿದ್ಯಾಲಯಗಳಲ್ಲಿ ಮುಸ್ಲಿಮರಿಗೆ ಲಾಭವಾಗಲು ಕೋಚಿಂಗ್ ಸೆಂಟರ್
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಐದು ಯುಪಿಎಸ್ ಸಿ ತರಬೇತಿ ಕೇಂದ್ರಗಳನ್ನು ಆರಂಭಿಸಿದ್ದರು ಎಂದು ಚಾವಂಕೆ ಹೇಳುತ್ತಾರೆ. ಇವುಗಳಲ್ಲಿ ನಾಲ್ಕು ಮುಸ್ಲಿಮ್ ವಿಶ್ವವಿದ್ಯಾಲಯಗಳಲ್ಲಿ ಆರಂಭಿಸಲಾಗಿದೆ. ಅವುಗಳನ್ನು ಮುಂಬೈ ವಿವಿ ಅಥವಾ ಚೆನ್ನೈ ವಿವಿಯಲ್ಲಿ ಯಾಕೆ ಆರಂಭಿಸಿಲ್ಲ ಎಂದು ಚಾವಂಕೆ ಪ್ರಶ್ನಿಸುತ್ತಾರೆ.
ಸತ್ಯಾಂಶ :
ಚಾವಂಕೆ ಹೇಳುತ್ತಿರುವ ಐದು ವಿಶ್ವವಿದ್ಯಾಯಲಗಳು ಯಾವುದೆಂದರೆ, ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿವಿ, ಜಾಮಿಯಾ ಹಮ್ ದರ್ದ್ ವಿವಿ, ಆಲಿಗಢ ಮುಸ್ಲಿಮ್ ವಿವಿ, ಮೌಲಾನಾ ಆಜಾದ್ ನ್ಯಾಶನಲ್ ಉರ್ದು ವಿವಿ, ಭೀಮರಾಮ್ ಅಂಬೇಡ್ಕರ್ ವಿವಿ. ಈ ವಿವಿಗಳಲ್ಲಿ ಸ್ಥಾಪಿಸಲಾಗಿರುವ ಕೋಚಿಂಗ್ ಸೆಂಟರ್ ಗಳು ಮುಸ್ಲಿಮರಿಗೆ ಮಾತ್ರ ಲಾಭವಾಗಲಿದೆ ಎಂದು ಸ್ಥಾಪಿಸಲ್ಪಟ್ಟಿಲ್ಲ. ನಾಗರಿಕ ಪರೀಕ್ಷೆಗಳಲ್ಲಿ ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ ಹೆಚ್ಚಾಗಲೆಂದು ಕೋಚಿಂಗ್ ಸೆಂಟರ್ ಗಳನ್ನು ಸರಕಾರ ತೆರೆಯುತ್ತಿದೆ ಎಂದು ಯುಜಿಸಿ ಅಧ್ಯಕ್ಷ ವೇದ ಪ್ರಕಾಶ್ ಹೇಳಿದ್ದ ಬಗ್ಗೆ ‘ದ ಪ್ರಿಂಟ್’ ನಲ್ಲಿ ವರದಿಯಾಗಿತ್ತು.
2019ರ ಮೇನಲ್ಲಿ ಜೆಎಂಐ ವೆಬ್ ಸೈಟ್ ನಲ್ಲಿ ಪ್ರಕಟವಾದ ವಿಶ್ವವಿದ್ಯಾಲಯದ ವಸತಿ ಕೋಚಿಂಗ್ ಅಕಾಡೆಮಿಯಲ್ಲಿ ಎಸ್ ಸಿ/ಎಸ್ ಟಿ, ಅಲ್ಪಸಂಖ್ಯಾತರು, ಮಹಿಳೆಯರು ಪ್ರವೇಶ ಪಡೆಯಬಹುದು ಎಂದು ಹೇಳಲಾಗಿದೆ. ಹೀಗಾಗಿ ಚಾವಂಕೆ ಪ್ರತಿಪಾದಿಸಿರುವ ವಾದ ಸುಳ್ಳು ಅಥವಾ ತಪ್ಪಾಗಿ ಅರ್ಥೈಸಲಾಗಿದೆ.

- Advertisement -