ಭೂ ಸುಧಾರಣೆ ಕಾಯ್ದೆ ಸಹಿತ ಹಲವು ಕಾನೂನುಗಳ ತಿದ್ದುಪಡಿಗೆ ವಿರೋಧ | ಸೆ.21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನೆ

Prasthutha|

➤ ರೈತ, ದಲಿತ, ಕಾರ್ಮಿಕ ಸಂಘಟನೆಗಳಿಂದ ಪ್ರತಿಭಟನೆ

- Advertisement -

ಬೆಂಗಳೂರು : ಸೆ. 21ರಂದು ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿ ಮತ್ತು ಚಳವಳಿಗಳ ಪರ್ಯಾಯ ಜನತಾ ಅಧಿವೇಶನ ನಡೆಸಲು ರೈತ, ದಲಿತ, ಕಾರ್ಮಿಕರ ಐಕ್ಯ ಹೋರಾಟ ಸಮಿತಿ ನಿರ್ಧರಿಸಿದೆ. ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿರುವ ಸಮಿತಿಯ ಮುಖಂಡರುಗಳು, ಕೇಂದ್ರ ಹಾಗೂ ರಾಜ್ಯ ಸರಕಾರಗಳು ಕೊರೊನಾ ಕಾಲದಲ್ಲಿ ನಮ್ಮನ್ನೆಲ್ಲಾ ಮನೆಯಲ್ಲಿ ಕೂಡಿಹಾಕಿ, ನಮ್ಮ ಜೀವನವನ್ನೇ ಕಿತ್ತುಕೊಳ್ಳುವ ಕಾನೂನುಗಳನ್ನು ರೂಪಿಸುತ್ತಿವೆ ಎಂದು ಆರೋಪಿಸಿದ್ದಾರೆ. ಕೇಂದ್ರ ಮಾಡುವ ಕಾನೂನುಗಳ ಹಿನ್ನೆಲೆಯಲ್ಲಿ ರಾಜ್ಯ ಸರಕಾರಗಳು ಸುಗ್ರೀವಾಜ್ಞೆಗಳ ಮೂಲಕ ಆದೇಶಗಳನ್ನು ಹೊರಡಿಸುತ್ತಿದೆ ಎಂದು ಅವರು ಆಪಾದಿಸಿದ್ದಾರೆ.

ಇಡೀ ದೇಶಕ್ಕೆ ಮಾದರಿ ಎನಿಸಿದ್ದ ಕರ್ನಾಟಕ ಭೂ ಸುಧಾರಣೆ ಕಾಯ್ದೆಗೆ ಅನಗತ್ಯ ತಿದ್ದುಪಡಿ ತಂದು ಅನ್ನ ಕೊಡುವ ಕೃಷಿ ಭೂಮಿಯನ್ನು ಬಂಡವಾಳಶಾಹಿಗಳಿಗೆ ಪರಭಾರೆ ಮಾಡಲು ರಾಜ್ಯ ಸರಕಾರ ಮುಂದಾಗಿದೆ ಎಂದು ಅವರು ತಿಳಿಸಿದ್ದಾರೆ.
ಎಪಿಎಂಸಿ ಕಾಯ್ದೆಗೆ ತಿದ್ದುಪಡಿ, ಕಾರ್ಮಿಕ ಹಕ್ಕುಗಳನ್ನು ಧಮನ ಮಾಡುವ ಕೈಗಾರಿಕೆ ಕಾಯ್ದೆ, ಐಡಿ ಕಾಯ್ದೆ ತಿದ್ದುಪಡಿ ಮಾಡಲಾಗುತ್ತಿದೆ. ಕೇಂದ್ರ ಸರಕಾರ ವಿದ್ಯುತ್ ಕಾಯ್ದೆಗೆ ತಿದ್ದುಪಡಿ ತಂದು, ಕೃಷಿ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಹಾಗೂ ಉತ್ಪಾದನೆಯನ್ನು ಬಹುರಾಷ್ಟ್ರೀಯ ಕಂಪೆನಿಗಳ ವಶಕ್ಕೆ ನೀಡಲು ಮುಂದಾಗಿರುವುದು ಒಟ್ಟಾರೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ದಿವಾಳಿತನಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದ್ದಾರೆ.

- Advertisement -

ರಾಜ್ಯ ಸರಕಾರದ ತಿದ್ದುಪಡಿ ಸುಗ್ರೀವಾಜ್ಞೆಗಳನ್ನು ವಾಪಾಸ್ ಪಡೆಯಬೇಕೆಂದು ಒತ್ತಾಯಿಸುವ ಸಲುವಾಗಿ ರಾಜ್ಯದ ರೈತ ಸಂಘಟನೆಗಳು, ದಲಿತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ಸೆ. 21ರಂದು ‘ಬೃಹತ್ ಪ್ರತಿಭಟನಾ ರ್ಯಾಲಿ’ ಹಾಗೂ ‘ಚಳವಳಿಗಳ ಪರ್ಯಾಯ ಅಧಿವೇಶನ’ ನಡೆಸಲು ನಿರ್ಧರಿಸಲಾಗಿದೆ. ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಈ ಪ್ರತಿಭಟನೆ ನಡೆಯಲಿದೆ. ಬೆಂಗಳೂರಿನಲ್ಲಿ ನಡೆಯುವ ಈ ಅಧಿವೇಶನ ಮತ್ತು ಸತ್ಯಾಗ್ರಹವನ್ನು ಬೆಂಬಲಿಸಿ ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲೂ ಧರಣಿ, ಪ್ರತಿಭಟನೆ ನಡೆಸಿ ಸರಕಾರ ಹೊರಡಿಸಿರುವ ಸುಗ್ರೀವಾಜ್ಞೆಗಳನ್ನು ಹಿಂಪಡೆಯಲು ಒತ್ತಾಯಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.

ಇದಕ್ಕೆ ಪೂರಕವಾಗಿ ಸೆ.16ರಂದು ರಾಜ್ಯದ ಎಲ್ಲಾ ಶಾಸಕರ ಕಚೇರಿಗಳ ಮುಂದೆ ಧರಣಿ ನಡೆಸಿ ಹಕ್ಕೊತ್ತಾಯ ಪತ್ರಗಳನ್ನು ಮಂಡಿಸಲಾಗುವುದು ಎಂದೂ ಅವರು ತಿಳಿಸಿದ್ದಾರೆ. ಎಲ್ಲಾ ಜನಪರ ಸಂಘಟನೆಗಳು ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಕೃಷಿ ಬೆಲೆ ಆಯೋಗದ ಮಾಜಿ ಅಧ್ಯಕ್ಷ ಡಾ. ಪ್ರಕಾಶ್ ಕಮ್ಮರಡಿ, ಕರ್ನಾಟಕದ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ದಲಿತ ಸಂಘರ್ಷ ಸಮಿತಿ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು, ಹಿಂದ್ ಮಜದೂರ್ ಕಿಸಾನ್ ಪಂಚಾಯತ್ ಮುಖ್ಯಸ್ಥ ಕಾಳಪ್ಪ ಮುಂತಾದವರು ಉಪಸ್ಥಿತರಿದ್ದರು

Join Whatsapp