ತೃತೀಯ ರಂಗದ ರಚನೆ ಪ್ರಯತ್ನ: ದೇವೇಗೌಡರನ್ನು ಭೇಟಿಯಾದ ತೆಲಂಗಾಣ ಸಿಎಂ ಕೆಸಿಆರ್

Prasthutha|

ಬೆಂಗಳೂರು: ತೃತೀಯ ರಂಗದ ಕನಸಿನೊಂದಿಗೆ ಬಿಜೆಪಿ ಮತ್ತು ಕಾಂಗ್ರೆಸ್ ಹೊರತಾದ ನಾಯಕರ ಭೇಟಿಯಲ್ಲಿರುವ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರರಾವ್ ಗುರುವಾರ ಬೆಂಗಳೂರಿನಲ್ಲಿ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ಉಭಯ ನಾಯಕರು ತೃತೀಯ ರಂಗ ರಚನೆ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಪದ್ಮನಾಭನಗರದ ನಿವಾಸಕ್ಕೆ ಆಗಮಿಸಿದ ಕೆ.ಸಿ.ಚಂದ್ರಶೇಖರ್ ರಾವ್ ಅವರನ್ನು ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬರಮಾಡಿಕೊಂಡರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಹೈದರಾಬಾದ್ಗೆ ಭೇಟಿ ನೀಡಿರುವ ಸಂದರ್ಭದಲ್ಲೇ ಪ್ರಧಾನಿ ಕಾರ್ಯಕ್ರಮಕ್ಕೆ ಎರಡನೇ ಬಾರಿಯೂ ಗೈರು ಆಗಿರುವ ಕೆಸಿಆರ್, ದೇವೇಗೌಡರನ್ನು ಭೇಟಿ ಮಾಡಲು ಬೆಂಗಳೂರಿಗೆ ಬಂದಿದ್ದಾರೆ.
ಕಳೆದ ವಾರವಷ್ಟೇ ಕೆಸಿಆರ್ ಅವರು ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರ ಜೊತೆ ಪಂಜಾಬ್ ಪ್ರವಾಸ ಕೈಗೊಂಡಿದ್ದರು. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಮೇ 27ರಂದು ಮಹಾರಾಷ್ಟ್ರಕ್ಕೆ ತೆರಳಿ ಅಣ್ಣಾ ಹಜಾರೆ ಅವರನ್ನು ಭೇಟಿ ಮಾಡಲು ಚಂದ್ರಶೇಖರ್ ರಾವ್ ನಿರ್ಧರಿಸಿದ್ದಾರೆ.

Join Whatsapp