ಪ್ರಜಾಪ್ರಭುತ್ವ ರಕ್ಷಣೆಗೆ ಜಾತ್ಯತೀತ ಪಕ್ಷಗಳ ಒಗ್ಗಟ್ಟು ಅನಿವಾರ್ಯ: ಎಸ್.ಕ್ಯೂ.ಆರ್. ಇಲ್ಯಾಸ್

Prasthutha|

ಮಂಗಳೂರು: ದೇಶದಲ್ಲಿ ಅವಮಾನಕರ ರೀತಿಯ ಆಡಳಿತವಿದೆ. ಕಳೆದ ಎಂಟು ವರ್ಷಗಳಿಂದ ಬಿಜೆಪಿ ಸರ್ಕಾರ ಯಾವುದೇ ಚರ್ಚೆ ಇಲ್ಲದೆ, ಪ್ರಜಾಪ್ರಭುತ್ವದ ಇತರ ಮೂರು ಅಂಗಗಳನ್ನು ಕತ್ತಲಲ್ಲಿಟ್ಟು ಆಡಳಿತ ನಡೆಸುತ್ತಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ರಾಷ್ಟ್ರೀಯ ಅಧ್ಯಕ್ಷ ಎಸ್. ಕ್ಯೂ. ಆರ್. ಇಲ್ಯಾಸ್ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಾಂಗ, ನ್ಯಾಯಾಂಗ, ಮಾಧ್ಯಮಗಳನ್ನು ಆಳುವ ಈಗಿನ ಶಾಸಕಾಂಗವು ಹಿಂಡಿ ಹಿಪ್ಪೆ ಮಾಡಿದೆ. ಇಲ್ಲವೇ ಮುಷ್ಟಿಯಲ್ಲಿ ಇಟ್ಟುಕೊಂಡಿದೆ. ಬಾಬರಿ ಮಸೀದಿ ಒಡೆದಾಗಿನಿಂದ ಬಹುತ್ವದ ಈ ದೇಶದಲ್ಲಿ ಮೋದಿ ಸರಕಾರವು ಜನರನ್ನು ಸಂಕಷ್ಟಕ್ಕೆ ತಳ್ಳಿದೆ. ದ್ವೇಷ ಭಾಷಣವೇ ಅಭಿವೃದ್ಧಿ ಕಾರ್ಯಕ್ರಮ ಎನ್ನುವಂತೆ ಮೋದಿ ಸರಕಾರವು ವರ್ತಿಸುತ್ತಿದೆ. ಈಗ ಸರ್ವಾಧಿಕಾರ ಇದೆಯೇ ಹೊರತು ಪ್ರಜಾಪ್ರಭುತ್ವ ಇಲ್ಲ ಎಂದು ಅವರು ಹೇಳಿದರು.
ಈಗ ಎಲ್ಲ ಕಡೆ ಆಡಳಿತ ಮರೆತು ಮೂರ್ತಿ, ಲಿಂಗಗಳನ್ನು ಹುಡುಕುವ ಕೆಲಸ ನಡೆಯುತ್ತಿದೆ. ಈ ಆಡಳಿತದ ವಿರುದ್ಧ ಬಂಡೇಳದೆ ಬೇರೆ ದಾರಿ ಈಗ ಜನರಿಗೆ ಉಳಿದಿಲ್ಲ. ನಾವು ಯಾವುದೇ ಸೌಹಾರ್ದ, ಸಾಮರಸ್ಯ ಕಾಣಲು ಅಸಾಧ್ಯವಾದ ಸ್ಥಿತಿ ಈಗ ನಿರ್ಮಾಣವಾಗಿದೆ. ಬುರ್ಖಾ, ಹಿಜಾಬ್ ಇವೆಲ್ಲ ಹೊಸದಲ್ಲ. ಮುಸ್ಲಿಮರ ಪುರಾತನ ಪದ್ಧತಿ. ಮಾರವಾಡಿ ಮಹಿಳೆಯರು ಮುಖಕ್ಕೆ ಬಟ್ಟೆ ಹಾಕಿಕೊಳ್ಳುತ್ತಾರೆ. ಇವಕ್ಕೆಲ್ಲ ಸಂವಿಧಾನದ ರಕ್ಷಣೆ ಇದೆ. ಅಲ್ಲದೆ ಇವೆಲ್ಲ ಸರಕಾರದ ಕೆಲಸವಲ್ಲ. ಸರಕಾರವು ಏನೇ ಇದ್ದರೂ ಜನಾಭಿವೃದ್ಧಿ ಕೆಲಸ ಮಾಡಬೇಕು ಎಂದು ಅವರು ಹೇಳಿದರು.
ಎಲ್ಲ ಜಾತ್ಯತೀತ ಪಕ್ಷಗಳು ಒಂದಾಗಬೇಕಾಗಿದೆ. ಎಸ್ಪಿ, ಕಾಂಗ್ರೆಸ್ ಮೊದಲಾದ ಪಕ್ಷಗಳ ಜೊತೆಗೆ ಮಾತನಾಡಿದ್ದೇವೆ. ಮೈತ್ರಿ ಸರಕಾರ ಎಂದರೆ ಅದರಲ್ಲಿ ಒಂದು ದೊಡ್ಡ ಪಕ್ಷ ಇರಬೇಕಾದುದು ಅನಿವಾರ್ಯ ಎಂದೂ ಇಲ್ಯಾಸ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಆರ್ಮುಗಂ, ರಾಜ್ಯಾಧ್ಯಕ್ಷ ತಾಹಿರ್ ಹುಸೇನ್, ಸಾಲ್ಯಾನ್, ಖಾನ್, ಹಬೀಬುರ್ ಖಾನ್ ಮೊದಲಾದವರು ಉಪಸ್ಥಿತರಿದ್ದರು.

Join Whatsapp