ಟೂಲ್ ಕಿಟ್ ಪ್ರಸಂಗ

Prasthutha|

-ಫಯಾಝ್ ದೊಡ್ಡಮನೆ

- Advertisement -

ಕಳೆದ ಕೆಲವು ದಿನಗಳಿಂದೀಚೆಗೆ ದೇಶದೆಲ್ಲೆಡೆ ಟೂಲ್‌ ಕಿಟ್‌ ನದ್ದೇ ಸುದ್ದಿ. ಟೂಲ್‌ ಕಿಟ್‌ಗಳನ್ನು ಬಳಸುವ ಆಂದೋಲನ ಜೀವಿಗಳು ದೇಶದ ಹೊಸ ಆಶಾಕಿರಣ ಜೀವಿಗಳಾಗಿ ಉದಯಿಸಿದ್ದಾರೆ. ಡಿಜಿಟಲ್ ಇಂಡಿಯಾದ ಮೂಲಕ ದೇಶವನ್ನೇ ಬದಲಾಯಿಸುತ್ತೇವೆ ಎಂದ ಪ್ರಧಾನಿ ಮತ್ತು ಪ್ರಭುತ್ವಗಳು ಟೂಲ್‌ ಕಿಟ್ ಎಂಬ ಡಿಜಿಟಲ್ ಆ್ಯಕ್ಟಿವಿಸಂಗೆ ತುಸು ಹೆಚ್ಚೇ ಹೆದರಿದಂತಿದೆ. ವಿಶ್ವದಾದ್ಯಂತ ಹೊಸ ಭಾಷ್ಯ ಬರೆಯುತ್ತಿರುವ ಡಿಜಿಟಲ್ ಆ್ಯಕ್ಟಿವಿಸಂ ನಮ್ಮ ನೆಲದಲ್ಲೂ ಸದ್ದು ಮಾಡಿ ಯುವ ಸಮೂಹವನ್ನು ಬಡಿದೆಬ್ಬಿಸುತ್ತಿದೆ.

ಏನಿದು ಟೂಲ್‌ ಕಿಟ್?

- Advertisement -

ಯಾವುದೇ ವಿಷಯವನ್ನು ಪ್ರಸ್ತುತಪಡಿಸಲು ಅಗತ್ಯವಾದ ಎಲ್ಲ ಮಾಹಿತಿಗಳನ್ನೊಳಗೊಂಡ ದಾಖಲೆಯೇ ಟೂಲ್‌ಕಿಟ್. ತಾವು ಪ್ರಸ್ತುತಪಡಿಸುವ ವಿಷಯಕ್ಕೆ ಅಗತ್ಯವಾದ ಅರ್ಜಿಗಳು, ಸಲಹೆಗಳು, ಸೂಚನೆಗಳು ಹಾಗೂ ತಮ್ಮ ಬೇಡಿಕೆಯ ಪೂರೈಕೆಗಾಗಿ ಯೋಜಿಸಿಟ್ಟಿರುವ ಕಾರ್ಯಕ್ರಮಗಳ ರೂಪುರೇಷೆಗಳೂ ಕೂಡಾ ಈ ಟೂಲ್‌ ಕಿಟ್ ಒಳಗೊಂಡಿರುತ್ತದೆ. ಪ್ರಸ್ತುತ ಡಿಜಿಟಲ್ ಆ್ಯಕ್ಟಿವಿಸಂ ಮೂಲಕ ಇಡೀ ಜಗತ್ತೇ ಒಂದಾಗಿ ಗಡಿ ದೇಶಗಳ ಎಲ್ಲೆಗಳನ್ನು ಮೀರಿದ ಆ್ಯಕ್ಟಿವಿಸಂಗೆ ಈ ಟೂಲ್‌ ಕಿಟ್‌ ಗಳು ತಕ್ಕುದಾದ ಮಾಹಿತಿಯನ್ನು ನೀಡುತ್ತಿವೆ. ಮತ್ತು ಇದರ ಮೂಲಕ ಕಾರ್ಯಕರ್ತರು ತಮಗೆ ಬೇಕಾದ ಜ್ಞಾನವನ್ನು ಸಂಪಾದಿಸಿ, ಆತ್ಮವಿಶ್ವಾಸದೊಂದಿಗೆ ತಮ್ಮ ವಿಷಯಕ್ಕನುಗುಣವಾದ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಗ್ರೇಟಾ ಥನ್‌ ಬರ್ಗ್ ಸ್ವಿಡಿಷ್ ಪ್ರಜೆಯಾದರೂ, ಜಗತ್ತಿನ ಹವಾಮಾನ ಬದಲಾವಣೆಯ ಹೋರಾಟದೊಂದಿಗೆ ಇಡೀ ಜಗತ್ತಿಗೆ ಬೇಕಾದವರು. ಸಣ್ಣ ವಯಸ್ಸಿನಲ್ಲಿಯೇ ಸ್ವಿಡಿಷ್ ಪಾರ್ಲಿಮೆಂಟ್ ಮುಂದೆ ಹವಾಮಾನ ಬದಲಾವಣೆಯ ತಡೆಯುವಿಕೆಗೆ ಸರಿಯಾದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಬೇಕು ಎಂದೇ ಶಾಲಾ ದಿನಗಳನ್ನು ತೊರೆದು ಕಟಿಬದ್ಧವಾಗಿಯೇ ನಿಂತವರು. ಫ್ರೈಡೆ ಫಾರ್ ಫ್ಯೂಚರ್ ಎಂಬ ಘೋಷಣೆಯೊಂದಿಗೆ ಮುಂದುವರಿದ ದೇಶಗಳ ವಿಲಾಸಿ ಜೀವನದ ವಿರುದ್ಧ ಬಲವಾಗಿಯೇ ದನಿಯೆತ್ತಿದವರು. ಜಗತ್ತಿನ ಇತರ ವಿಷಯಗಳಿಗೆ ಸ್ಪಂದಿಸುವಂತೆ, ಭಾರತೀಯ ರೈತರ ಹೋರಾಟದ ಬಗ್ಗೆಯೂ ಸಹಜವೆಂಬಂತೆ ಮಾತನಾಡಿದ್ದಾರೆ. ಗ್ರೇಟಾ ಬಳಸಿದ ಟೂಲ್‌ ಕಿಟ್ ದಾಖಲೆಗಳನ್ನು ಬದಲಾಯಿಸಿದ್ದೇ ಈಗ ದಿಶಾ ರವಿ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ದೆಹಲಿ ಪೊಲೀಸರು ನೀಡಿರುವ ಕಾರಣ. ಜೊತೆಗೆ ಮುಂಬೈ ವಕೀಲೆ ನಿಕಿತಾ ಜೇಕಬ್ ಮತ್ತು ಇಂಜಿನಿಯರ್ ಶಂತನು ಮಲಿಕ್ ವಿರುದ್ಧ ಕೂಡಾ ಪ್ರಕರಣ ದಾಖಲಿಸಿದ್ದಾರೆ.

ಗ್ರೇಟಾ ಬಳಸಿದ ಟೂಲ್‌ಕಿಟ್ ಮೋದಿ ಸರಕಾರಕ್ಕೆ ಅಂತಾರಾಷ್ಟ್ರೀಯ ಪಿತೂರಿ ಎಂಬಂತೆ ಕಂಡಿರುವುದೇ ದುರಂತ. ಕಾಮಾಲೆ ಕಣ್ಣಿನ ಸರಕಾರಕ್ಕೆ ಭಿನ್ನದನಿಗಳೆಲ್ಲವೂ ಅಂತಾರಾಷ್ಟ್ರೀಯತೆ ಮಟ್ಟಕ್ಕೆ ತಲುಪುತ್ತಿವೆ. ಡಿಜಿಟಲ್ ಆ್ಯಕ್ಟಿವಿಸಂಗೆ ಬಳಸುವ ಟೂಲ್‌ ಕಿಟ್ ಕೂಡಾ ಸರಕಾರವನ್ನು ಈ ಮಟ್ಟಕ್ಕೆ ಬೆದರಿಸುತ್ತದೆ ಎಂದರೆ ರೈತರ ಹೋರಾಟದ ತೀವ್ರತೆಯ ಅರಿವಾಗಬಹುದು. ಜನವರಿ 26ರ ಹಿಂಸಾಚಾರಕ್ಕೆ ಪೂರ್ವಯೋಜಿತ ಸಂಚು ಮತ್ತು ಅದಕ್ಕಾಗಿಯೇ 1-8 ಕೋಟಿ ರೂಪಾಯಿಯನ್ನು ಸಿಖ್ ಫಾರ್ ಜಸ್ಟಿಸ್ ಸಂಘಟನೆಯು ನೀಡಿದೆ ಎಂದು ದೆಹಲಿ ಪೊಲೀಸರು ಎಫ್‌ ಐ ಆರ್‌ ನಲ್ಲಿ ಉಲ್ಲೇಖಿಸಿದ್ದಾರೆ. ಪೊಯೆಟಿಕ್ ಜಸ್ಟಿಸ್ ಫೌಂಡೇಶನ್ ಎಂಬ ಸಂಘಟನೆಯ ವ್ಯಕ್ತಿಗಳ ಜೊತೆಗೂಡಿ ದಿಶಾ ಸಂಚು ರೂಪಿಸಿದ್ದಾಳೆ ಎಂದೂ ಎಫ್‌ ಐ ಆರ್ ಪ್ರತಿಪಾದಿಸುತ್ತಿದೆ. ಪೊಯೆಟಿಕ್ ಜಸ್ಟೀಸ್ ಫೌಂಡೇಶನ್ ಎಂಬುವುದು ನಿಷೇಧಿತ ಸಂಘಟನೆಯೇ ಮತ್ತು ಅವರ ಸ್ಥಾಪಕರ ಮೇಲೆ ಎಫ್‌ ಐ ಆರ್ ದಾಖಲಿಸಲಾಗಿದೆಯೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಸರಕಾರದ ಪರ ವಕೀಲರು ಉತ್ತರಿಸಿದ್ದಾರೆ.

ಕೇವಲ ಟ್ವೀಟ್‌ ಗಳ ಆಧಾರದ ಮೇಲೆ ಈ ನಿರ್ಣಯಕ್ಕೆ ಬರಲಾಗಿದೆ ಎಂಬ ಅವರ ಪೊಳ್ಳುವಾದವು ಸರಕಾರದ ನೇರ ಹಸ್ತಕ್ಷೇಪವನ್ನು ಎತ್ತಿ ತೋರಿಸುತ್ತದೆ ಮತ್ತು ಇದೊಂದು ಯೋಜಿತ ತನಿಖೆ ಎಂದು ಮತ್ತೊಮ್ಮೆ ನಿರೂಪಿಸುತ್ತದೆ. ಸೆಕ್ಷನ್ 124ಎ ಪ್ರಕಾರ, ಸರಕಾರದ ವಿರುದ್ಧ ಅಸಮಾಧಾನವನ್ನು ಪ್ರಚೋದಿಸುವುದೇ ದೇಶದ್ರೋಹ ಪ್ರಕರಣ ಎನಿಸಿಕೊಳ್ಳುತ್ತದೆ. ಈ ವ್ಯಾಖ್ಯೆಯಲ್ಲೇ ದೋಷವಿದೆ ಎಂದು ಲಾಗಾಯ್ತಿನಿಂದಲೂ ಸಂವಿಧಾನ ತಜ್ಞರು ವಾದಿಸುತ್ತಲೇ ಇದ್ದಾರೆ. ಆದರೆ ಬಿಜೆಪಿ ಸರಕಾರಕ್ಕೆ ಈ ಸೆಕ್ಷನ್ ವರವಾಗಿಯೇ ಪರಿಣಮಿಸಿದೆ. ಸರಕಾರದ ವಿರುದ್ಧ ಪರಿಣಾಮಕಾರಿ ಧ್ವನಿಗಳಾಗಿ ಜನಾಭಿಪ್ರಾಯಕ್ಕೆ ಕಾರಣವಾಗುವ ಪ್ರತಿ ಸಂದರ್ಭದಲ್ಲೂ ಈ ಸೆಕ್ಷನ್ ಮೂಲಕ ದೇಶದ್ರೋಹದ ಪಟ್ಟವನ್ನು ನೀಡುತ್ತಿದೆ. ಕಾಶ್ಮೀರಕ್ಕೆ ಸಂಬಂಧಿಸಿದ ಭಿನ್ನಧ್ವನಿಗಳಿಂದ ಹಿಡಿದು ಪೌರತ್ವ ಹೋರಾಟ, ನಾಟಕಗಳ ಪ್ರದರ್ಶನ, ಕವನಗಳ ಭಿನ್ನ ಧ್ವನಿ, ಪ್ರಧಾನಿಗೆ ಬರೆದ ಪತ್ರಗಳೂ ಕೂಡಾ ದೇಶದ್ರೋಹಗಳಾಗುತ್ತಿವೆ. ಹತ್ರಾಸ್ ಅತ್ಯಾಚಾರದ ವಿರುದ್ಧ ಮಾತನಾಡಿದರೂ ದೇಶದ್ರೋಹವಾಗುತ್ತಿರುವುದು ಹೊಸ ಪರಿಭಾಷೆ. ದಶಕದ ಇತಿಹಾಸವನ್ನು ಅವಲೋಕಿಸಿದರೆ, ಯುಪಿಎ-2  ಅವಧಿಯಲ್ಲಿ 279 ಇದ್ದ ಪ್ರಕರಣಗಳ ಸಂಖ್ಯೆ ಎನ್‌ ಡಿಎ ಅವಧಿಯಲ್ಲಿ 519ಕ್ಕೇರಿದೆ. ಉ.ಪ್ರ ಮುಖ್ಯಮಂತ್ರಿ ಆದಿತ್ಯನಾಥ್ ವಿರುದ್ಧ ಮಾತನಾಡಿದ 144 ಪ್ರಕರಣಗಳಾದರೆ, ಪ್ರಧಾನಿ ವಿರುದ್ಧದ 149 ಧ್ವನಿಗಳಿಗೆ ಪ್ರಕರಣ ದಾಖಲಿಸಲಾಗಿದೆ; ಆರೋಪಿಗಳ ಒಟ್ಟು ಸಂಖ್ಯೆ 10 ಸಾವಿರಕ್ಕೂ ಹೆಚ್ಚು. ಟೂಲ್‌ ಕಿಟ್ ಪ್ರಕರಣ ಇದೀಗ ಹೊಸ ಸೇರ್ಪಡೆಯಾಗಿದೆ.

‘ಆಂದೋಲನ ಜೀವಿ’

ಇಂಡಿಯಾದ ಸಂಸತ್ತಿನಲ್ಲಿ ರಾಷ್ಟ್ರಪತಿ ಭಾಷಣಕ್ಕೆ ವಿವಿಧ ಪಕ್ಷಗಳ ಮುಖಂಡರು ಪ್ರತಿಕ್ರಿಯಿಸಿದ ನಂತರ ಪ್ರಧಾನಿಗಳೂ ಕೂಡಾ ವಂದನೆಯರ್ಪಿಸುವುದು ವಾಡಿಕೆ. ಈ ಪ್ರಕ್ರಿಯೆಗೆ ಗಾಂಭೀರ್ಯದ ಸೊಬಗಿದೆ; ಹಾಗೂ ಸಂಸತ್ತಿನ ವಿಶಿಷ್ಟ ದಾಖಲೆಯಾಗಿ ಅಚ್ಚುಗೊಳ್ಳುತ್ತದೆ. ತೂರಿಬಂದ ವಿವಿಧ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ವಿಶ್ವಾಸಗಳಿಸಬೇಕಾದ ಪ್ರಧಾನಿ ಮೋದಿ, ರೈತರ ಹೋರಾಟ ಮತ್ತು ಇತರ ಚಳುವಳಿಗಳನ್ನು ಹೀಯಾಳಿಸುವ ಕೆಲಸಕ್ಕೆ ಇಳಿದದ್ದು ಘನತೆಗೆಟ್ಟ ಸ್ಥಿತಿಗಿರುವ ದ್ಯೋತಕ. ಹಲವಾರು ವಿಷಯಗಳಲ್ಲಿ ಜನರ ಧ್ವನಿಯಾಗುತ್ತಿರುವ ಹೋರಾಟಗಾರರನ್ನು ‘ಆಂದೋಲನ ಜೀವಿ’ ಎಂದೂ, ಇವರು ಹೋರಾಟಗಳನ್ನೇ ವೃತ್ತಿಯಾಗಿಸಿದ್ದಾರೆ ಎಂದು ಹೇಳುವ ಮೂಲಕ ಅವಮಾನ ಮಾಡುವ ಪ್ರಯತ್ನ ಮಾಡಿದ್ದಾರೆ. ತಾನೊಬ್ಬ ತುರ್ತುಪರಿಸ್ಥಿತಿಯ ವಿರುದ್ಧ ಆಂದೋಲನದಲ್ಲಿ ರಾಜಕೀಯಕ್ಕಿಳಿದ ಅಪ್ಪಟ ಹೋರಾಟಗಾರ ಎಂದು ತನ್ನನ್ನು ತಾನು ಬಿಂಬಿಸುವ ಪ್ರಧಾನಿ ಆಂದೋಲನಗಳಿಗೆ ಹೆದರುತ್ತಿರುವುದು ವಿಪರ್ಯಾಸ. ತುರ್ತುಪರಿಸ್ಥಿತಿಯ ದಿನಗಳನ್ನು ಮೆಲುಕು ಹಾಕುವ ಬಿಜೆಪಿಯ ಮೇರು ನಾಯಕತ್ವ, ರಥಯಾತ್ರೆಯ ಆಂದೋಲನದ ಮೂಲಕ ಕೋಮು ಸಂಘರ್ಷಗಳನ್ನು ಹುಟ್ಟಿಸಿ ಅಧಿಕಾರ ಹಿಡಿದ ಬಿಜೆಪಿ ಪಕ್ಷಕ್ಕೆ ನೈಜ ಜನಪರ ಆಂದೋಲನಗಳು ಈಗ ಕಹಿ ಅನುಭವ ನೀಡುತ್ತಿರುವಾಗ ಆಂದೋಲನ ಜೀವಿಗಳ ಬಗ್ಗೆ ಭಯಗೊಂಡಿರುವುದು ಸಹಜವಾಗಿಯೇ ಇದೆ. ತಮ್ಮ ವೈಫಲ್ಯದ ಬೆತ್ತಲೆ ಜಗತ್ತು ಮತ್ತಷ್ಟು ನಗ್ನಗೊಳ್ಳುತ್ತಿರುವಾಗ ಸ್ವಾಭಾವಿಕವಾದ ಆತಂಕ ಪ್ರಧಾನಿಗಳನ್ನು ಘನತೆ ಬಿಟ್ಟು ಮಾತನಾಡಿಸುವ ಹಂತಕ್ಕೆ ತಂದು ನಿಲ್ಲಿಸಿದೆ. ಆಂದೋಲನ ಜೀವಿಗಳೇ ಪ್ರಸಕ್ತ ಇಂಡಿಯಾದ ಭರವಸೆ.

ಪ್ರಜಾಪ್ರಭುತ್ವವನ್ನು ಬುಡಮೇಲುಗೊಳಿಸಿ ಕಾರ್ಪೊರೇಟ್ ಕುಳಗಳನ್ನು ಬಹಿರಂಗವಾಗಿ ಪೋಷಿಸುತ್ತಿರುವ ಫ್ಯಾಶಿಸ್ಟ್ ಸರ್ವಾಧಿಕಾರ ಸರಕಾರವನ್ನು ಹೋರಾಟಗಾರರು ನಿರಂತರವಾಗಿ ವಿರೋಧಿಸುತ್ತಿದ್ದಾರೆ. ಈ ಮೂಲಕ ಅವರು ತಮ್ಮ ಅಮೂಲ್ಯ ಜೀವಗಳನ್ನು ಪಣಕ್ಕಿಟ್ಟಿರುವುದು ಸುಳ್ಳಲ್ಲ. ಇತರರಂತೆ ವೌನವಾಗಿ ಜೀವಿಸುವ ಆಯ್ಕೆ ತಮ್ಮ ಮುಂದಿದ್ದರೂ ಅದನ್ನು ಅಪ್ಪಿಕೊಳ್ಳದೆ ಕಷ್ಟದ ಹಾದಿಗಳನ್ನು ತುಳಿದು ನಿರಂತರ ಕೇಸುಗಳಿಗೆ ಬಲಿಯಾಗುತ್ತಿದ್ದರೂ ಜನಹಿತಕ್ಕಾಗಿ ತಮ್ಮ ಹೋರಾಟಗಳನ್ನು ಮತ್ತೆ ಮತ್ತೆ ಸಂಘಟಿಸುತ್ತಿದ್ದಾರೆ. ಅದರಲ್ಲಿ ಕೆಲವು ಭಾಗ ಅಧಿಕಾರದ ಲಾಲಸೆಗಳಿಗೆ ಬಲಿಯಾಗಿ ಆಂದೋಲನ ಜೀವಿ ಪಟ್ಟವನ್ನು ಕಳೆದುಕೊಂಡರೆ, ಇನ್ನೊಂದು ಭಾಗ ಕೇಂದ್ರ ಸರಕಾರ ವಿವಿಧ ಕೇಸುಗಳಿಗೆ ಹೆದರಿ ಆಂದೋಲನ ಜೀವಿಗಳಾಗಿ ಉಳಿದಿಲ್ಲ. ಆದರೆ ಗೊಡ್ಡು ಬೆದರಿಕೆಗಳಿಗಾಗಲೀ, ನೈಜ ಬೆದರಿಕೆಗಳಿಗಾಗಿ ಹೆದರದೆ ತಮ್ಮನ್ನು ತಾವು ಕಷ್ಟಕ್ಕೆ ದೂಡುತ್ತಿರುವ ನೈಜ ಆಂದೋಲನ ಜೀವಿಗಳೇ ಇಂಡಿಯಾದ ನಿಜವಾದ ವಿರೋಧ ಪಕ್ಷಗಳಾಗಿ ಕೆಲಸ ಮಾಡುತ್ತಿರುವುದು. ಸಂಸತ್ತಿನಲ್ಲಿ ವಿರೋಧ ಪಕ್ಷಗಳು ವೌನ ಪಕ್ಷಗಳಾಗಿವೆ; ನೈಜ ವಿರೋಧಗಳನ್ನು ದಾಖಲಿಸುತ್ತಿಲ್ಲ. ಅಥವಾ ವಿರೋಧ ದಾಖಲಿಸಿಕೊಳ್ಳುವಾಗ ನಾಟಕಗಳನ್ನು ಮಾಡುತ್ತಿವೆ. ಅದರಿಂದಾಗಿ ಸೃಷ್ಟಿಯಾದ ನಿರ್ವಾತಗಳನ್ನು ಆಂದೋಲನ ಜೀವಿಗಳು ತುಂಬ ಬೇಕಾಯಿತು. ಜೆಎನ್‌ ಯು, ಜಾಮಿಯಾ ಮಿಲ್ಲಿಯಾದ ಆಂದೋಲನ ಜೀವಿಗಳಿಂದ ರೋಹಿತ್ ವೇಮುಲ ಹೋರಾಟಗಳಾಗಿರಬಹುದು ಯಾ ನಿರ್ಭಯಾ ಪರ ನಿಂತ ಯುವ ಸಮೂಹಗಳಾಗಿರಬಹುದು, ಎಲ್ಲರೂ ಆಂದೋಲನ ಜೀವಿಗಳೇ ಆಗಿದ್ದಾರೆ.

ಆಂದೋಲನ ಜೀವಿಗಳ ಸಂಖ್ಯೆ ಹಠಾತ್ ಏರಿಕೆಯಾದದ್ದು ಮತ್ತು ಆಂದೋಲನ ಜೀವಿಗಳಿಗೆ, ಆಂದೋಲನಗಳಿಗೆ ಹೊಸ ಭಾಷ್ಯ ಬರೆದದ್ದು ಸಿಎಎ ವಿರೋಧಿ ಹೋರಾಟಗಳು. 2014ರ ನಂತರ ಗೊಂದಲದಲ್ಲಿಯೇ ದಿನ ದೂಡುತ್ತಿದ್ದ ಇಂಡಿಯಾದ ನಾಗರಿಕರಿಗೆ ಸ್ಪಷ್ಟ ಬಹುಮತ ಇದ್ಯಾಗ್ಯೂ, ಬಿಜೆಪಿ ಸರಕಾರವನ್ನು ಅಲುಗಾಡಿಸಬಹುದು ಎಂದು ಧೈರ್ಯ ತುಂಬಿದ್ದು ಸಿಎಎ-ಎನ್‌ ಆರ್‌ ಸಿ ವಿರೋಧಿ ಚಳುವಳಿಗಳು. ಮುಸ್ಲಿಮರ ನಾಯಕತ್ವವಿದ್ದರೂ ಕೇವಲ ಮುಸ್ಲಿಮರಿಗೆ ಸೀಮಿತಗೊಳ್ಳದೆ ಇಡೀ ಇಂಡಿಯಾದ ಜನರನ್ನು ಒಳಗೊಳ್ಳುವಂತೆ ಮಾಡಿದ ಶ್ರೇಯಸ್ಸು ಇದಕ್ಕಿದೆ. ಆಗಿನ ಆಂದೋಲನ ಜೀವಿಗಳಿಗೆ ಆಹಾರಗಳನ್ನೊದಗಿಸಿದ ಪಂಜಾಬ್ ಆಂದೋಲನ ಜೀವಿಗಳು ಇಂದು ಸರಕಾರದ ವಿರುದ್ಧ, ಕೃಷಿ ಕಾನೂನುಗಳ ವಿರುದ್ಧ ಆಂದೋಲನಕ್ಕಿಳಿದಿದ್ದಾರೆ. ಈಗ ಅವರಿಗೆ ಸಕಲ ನೆರವುಗಳನ್ನು ನೀಡುತ್ತಿರುವ ಅಂದಿನ ಆಂದೋಲನ ಜೀವಿಗಳು. ವಾಕ್ಯುಪೈ ವಾಲ್ ಸ್ಟ್ರೀಟ್ ಮೂವ್ ಮೆಂಟ್ ಮೂಲಕ ಈಗಿನ ಪೀಳಿಗೆಗೆ ಹೊಸ ರೂಪದ ಚಳುವಳಿಯನ್ನು ಅಮೆರಿಕದ ಆಂದೋಲನ ಜೀವಿಗಳು ಕಲಿಸಿದರು. ಅದೇ ಪರಿಭಾಷೆಯು ಜಗತ್ತಿನ 82 ದೇಶಗಳ 951 ನಗರಗಳಿಗೂ ವ್ಯಾಪಿಸಿದಾಗ ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಂದೇ ಎಂದು ತೋರಿಸಿಕೊಟ್ಟಿದ್ದರು.

ದೆಹಲಿಯ ಶಾಹೀನ್‌ ಬಾಗ್ ರೂಪದ ಆಂದೋಲನವು ಅದರಿಂದ ಸ್ಫೂರ್ತಿಗೊಂಡ ಮುಂದುವರಿದ ರೂಪವೇ ಆಗಿದೆ. ರಿಹಾನ್ನಾ, ಗ್ರೇಟಾ ಥನ್‌ ಬರ್ಗ್‌ ರಂತವರೂ ತಮ್ಮ ಭಾಷೆಯಲ್ಲಿಯೇ ಹೇಳುವುದಾದರೆ ಆಂದೋಲನ ಜೀವಿಗಳು. ರೈತ ಹೋರಾಟಗಳನ್ನು ನಡೆಸುತ್ತಿರುವವರೂ ಆಂದೋಲನ ಜೀವಿಗಳೇ ಆಗಿದ್ದಾರೆ. ಮಯನ್ಮಾರಿನ ರೋಹಿಂಗ್ಯಾ ಜನರು, ಹಾಂಕಾಂಗ್‌ ನ ಯುವ ಹೋರಾಟಗಾರರು, ಫೆಲೆಸ್ತೀನಿನ ಸ್ವಾತಂತ್ರ್ಯ ಸೇನಾನಿಗಳು, ಟಿಯೆನ್‌ ಮೆನ್ ಸ್ಕ್ವೇರ್ ಹೋರಾಟಗಾರರು, ಜಾರ್ಜ್‌ ಫ್ಲಾಯ್ಡ್ ಗಾಗಿ ಮಿಡಿದ ಮನಸುಗಳು, ಆಫ್ರಿಕಾದ ನೀಗ್ರೋ ಹೋರಾಟಗಾರರು, ಅರಬ್ ಜಗತ್ತಿನ ಪ್ರಜಾಪ್ರಭುತ್ವದ ಪರವಾಗಿ ಹೋರಾಡಿದವರು ಸೇರಿದಂತೆ ಎಲ್ಲರೂ ಆಂದೋಲನ ಜೀವಿಗಳೇ ಆಗಿದ್ದಾರೆ. ಹಾಗಾಗಿ ಪ್ರಧಾನಿ ಮೋದಿಗೆ ಅದು ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿ (ಎಫ್ ಡಿಐ) ಎಂಬಂತೆ ಕಂಡಿದೆ. ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಂದೇ ಎಂಬಂತೆ ಇರುವಾಗ ‘ಫಾರಿನ್’ ಪದ ಬಳಕೆ ಉಚಿತವಲ್ಲ; ಎಲ್ಲರೂ ಜನರ ಮನಸ್ಸುಗಳಿಗೆ ಮಿಡಿಯುವ ಮನಗಳಾಗಿರುವುದರಿಂದ ಡಿಸ್ಟ್ರಕ್ಟಿವ್ ಆಗಿರದೆ ಕನ್‌ ಸ್ಟ್ರಕ್ಟಿವ್ ಎನಿಸಿಕೊಳ್ಳುತ್ತಾರೆ. ಎಲ್ಲರೂ ಜನಪರ ಐಡಿಯಾಲಜಿಯನ್ನೆ ಪ್ರಮುಖವಾಗಿಸಿದ್ದಾರೆ. ಹಾಗಾಗಿ ಮೋದಿಯ ಎಫ್ ಡಿಐ ತಂತ್ರವು ಟುಸ್ಸೆಂದಿರುವುದು ಸ್ವಾಭಾವಿಕವಾಗಿದೆ.

 ಪ್ರಧಾನಿಯ ‘ಆಂದೋಲನ ಜೀವಿ’ ಪದಬಳಕೆಯು ಹೋರಾಟಗಾರರಿಗೆ ಸ್ಫೂರ್ತಿಯನ್ನೇ ನೀಡಿದೆ. ಬಿಜೆಪಿ ಐಟಿ ಸೆಲ್‌ ಗೆ ಬೇಕಾಗಿ ಹೊಸ ಪದ ಪ್ರಯೋಗ ಮಾಡಿದ್ದಾರಾದರೂ, ಅದು ಹೋರಾಟಗಾರರಿಗೆ ಹೊಸ ಅಸ್ಮಿತೆಯಾಗಿ ಬದಲಾಗಿದೆ. ತಾವು ಉದುರಿಸಿದ ಮಂತ್ರ ತಮಗೆ ತಿರುಗುಮಂತ್ರವಾದಾಗ ಪ್ರಧಾನಿ ಮೋದಿಯೂ ಮೌನವಾಗಿದ್ದಾರೆ.

 ಜಗತ್ತಿನ ಆಂದೋಲನ ಜೀವಿಗಳೆಲ್ಲರೂ ಒಟ್ಟು ಸೇರುತ್ತಿರುವುದು ಈಗ ಡಿಜಿಟಲ್ ಆ್ಯಕ್ಟಿವಿಸಂ ಮೂಲಕ ಎಂದರೆ ತಪ್ಪಲ್ಲ. ಹಾಗಾಗಿ ಈ ರೂಪದ ಆ್ಯಕ್ಟಿವಿಸಂಗೆ ಟೂಲ್‌ ಕಿಟ್ ಬಹಳ ಅಗತ್ಯವೇ ಆಗಿದೆ. ರಿಹಾನ್ನಾಳ ಕೆಲವು ಪದದ ಟ್ವೀಟ್‌ ಗೆ ಇಂಡಿಯಾದ ಸಿನಿಮಾ, ಕ್ರಿಕೆಟ್ ಜಗತ್ತಿನ ಅಂಜುಬುರುಕರೆಲ್ಲರೂ ಬೆವರು ಸುರಿಸಬೇಕಾಗಿ ಬಂದಿರುವುದು ಡಿಜಿಟಲ್ ಆ್ಯಕ್ಟಿವಿಸಂಗೆ ಸಿಗುತ್ತಿರುವ ಯಶಸ್ಸುಗಳೇ ಆಗಿವೆ. ಹಾಗಾಗಿ ಒಕ್ಕೂಟ ಸರಕಾರ ಈ ರೀತಿಯಾಗಿ ಭಯಗೊಂಡಿರುವುದು. ಇದೀಗ ಐಟಿ ಕಾಯಿದೆಗಳನ್ನು ಇನ್ನಷ್ಟು ಬಿಗಿಗೊಳಿಸಲು ಪ್ರಯತ್ನಿಸಬಹುದು. ಟೂಲ್‌ ಕಿಟ್ ಪ್ರಕರಣ ಕೂಡ ಬೆದರಿಸುವ ಮತ್ತೊಂದು ತಂತ್ರವಷ್ಟೆ. ಯಾವುದೇ ಬೆದರಿಸುವ ಕಾಯಿದೆ ಬಂದರೂ ಆಂದೋಲನ ಜೀವಿಗಳಿಗೆ ‘ಅದೇನು ಹೊಸದಲ್ಲ’ ಎಂಬ ಸಿನಿಕತನ ಇದ್ದೇ ಇರುತ್ತದೆ.

Join Whatsapp