ಹೊಸದಿಲ್ಲಿ : ಕೇಂದ್ರ ಸರ್ಕಾರದ ವಿವಾದಿತ ಮೂರು ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ರಾಷ್ಟ್ರ ರಾಜಧಾನಿ ಹೊಸದಿಲ್ಲಿಯ ಗಡಿ ಪ್ರದೇಶಗಳಲ್ಲಿ ರೈತರು ನಡೆಸುತ್ತಿರುವ ಪ್ರತಿಭಟನೆಯು 100ನೇ ದಿನಕ್ಕೆ ಕಾಲಿಟ್ಟಿದೆ. ಇದರ ಅಂಗವಾಗಿ ಪ್ರತಿಭಟನಾ ನಿರತ ರೈತರೊಂದಿಗೆ ಐಕಮತ್ಯ ತೋರ್ಪಡಿಸುವ ಉದ್ದೇಶದೊಂದಿಗೆ ಮಾರ್ಚ್ 6ರಂದು ಕಪ್ಪು ದಿನವನ್ನಾಗಿ ಆಚರಿಸಲು ಸಂಯುಕ್ತ ಕಿಸಾನ್ ಮೋರ್ಚಾ ದೇಶದ ಜನತೆಗೆ ಕರೆ ನೀಡಿದೆ.
ಈ ಹಿನ್ನೆಲೆಯಲ್ಲಿ ಶನಿವಾರದಂದು 11 ಗಂಟೆಯಿಂದ ಒಟ್ಟು 5 ಗಂಟೆಗಳ ಕಾಲ ನೀವಿರುವ ಕಡೆಯೇ ನಿಮ್ಮ ಮನೆ, ಕಚೇರಿ ಮೆಲೆ ಕಪ್ಪು ಬಾವುಟ ಹಾರಿಸಬಹುದು ಅಥವಾ ನಿಮ್ಮ ವಾಹನಗಳಿಗೆ ಕಪ್ಪು ಬಾವುಟ ಕಟ್ಟಿಕೊಂಡು ಸಂಚರಿಸಬಹುದು ಅಥವಾ ನಿಮ್ಮ ತೋಳುಗಳಿಗೆ ಕಪ್ಪು ಪಟ್ಟಿ ಕಟ್ಟಿಕೊಂಡು ರೈತರ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಸಂಯುಕ್ತ ಕಿಸಾನ್ ಮೋರ್ಚಾ ದೇಶದ ಜನತೆಯೊಂದಿಗೆ ಕೇಳಿಕೊಂಡಿದೆ.
ನಾಳೆ ನವದಹೆಲಿಯ ಹೊರವಲಯದಲ್ಲಿ ಪ್ರಮುಖ ಹೆದ್ದಾರಿ ತಡೆ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ. ಈ 100 ದಿನಗಳ ಪ್ರತಿಭಟನೆಯ ನಂತರ ಸರ್ಕಾರದ ಮೇಲೆ ನೈತಿಕ ಒತ್ತಡ ಬೀರಲಿದೆ ಎಂದು ನಾವು ನಂಬುತ್ತೇವೆ. ಯಾಕೆಂದರೆ ಹವಾಮಾನವೂ ಹದೆಗೆಡುತ್ತಿದೆ. ಇದು ಸರ್ಕಾರವನ್ನು ದುರ್ಬಲಗೊಳಿಸಲಿದ್ದು, ನಮ್ಮೊಂದಿಗೆ ಮಾತುಕತೆಗಾಗಿ ಕುಳಿತುಕೊಳ್ಳಬೇಕಾಗುತ್ತದೆ ಎಂದು ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ವಕ್ತಾರ ದರ್ಶನ್ ಪಾಲ್ ತಿಳಿಸಿದ್ದಾರೆ.