ಲಖನೌ: ರೈಲಿನಲ್ಲಿ ಟಿಕೆಟ್ ಇಲ್ಲದೆ ಪ್ರಯಾಣಿಸಿ 20 ಪೊಲೀಸರು ಪ್ರಯಾಣ ಟಿಕೆಟ್ ಪರೀಕ್ಷಕ (ಟಿಟಿಇ)ನ ಕೈಯಲ್ಲಿ ಸಿಕ್ಕಿಬಿದ್ದಿರುವ ಘಟನೆ ಉತ್ತರ ಪ್ರದೇಶದಲ್ಲಿ ವರದಿಯಾಗಿದೆ.
ದೆಹಲಿಯಿಂದ ಬಿಹಾರದ ರಾಜ್ಗಿರ್ಗೆ ತೆರಳುತ್ತಿದ್ದ ಶ್ರಮಜೀವಿ ಎಕ್ಸ್ಪ್ರೆಸ್ ರೈಲಿನಲ್ಲಿ ಟಿಟಿಇ ಬರೇಲಿ ಮತ್ತು ಲಖನೌ ನಡುವೆ ಟಿಕೆಟ್ ಪರೀಕ್ಷಿಸಲು ಬಂದಾಗ 20 ಪೊಲೀಸರು ಸಿಕ್ಕಿಬಿದ್ದಿದ್ದಾರೆ.
ಟಿಟಿಇ ಪೊಲೀಸರ ಬಳಿ ದಂಡ ಪಾವತಿಸಲು ಕೇಳಿಕೊಂಡಾಗ ಪೊಲೀಸರು ಧರಿಸಿದ್ದ ಯೂನಿಫಾರ್ಮ್ ತೋರಿಸಿ ಪೊಲೀಸ್ ಇಲಾಖೆಗೆ ಕಪ್ಪು ಮಸಿ ಬಳಿದಿದ್ದಾರೆ. “ಒಂದು ವೇಳೆ ನನ್ನನ್ನು ಹಿಡಿದರೆ ನಿಮ್ಮ ವಿರುದ್ಧ ಅನೇಕ ಪ್ರಕರಣಗಳನ್ನು ಬರೆದು ನೀವು ಜೀವನ ಪೂರ್ತಿ ನನ್ನನ್ನು ನೆನಪಿಸಿಕೊಳ್ಳುವಂತೆ ಮಾಡುತ್ತೇನೆ” ಎಂದು ಓರ್ವ ಪೊಲೀಸ್ ಟಿಟಿಇಗೆ ಧಮ್ಕಿ ಹಾಕಿದ್ದಾರೆ. “ನೀವು ದಂಡವನ್ನು ಪಡೆದರೆ, ನೀವೇನು ರೈಲ್ವೆ ಸಚಿವರಾಗುವುದಿಲ್ಲ” ಎಂದು ಮತ್ತೊರ್ವ ಟಿಟಿಇ ಕುರಿತು ವ್ಯಂಗ್ಯವಾಡಿದ್ದಾರೆ.
ಇಡೀ ಘಟನೆಯನ್ನು ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು, ಭಾರಿ ವೈರಲ್ ಆಗಿದೆ.
ಟಿಟಿಇ ಪೊಲೀಸರ ಬೆದರಿಕೆಗಳಿಗೆ ಬಗ್ಗದೆ ಎಲ್ಲರಿಂದಲೂ ದಂಡವನ್ನು ವಸೂಲಿ ಮಾಡಿ ಅಲ್ಲಿಂದ ಕಳಿಹಿಸಿದ್ದಾರೆ. ರೈಲಿನಲ್ಲಿ ಒಟ್ಟು 45 ಮಂದಿ ಪ್ರಯಾಣಿಕರು ಟಿಕೆಟ್ ಇಲ್ಲದೆ ಪ್ರಯಾಣಿಸುತ್ತಿದ್ದರು. ಅದರಲ್ಲಿ 20 ಮಂದಿ ಪೊಲೀಸರಾಗಿದ್ದರು. ಎಲ್ಲರಿಂದ ಒಟ್ಟು 22,350 ರೂ. ದಂಡವನ್ನು ಸಂಗ್ರಹಿಸಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ಪೊಲೀಸರ ನಡೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ತಪ್ಪು ಮಾಡುವ ಜನರಿಗೆ ಬುದ್ಧಿ ಹೇಳಬೇಕಾದ ಪೊಲೀಸರೇ ಹೀಗೆ ಮಾಡಿದರೆ ನಾವು ಯಾರನ್ನೂ ನಂಬಲು ಸಾಧ್ಯವಿಲ್ಲ ಎಂದು ಅನೇಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.